More

    ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ

    ದೇವರಾಜ್ ಎಲ್. ಬೆಂಗಳೂರು

    ಆಡುತ್ತಾ, ಕುಣಿಯುತ್ತ ಕಲಿಯಬೇಕಾದ ಶಾಲಾ ಮಕ್ಕಳನ್ನು ಗಂಟೆಗಟ್ಟಲೆ ಮೊಬೈಲ್, ಲ್ಯಾಪ್​ಟಾಪ್ ಮುಂದೆ ಕೂರಿಸಿ ಪಾಠ ಹೇಳಿಕೊಡುವ ಆನ್​ಲೈನ್ ತರಗತಿಗಳಿಗೆ ಪಾಲಕರ ವಿರೋಧ ತೀವ್ರಗೊಂಡಿರುವ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲೂ ಆಕ್ರೋಶ ಭುಗಿಲೆದ್ದಿದೆ. ಕರೊನಾ ಕಾರಣಕ್ಕಾಗಿ ಮಕ್ಕಳ ವಯಸ್ಸು, ಆರೋಗ್ಯ ಲೆಕ್ಕಿಸದೆ ಆನ್​ಲೈನ್ ತರಗತಿಯ ಗುಮ್ಮ ಹೇರುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಶಿಕ್ಷಣ ತಜ್ಞರು, ವೈದ್ಯರು, ಸಿನಿಮಾ ನಟರ ಜತೆಗೆ ಶಿಕ್ಷಣ ಇಲಾಖೆಯಲ್ಲೂ ಅಪಸ್ವರ ಎದ್ದಿದೆ.

    ಈಗಾಗಲೇ ಹಲವು ಖಾಸಗಿ ಶಾಲೆಗಳು ಪಾಲಕರಿಂದ ವಾರ್ಷಿಕ ಶುಲ್ಕ ಪಡೆದು ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸಿವೆ. ಆದರೆ ತಿಂಗಳು ಕಳೆಯುವ ಮೊದಲೇ ಮಕ್ಕಳು ಹಾಗೂ ಪಾಲಕರು ಇ-ಶಿಕ್ಷಣದ ಕಿರಿಕಿರಿಯಿಂದ ಸುಸ್ತಾಗಿದ್ದಾರೆ. ಮಕ್ಕಳ ಆರೋಗ್ಯದ ಕತೆಯೇನೆಂದು ಚಿಂತಿತರಾಗಿ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ.

    ಫೋನ್ ತಲೆನೋವು: ಮಕ್ಕಳಿಗೆ ಮೊಬೈಲ್ ಕೊಡಲೇಬೇಡಿ ಎಂಬ ವೈದ್ಯರ ಎಚ್ಚರಿಕೆ ಹೊರತಾಗಿಯೂ ಆನ್​ಲೈನ್ ತರಗತಿಗಾಗಿ ಮಕ್ಕಳು ಇಯರ್ ಫೋನ್ ಹಾಕಿಕೊಂಡು ಮೊಬೈಲ್ ಅಥವಾ ಲ್ಯಾಪ್​ಟಾಪ್ ಮುಂದೆ ತಾಸುಗಟ್ಟಲೆ ಕುಳಿತು ಪಾಠ ಕೇಳುವಂತಾಗಿದೆ. ಎಳೆಯ ಮಕ್ಕಳು ನಿರಂತರವಾಗಿ ಗಂಟೆಗಟ್ಟಲೆ ಆನ್​ಲೈನ್​ನಲ್ಲೇ ಇರುವ ಕಾರಣ ಹಲವು ದೈಹಿಕ, ಮಾನಸಿಕ ತೊಂದರೆಗಳಾಗುತ್ತಿವೆ.

    ಇದನ್ನೂ ಓದಿ  ಸಾಂಕ್ರಾಮಿಕ ರೋಗಗಳ ಭೀತಿ

    ನಿಯಮವೇ ಇಲ್ಲ: ಅನವಶ್ಯಕ ಮತ್ತು ಅವೈಜ್ಞಾನಿಕವಾಗಿ ನಡೆಸುತ್ತಿರುವ ಆನ್​ಲೈನ್ ತರಗತಿಗಳಿಗೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮೇನಲ್ಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದರು. ಆದರೆ, ಈವರೆಗೆ ಆನ್​ಲೈನ್ ತರಗತಿಗಳನ್ನು ಯಾವ ವಯಸ್ಸಿನ ಮಕ್ಕಳಿಗೆ ಆಯೋಜಿಸಬೇಕು? ಎಷ್ಟು ಅವಧಿ ಬೋಧಿಸಬೇಕು? ಈ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳೇನೇನು ಎಂಬ ಸ್ಪಷ್ಟತೆ ಇಲ್ಲ. ಇದರಿಂದಾಗಿ ಖಾಸಗಿ ಶಾಲೆಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.

    ಪ್ರಯೋಜನವಿದೆ ಆದರೆ…

    ಆನ್​ಲೈನ್ ಶಿಕ್ಷಣದಿಂದ ಹಲವು ಉಪಯೋಗಗಳಿದ್ದರೂ ಭಾರತದ ಮಟ್ಟಿಗೆ ಸದ್ಯಕ್ಕೆ ಈ ಪದ್ಧತಿ ಕಷ್ಟಕರವೆಂದೇ ವ್ಯಾಖ್ಯಾನಿಸಲಾಗುತ್ತದೆ. ಮಕ್ಕಳಿಗೆ ಕಂಪ್ಯೂಟರ್, ಇಂಟರ್ನೆಟ್​ನಿಂದ ಲೋಕಜ್ಞಾನ ವೃದ್ಧಿಸುವ ಜತೆಗೆ ಶಾಲೆಗೆ ಹೋಗಿಬರುವ ಸಮಯ ಉಳಿಯುತ್ತದೆ. ಜತೆಗೆ ಒಂದೇ ಸಮಯದಲ್ಲಿ ಶಿಕ್ಷಕರ ಜತೆಗೆ ಹಲವು ಶಿಕ್ಷಣ ತಜ್ಞರಿಂದ ಪಾಠ ಹೇಳಿಸುವ ವ್ಯವಸ್ಥೆ ಮಾಡುವುದು ಆನ್​ಲೈನ್ ಪಾಠದಲ್ಲಿ ಸಾಧ್ಯ. ಆದರೆ ಇದಕ್ಕೆಲ್ಲ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.

    ಆತಂಕಗಳೇನು?

    ಗಂಟೆಗಟ್ಟಲೆ ಮೊಬೈಲ್/ಕಂಪ್ಯೂಟರ್ ಎದುರು ಕೂರಿಸಿದರೆ ಎಳೆಯ ಮಕ್ಕಳ ಕಣ್ಣಿಗೆ ಹಾನಿ ಆಗುವ ಆತಂಕ

    ಮೊಬೈಲ್ ವಿಕಿರಣ ಅಪಾಯಕಾರಿಯಾದ್ದರಿಂದ ಆರೋಗ್ಯಕ್ಕೆ ಕಂಟಕವಾಗುವ ಆತಂಕ

    ಮನೆಯ ಇಕ್ಕಟ್ಟಾದ ಸ್ಥಳದಲ್ಲಿ ಗಂಟೆಗಟ್ಟಲೆ ಎದ್ದುಹೋಗದಂತೆ ಕೂರಬೇಕಾದ್ದರಿಂದ ಮಾನಸಿಕ ಕಿರುಕುಳ

    ಕೊಠಡಿ ಇಲ್ಲದ ಪುಟ್ಟ ಮನೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದು ಪಾಲಕರಿಗೆ ಕಷ್ಟ

    ಶಾಲೆಯಲ್ಲಿ ಕ್ರೀಡೆ, ದೈಹಿಕ ಚಟುವಟಿಕೆಗೆ ಇದ್ದ ಅವಕಾಶ ಆನ್​ಲೈನ್ ಶಿಕ್ಷಣದಲ್ಲಿ ಸಿಗುವುದಿಲ್ಲ

    ಆನ್​ಲೈನ್ ಪಾಠದಲ್ಲಿ ಮಕ್ಕಳಿಗೆ ಪ್ರತಿಸ್ಪಂದನೆಗೆ ಅವಕಾಶ ಕಡಿಮೆ. ವಿಡಿಯೊ ಆಫ್ ಮಾಡಿ, ಸೌಂಡ್ ಮ್ಯೂಟ್ ಮಾಡಿ ಶಿಕ್ಷಕರು ಹೇಳುವುದನ್ನು ಮಾತ್ರ ಕೇಳಿಸಿಕೊಂಡು ಕುಳಿತುಕೊಳ್ಳಬೇಕು. ತರಗತಿ ಮುಗಿಯುವ ಹೊತ್ತಿಗೆ ಮಕ್ಕಳಲ್ಲಿ ತಲೆನೋವು, ಮೈಜಡ, ಒತ್ತಡ ಹೆಚ್ಚುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗುತ್ತಿದ್ದವರಿಗೆ ಮನೆಯಲ್ಲೇ ಮಕ್ಕಳನ್ನು ಕಾಯಬೇಕಾದ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ  1983ರ ವಿಶ್ವಕಪ್ ತಾರೆಯರ ಪಾತ್ರದಲ್ಲಿ ಪುತ್ರರದ್ದೇ ನಟನೆ!

    ಆನ್​ಲೈನ್ ತರಗತಿಯಿಂದಾಗುವ ಸಮಸ್ಯೆ ಕುರಿತು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರನ್ನು ಭೇಟಿ ಮಾಡಿ, ಮನವರಿಕೆ ಮಾಡಿಕೊಟ್ಟಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಮನಕ್ಕೂ ತಂದಿದ್ದೇನೆ. ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಬೇಡಿ. ಗೋವಾ, ಮಹಾರಾಷ್ಟ್ರ ತೀರ್ಪು ಪರಿಗಣಿಸಿ ಪ್ರಮೋಟ್ ಮಾಡಿ.

    | ಪ್ರಥಮ್ ನಟ-ನಿರ್ದೇಶಕ

    ಪೂರ್ವ ಪ್ರಾಥಮಿಕ ಶಾಲೆಗಳಿಗೆ ಆನ್​ಲೈನ್ ತರಗತಿ ಅವಶ್ಯಕತೆ ಇಲ್ಲ. ಮಾಡುವುದಾದರೆ ಕನಿಷ್ಠ 45 ನಿಮಿಷದ ಅವಧಿಯಲ್ಲಿ ತರಗತಿ ಮುಗಿಯವಂತೆ ನೋಡಿಕೊಳ್ಳಬೇಕು.

    | ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್್ಸ ಸಂಘಟನೆ

    3-6 ವಯಸ್ಸಿನ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಬೇಡವೇ ಬೇಡ. ಭಾರತಕ್ಕೆ ಇದು ಹೊಸ ರೀತಿಯ ಪರಿಕಲ್ಪನೆಯಾಗಿರುವುದರಿಂದ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ಕೂಡ ಇರುವುದಿಲ್ಲ. ಬಲವಂತ ಮಾಡಿ ಮಕ್ಕಳನ್ನು ಮೊಬೈಲ್ ಮುಂದೆ ಕೂರಿಸುವುದು ತಪ್ಪು.

    | ಬಿ.ಎನ್.ಗಂಗಾಧರ್ ನಿರ್ದೇಶಕರು, ನಿಮ್ಹಾನ್ಸ್

    ಹಲವು ಗಂಟೆಗಳ ಕಾಲ ಮೊಬೈಲ್ ಮತ್ತು ಕಂಪ್ಯೂಟರ್ ನೋಡುವುದರಿಂದ ಹೆಡ್​ಸೆಟ್ ಹಾಕಿಕೊಳ್ಳುವುದರಿಂದ ಕಣ್ಣು-ಕಿವಿಗೆ ಹಾನಿಯಾಗುತ್ತದೆ. ಮಕ್ಕಳಿಗೆ ದೈಹಿಕ ಚಟುವಟಿಕೆಯೂ ಇರುವುದಿಲ್ಲ. ಮುಖಾಮುಖಿ ಕೇಳಿಸಿಕೊಂಡು, ಕೈಬರಹದಿಂದ ಕಲಿಯುವ ಶಿಸ್ತು ಇಲ್ಲವಾಗುತ್ತೆ.

    | ಸುಮನ್ ಅಜಿತ್ ಪ್ರೀ ನರ್ಸರಿ ಶಾಲೆ ಮಾಲೀಕರು

    ಆನ್​ಲೈನ್ ಪಾಠ, ನೆಟ್​ವರ್ಕ್ ಸಮಸ್ಯೆಗಳು, ಸತತ 5-6 ಗಂಟೆ ಮೊಬೈಲ್ ನೋಡಿ ಪಾಠ ಕಲಿಯುವುದು ನಿಜಕ್ಕೂ ಕಷ್ಟಕರ. ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೈಹಿಡಿಯಲಿ. ಎಲ್ಲ್ಲ ವಿದ್ಯಾರ್ಥಿಗಳ ಜತೆಗೆ ನಾವಿದ್ದೇವೆ.

    | ಶ್ರೀಮುರಳಿ ನಟ

    ವಿದ್ಯಾರ್ಥಿಗಳಿಗೆ ಆಗಿರುವ ಸಮಸ್ಯೆ ಆತಂಕಕ್ಕೀಡು ಮಾಡಿದೆ. ಈಗಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಪರೀಕ್ಷೆಯ ಆತಂಕ ಬೇಡ. ಜ್ಞಾನ ಎಲ್ಲಕ್ಕಿಂತ ದೊಡ್ಡದು. ಧೃತಿಗೆಡದೆ ಓದನ್ನು ಮುಂದುವರಿಸಲಿ

    | ಧ್ರುವ ಸರ್ಜಾ ನಟ

    ಇದನ್ನೂ ಓದಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

    ಮಕ್ಕಳ ದಿನಚರಿ ಏನು?

    ಶಾಲಾ ಸಮಯಕ್ಕೆ ಸರಿಯಾಗಿ ಮೊಬೈಲ್/ಕಂಪ್ಯೂಟರ್ ಎದುರು ಕೂರಬೇಕು, ಕೆಲವು ಶಾಲೆಗಳಲ್ಲಿ ಸಮವಸ್ತ್ರ ಧರಿಸಿ ಕೂರಲು ಸೂಚನೆ ಇದೆ.

    ನೀರು, ಪೆನ್ನು, ಪುಸ್ತಕ ಜತೆಯಲ್ಲೇ ಇಟ್ಟುಕೊಳ್ಳಬೇಕು

    ಪದೇಪದೆ ಓಡಾಡುವಂತಿಲ್ಲ , ಶೌಚಗೃಹಕ್ಕೆ ಹೋಗಲೂ ಅನುಮತಿ ಪಡೆಯಬೇಕು

    ಹೋಮ್ ವರ್ಕ್ ಮಾಡಿ ಆನ್​ಲೈನ್ ಮೂಲಕವೇ ಅಪ್​ಲೋಡ್ ಮಾಡಬೇಕು

    ಪಾಲಕರ ಚಿಂತೆ ಏನು

    ಮಕ್ಕಳಿಗಾಗಿಯೇ ಒಂದು ಮೊಬೈಲ್ ಅಥವಾ ಕಂಪ್ಯೂಟರ್ ಕೊಡಿಸಬೇಕು

    ಇಬ್ಬರು ಮಕ್ಕಳಿದ್ದರೆ ಎರಡೆರಡು ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು

    ಒಂದಕ್ಕಿಂತ ಹೆಚ್ಚು

    ಮಕ್ಕಳಿದ್ದರೆ ಮನೆಯಲ್ಲಿ ನಿಯಂತ್ರಿಸುವುದು ಕಷ್ಟ

    ಇಯರ್ ಫೋನ್ ಕೊಡಿಸಬೇಕು, ಇಂಟರ್ನೆಟ್ ಹಾಕಿಸಬೇಕು

    ಮೊಬೈಲ್ ಸಿಗ್ನಲ್, ಗಾಳಿ, ಬೆಳಕು ಇರುವ ಕಡೆ ಮಕ್ಕಳನ್ನು ಕೂರಿಸಬೇಕು

    ಇಂಟರ್ನೆಟ್ ಸಮಸ್ಯೆ

    ಗ್ರಾಮೀಣ ಪ್ರದೇಶ ಹಾಗಿರಲಿ, ಬೆಂಗಳೂರಿನಲ್ಲೇ ಮೊಬೈಲ್ ನೆಟ್​ವರ್ಕ್, ಇಂಟರ್ನೆಟ್ ಸಿಗ್ನಲ್ ಸಿಗದೆ ಪರದಾಡುವ ಪರಿಸ್ಥಿತಿ ಇದೆ. ಅಪಾರ್ಟ್​ವೆುಂಟ್​ಗಳಲ್ಲಿ, ಒತ್ತಟ್ಟಿನ ಮನೆಗಳಲ್ಲಿ, ಮೊಬೈಲ್​ನಲ್ಲಿ ಇಂಟರ್ನೆಟ್ ಸಿಗ್ನಲ್ ಸಿಗದೆ ಆನ್​ಲೈನ್ ತರಗತಿ ಪ್ರವೇಶಿಸುವುದೇ ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ನಡುವೆ ಸಂಪರ್ಕ ಕಡಿತಗೊಂಡರೆ ಮತ್ತೆ ಸಂಪರ್ಕ ಸಿಗುತ್ತಿಲ್ಲ. ಹೆಚ್ಚು ಹಣ ಖರ್ಚು ಮಾಡಿ ಮನೆಯಲ್ಲಿ ಸುಗಮ ಇಂಟರ್ನೆಟ್ ಲಭ್ಯವಾಗುವಂತೆ ನೋಡಿಕೊಳ್ಳುವ ಆರ್ಥಿಕ ಸ್ಥಿತಿ ಎಲ್ಲರಿಗೂ ಇರುವುದಿಲ್ಲ.

    ಆನ್​ಲೈನ್ ತರಗತಿ ನೆಪದಲ್ಲಿ ಮಕ್ಕಳ ಶೋಷಣೆ ಬೇಡ. ಆರೋಗ್ಯದ ಅಡ್ಡಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡಬೇಕಿದೆ.

    | ಎಸ್.ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

    ನಮ್ಮ ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಪ್ರತಿ ನಿತ್ಯ ಶಾಲೆಗೆ ರೆಡಿ ಮಾಡುವುದಕ್ಕಿಂತ ಆನ್​ಲೈನ್ ತರಗತಿಗೆ ರೆಡಿ ಮಾಡುವುದು ಕಷ್ಟವಾಗಿದೆ. ಇಬ್ಬರಿಗೂ ಒಂದೊಂದು ಮೊಬೈಲ್ ಕೊಟ್ಟು ಕೂರಿಸಬೇಕು.

    | ಪವಿತ್ರಾ ಶಿವಕುಮಾರ್ ಪಾಲಕಿ

    ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​ಲೈನ್ ತರಗತಿ ಬೇಕಾಗಿಲ್ಲ. ಎಷ್ಟೋ ಪಾಲಕರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಇದ್ದವರು ಮಕ್ಕಳಿಗಾಗಿ ಮನೆಯಲ್ಲೇ ಕೂರಬೇಕಾಗುತ್ತದೆ.

    | ನಿರಂಜನಾರಾಧ್ಯ ಶಿಕ್ಷಣ ತಜ್ಞ

    ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts