More

    ಆನ್​ಲೈನ್ ಸೀರೆ ಆಸೆ ಮರ್ಯಾದೆ ಕಳೆದೀತು ಜೋಕೆ!

    ವಿ.ಕೆ.ರವೀಂದ್ರ ಕೊಪ್ಪಳ

    ಕೊಪ್ಪಳ: ನಿಮ್ಮ ಫೇಸ್​ಬುಕ್ ಖಾತೆಯಲ್ಲಿ ದುಬಾರಿ ಬೆಲೆಯ ಸೀರೆಗಳಿಗೆ ಅರ್ಧಕ್ಕರ್ಧ ಡಿಸ್ಕೌಂಟ್ ನೀಡುವ ಜಾಹೀರಾತು ಬರುತ್ತಿದೆಯೇ? ಹೌದು ಎಂದಾದಲ್ಲಿ ಖರೀದಿಸುವ ಮುನ್ನ ಎಚ್ಚರ ವಹಿಸಿ. ಕೊಂಚ ಮೈಮರೆತರೂ ಹಣದ ಜತೆಗೆ ನಿಮ್ಮ ಮಾನ, ಮರ್ಯಾದೆಯೂ ಹರಾಜಾಗಬಹುದು. ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆನ್​ಲೈನ್ ಮೂಲಕ ಟೋಪಿ ಹಾಕುವ ವಂಚಕರ ಹಲವು ಕೃತ್ಯಗಳು ಬೆಳಕಿಗೆ ಬಂದಿವೆ.

    ಈಗ ನಗದು ರಹಿತ ಆನ್​ಲೈನ್ ವಹಿವಾಟಿನ ಕಾಲ. ಫೇಸ್​ಬುಕ್, ವಾಟ್ಸ್​ಆಪ್ ಗ್ರೂಪ್ ಮೂಲಕ ನಡೆಯುವ ಸಮಯ ಉಳಿಸುವ ವ್ಯವಹಾರ ಎಲ್ಲರಿಗೂ ಅಚ್ಚುಮೆಚ್ಚು. ಈ ಉಪಯೋಗವನ್ನೇ ಲಾಭ ಮಾಡಿಕೊಳ್ಳುವ ವಂಚಕರು ಮಹಿಳೆಯರನ್ನು ಸೆಳೆಯಲು ನಿರ್ದಿಷ್ಟ ಭಾಷೆ ಅಥವಾ ಸಮುದಾಯದವರನ್ನೊಳಗೊಂಡ ಫೇಸ್​ಬುಕ್, ವಾಟ್ಸ್​ಆಪ್ ಗ್ರೂಪ್ ರಚಿಸಿ ವೈವಿಧ್ಯಮಯ ಸೀರೆಗಳನ್ನು ಕಡಿಮೆ ಬೆಲೆಗೆ ನೀಡುವ ಆಫರ್ ನೀಡುತ್ತಾರೆ. ಇವರ ಉದ್ದೇಶ ಅರಿಯದ ಮಹಿಳೆಯರಿಂದ ಯುಪಿಐ ಮೂಲಕ ಹಣ ಹಾಕಿಸಿಕೊಂಡು ಸೀರೆ ಕಳುಹಿಸದೆ ಯಾಮಾರಿಸುತ್ತಾರೆ. ಸೀರೆ ಸಿಗದೆ ಹಣ ವಾಪಸ್ ಕೇಳುವ ಮಹಿಳೆಯರಿಗೆ ಫೇಸ್​ಬುಕ್, ವಾಟ್ಸ್​ಅಪ್ ಪ್ರೊಫೈಲ್​ನಲ್ಲಿರುವ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋರ್ನ್ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುವ ಬೆದರಿಕೆ ಒಡ್ಡುತ್ತಾರೆ. ಮಾನಕ್ಕೆ ಅಂಜುವ ಮಹಿಳೆಯರು ಹೋದ ಹಣವನ್ನು ಮರೆತು ನಿಟ್ಟುಸಿರು ಬಿಡುತ್ತಾರೆ.

    ಕೊಪ್ಪಳದಲ್ಲಿ ಬಯಲು
    ಕೊಪ್ಪಳದಲ್ಲಿ ಸೀರೆ ಕಳಿಸುವುದಾಗಿ ಹಣ ಪಡೆದು ವಂಚಿಸಿದ್ದ ವ್ಯಕ್ತಿ ಬಳಿಕ ಕರೆ ಮಾಡಿದ್ದ ಮಹಿಳೆಗೆ ಕೆಟ್ಟ ಸಂದೇಶ ಕಳುಹಿಸಿ ಬೆದರಿಸಿದ್ದಾನೆ. ಪದೇ ಪದೇ ಬೆದರಿಕೆ ಬರುತ್ತಿದ್ದರಿಂದ ಹೆದರಿದ ಮಹಿಳೆ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ ಬಳಿಕ ರಾಜ್ಯದಲ್ಲಿ ಹಾಗೂ ಆಂಧ್ರದಲ್ಲೂ ಅನೇಕ ಮಹಿಳೆಯರಿಗೆ ಇದೇ ರೀತಿ ಯಾಮಾರಿಸಿರುವುದು ಬಯಲಾಗಿದೆ. ಆದರೆ ಮರ್ಯಾದೆಗೆ ಹೆದರಿ ಯಾರೊಬ್ಬರೂ ದೂರು ನೀಡಲು ಮುಂದೆ ಬಂದಿಲ್ಲ.

    ಈ ವಿಷಯ ತಿಳಿದಿರಲಿ 
    1. ನೀವು ವ್ಯವಹರಿಸುವ ವ್ಯಕ್ತಿ ಅಥವಾ ಸಂಸ್ಥೆಯ ಪೂರ್ವಾಪರ ತಿಳಿದುಕೊಳ್ಳಿ, ಆ ಬಳಿಕವೂ ಅನುಮಾನ ಕಾಡುತ್ತಿದ್ದರೆ ಕ್ಯಾಶ್ ಆನ್​ಡಿಲಿವರಿಗೆ ಕೋರಿಕೆ ಸಲ್ಲಿಸಿ

    2. ಒಂದೊಮ್ಮೆ ವ್ಯವಹರಿಸಲು ನಿರ್ಧರಿಸಿದೇ ಆದಲ್ಲಿ ನಿಮ್ಮ ಫೇಸ್​ಬುಕ್ ಖಾತೆ, ವಾಟ್ಸ್​ಆಪ್ ಪೊಫೈಲ್ ಚಿತ್ರವನ್ನು ಹೈಡ್ ಮಾಡಿ ಮುಂದುವರಿಯಿರಿ

    3. ನೀವು ಖರೀದಿಸಿದ ವಸ್ತುವನ್ನು ಪರೀಕ್ಷಿಸಿದ ಬಳಿಕವಷ್ಟೇ ಹಣ ಪಾವತಿಸಿ, ನೀವು ಇಂತಹ ವಂಚಕರ ಬಲೆಗೆ ಬಿದ್ದಿದ್ದರೆ ಹೆದರದೆ ಪೊಲೀಸರಿಗೆ ಮಾಹಿತಿ ನೀಡಿ

    ಆನ್​ಲೈನ್ ವಂಚನೆಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ಇರಬೇಕು. ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಳ್ಳುವ ದುರುಳರು ಮಹಿಳೆಯರ ಫೇಸ್​ಬುಕ್, ವಾಟ್ಸಾಪ್ ವಿವರ ಪಡೆದು ಯಾಮಾರಿಸುತ್ತಿದ್ದಾರೆ. ಹಣ ನೀಡದೆ ವಂಚಿಸುವುದಲ್ಲದೆ, ಮಹಿಳೆಯರ ಚಾರಿತ್ರ್ಯಧೆಗೆ ಯತ್ನಿಸುತ್ತಿದ್ದಾರೆ.
    | ಚಂದ್ರಶೇಖರ್ ಹರಿಹರ ಕೊಪ್ಪಳ ಸೈಬರ್ ಠಾಣೆ ಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts