More

    ಆನ್​ಲೈನ್​ ಬೆಟ್ಟಿಂಗ್​ ಚಟಕ್ಕೆ ಬಲಿಯಾಯ್ತು ಸುಂದರ ಕುಟುಂಬ! 4 ವರ್ಷದ ಮಗು ಸೇರಿ ಮೂವರ ದುರಂತ ಅಂತ್ಯ

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಸುಲಭವಾಗಿ ಹಣ ಗಳಿಸಬೇಕೆಂಬ ಆಸೆ ಇದೆ. ಒಮ್ಮೆಲೇ ಲಕ್ಷ ಲಕ್ಷ ಗಳಿಸುವ ಆಸೆಯಿಂದ ಆನ್​ಲೈನ್ ಗೇಮ್​ಗಳಿಗೆ ಅಡಿಕ್ಟ್ ಆಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರು ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪಬ್ಜಿಯಂತಹ ಆನ್‌ಲೈನ್ ಆಟಗಳ ಬಲೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಕೆಲ ಕುಟುಂಬಗಳು ಬೀದಿ ಪಾಲಾಗಿವೆ. ಅಲ್ಲದೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತ ಸ್ಥಿತಿಯು ನಿರ್ಮಾಣವಾಗಿದೆ. ತಾಜಾ ಘಟನೆಯೊಂದರಲ್ಲಿ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ಕುಟುಂಬದಲ್ಲಿ ಜಗಳಗಳನ್ನು ಉಂಟುಮಾಡಿ, ಕೊನೆಗೆ ಆ ಮನೆಯಲ್ಲಿ ಚಿಕ್ಕ ಮಗುವಿನಿಂದ ಹಿಡಿದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆ.

    ಹೌದು, ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಮತ್ತೊಂದು ಕುಟುಂಬ ಬಲಿಯಾಗಿದೆ. ಸೋಮವಾರ ರಾತ್ರಿ ತೆಲಂಗಾಣದ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಚೆವೆಲ್ಲಾ ಮಂಡಲದ ಮಲ್ಕಾಪುರ ಗ್ರಾಮದ ಆನಂದ್ (38) ಮತ್ತು ಇಂದಿರಾ (36) ದಂಪತಿಗೆ ಶ್ರೇಯನ್ಸ್ (4) ಎಂಬ ಮಗನಿದ್ದ. ಆನಂದ್ ವೃತ್ತಿಯಲ್ಲಿ ಹಾಲಿನ ವ್ಯಾಪಾರಿ. ಮೂರು ವರ್ಷಗಳಿಂದ ಬಂಡ್ಲಗುಡಜಗಿರ್‌ನ ಸನ್‌ಸಿಟಿ ಪ್ರದೇಶದ ಯಮುನಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಹಾಲಿನ ವ್ಯಾಪಾರ ಮಾಡುತ್ತಿರುವಾಗಲೇ ಆನಂದ್ ಆನ್​ಲೈನ್ ಗೇಮ್​ಗಳ ಚಟಕ್ಕೆ ಬಿದ್ದಿದ್ದ. ಈ ಪ್ರಕ್ರಿಯೆಯಲ್ಲಿ ಸುಮಾರು 15 ಲಕ್ಷ ರೂ.ಗಳಷ್ಟು ಸಾಲ ಮಾಡಿ ಆರ್ಥಿಕ ನಷ್ಟ ಅನುಭವಿಸಿದ್ದ. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

    15 ದಿನಗಳ ಹಿಂದೆ ಎರಡೂ ಮನೆಯವರು ಹಾಗೂ ಸ್ನೇಹಿತರು ಆನಂದ್​ ಮನೆಗೆ ಬಂದು ಆನ್‌ಲೈನ್ ಗೇಮ್‌ ಆಡದಂತೆ ಬುದ್ಧಿಮಾತು ಹೇಳಿದ್ದರು. ಆದರೆ ಆನಂದನ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರಲಿಲ್ಲ. ಇದಲ್ಲದೆ, ಮೂರು ದಿನಗಳ ಹಿಂದೆ ಮತ್ತೊಮ್ಮೆ ಆನ್‌ಲೈನ್ ಬೆಟ್ಟಿಂಗ್ ಆಡಿದ್ದ. ಸೋಮವಾರ ಬೆಳಗ್ಗೆಯಿಂದ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ. ಆ ವೇಳೆ ಇಂದಿರಾ, ತಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿ ನಡೆದ ಸಂಗತಿಯನ್ನು ವಿವರಿಸಿ ಕಣ್ಣೀರಿಟ್ಟಿದ್ದರು. ಅಲ್ಲದೆ, ಆನಂದ್ ಕೂಡ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಇದರಿಂದ ಭಯಗೊಂಡ ಉಭಯ ಕುಟುಂಬದ ಸದಸ್ಯರು ಎಷ್ಟೇ ಕರೆ ಮಾಡಿದರೂ ಇಬ್ಬರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಎಲ್ಲರೂ ಚಿಂತಿತರಾಗಿ ಅಪಾರ್ಟ್‌ಮೆಂಟ್‌ಗೆ ಬಂದು ನೋಡಿದಾಗ ಆನಂದ್​, ಇಂದಿರಾ ಮತ್ತು ಅವರ ಮಗ ಸಾವಿಗೀಡಾಗಿರುವುದು ಕಂಡುಬಂದಿದೆ. ಕೂಡಲೇ ರಾಜೇಂದ್ರನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ದಂಪತಿ ನಡುವೆ ಜಗಳ ನಡೆದು, ಪತ್ನಿಯನ್ನು ಕೊಲೆಗೈದು, ಬಳಿಕ ಆನಂದ್, ಮಗನಿಗೆ ಕ್ರಿಮಿನಾಶಕ ಕುಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದಲ್ಲದೆ, ತಂದೆ ಮತ್ತು ಮಗನ ಬಾಯಲ್ಲಿ ನೊರೆ ಬಂದಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ. ಆದರೆ ಇಂದಿರಾ ಬಾಯಿಯಿಂದ ನೊರೆ ಬಂದಿರಲಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಬೆಳಗ್ಗೆಯಿಂದ ದಂಪತಿ ಜಗಳವಾಡುತ್ತಿದ್ದರು ಎಂದು ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಪೊಲೀಸರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಶಾರೂಖ್​ ಪುತ್ರ ಆರ್ಯನ್​-ಐಶ್ವರ್ಯಾ ಪುತ್ರಿ ಆರಾಧ್ಯ ಮದುವೆ!? ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ

    ಎಂ.ಎಸ್. ಧೋನಿ ಪರ ಮೊಳಗಿದ ಜೈಕಾರ, ಕಿವಿ ಮುಚ್ಚಿಕೊಂಡ ರಸೆಲ್​; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts