More

    ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

    ಮೈಸೂರು: ಶಿಕ್ಷಣ, ನೀರಾವರಿ, ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ಅರಸು ಮಂಡಳಿ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136ನೇ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೆಆರ್‌ಎಸ್ ಅಣೆಕಟ್ಟೆ ಕಟ್ಟುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ಜನರಿಗೆ ಉಪಕಾರ ಮಾಡುವ ದೊಡ್ಡ ಕೆಲಸ ನಾಲ್ವಡಿ ಅವರಿಂದ ಆಗಿದೆ. ಇಂತಹವರ ವರ್ಧಂತ್ಯುತ್ಸವದಲ್ಲಿ ಭಾಗವಹಿಸದಿದ್ದರೆ ನನ್ನಂತಹ ರಾಜಕಾರಣಿ ಇದ್ದರೂ ದಂಡ ಎಂದರು.
    ನಾಲ್ವಡಿ ಅವರು ಜಾರಿಗೆ ತಂದ ಸಹಕಾರ ಕ್ಷೇತ್ರ ಈಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೆಷ್ಟೋ ಕೋಟ್ಯಂತರ ಜನರಿಗೆ ಬೆಳಕಾಗಿದೆ. ನಾಲ್ವಡಿ ಅವರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಇನ್ಮುಂದೆ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಡಿನ 10 ಗಣ್ಯರಿಗೆ ನಾಲ್ವಡಿ ಹೆಸರಲ್ಲಿ ಜಿಲ್ಲಾಡಳಿತ ವತಿಯಿಂದ ಗೌರವಿಸಲಾಗುವುದು ಎಂದರು.

    ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಂಡಳಿಯ ಅಧ್ಯಕ್ಷ ಎಸ್.ಲಿಂಗರಾಜೇ ಅರಸ್ ಇನ್ನಿತರರು ಪಾಲ್ಗೊಂಡಿದ್ದರು.

    ಎರಡು ದಿನಗಳಲ್ಲಿ ಆದೇಶ: ನಗರದ ಚಾಮರಾಜೇಂದ್ರ ಮೃಗಾಲಯ ತೆರೆಯುವ ಕುರಿತು ಇನ್ನು ಎರಡು ದಿನಗಳಲ್ಲಿ ಆದೇಶ ಹೊರ ಬೀಳಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಮೃಗಾಲಯ ತೆರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದಲೂ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿವೆ. ಆದರೆ ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಭಯಪಡುವುದು ಬೇಡ ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts