More

    ಈರುಳ್ಳಿ ಬಿತ್ತನೆ ಬೀಜದ ದರ ದುಪ್ಪಟ್ಟು

    ಬೆಳಗಾವಿ: ಅತಿವೃಷ್ಟಿ ಮತ್ತು ಕೋವಿಡ್-19 ಹಾವಳಿಯಿಂದ ಕಂಗೆಟ್ಟಿದ್ದ ಕೃಷಿ ವಲಯ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಸಾಲ, ಹವಾಮಾನ ವೈಪರೀತ್ಯ ಸಮಸ್ಯೆಗಳು ರೈತರನ್ನು ಕಾಡುತ್ತಿದ್ದು, ಬಿತ್ತನೆ ಬೀಜಗಳ ಬೆಲೆ ಏರಿಕೆ ಮತ್ತಷ್ಟು ಧೃತಿಗೆಡುವಂತೆ ಮಾಡಿದೆ. ಈರುಳ್ಳಿ ಬಿತ್ತನೆ ಬೀಜದ ದರ ದುಪ್ಪಟ್ಟಾಗಿದ್ದು, ರೈತರು ಬಿತ್ತನೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.

    ಬೀಜ ತಯಾರಿಸದ ರೈತರು: ನೆರೆಯ ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ವಿವಿಧ ಭಾಗದಲ್ಲಿ ಸುರಿದ ಅಕಾಲಿಕ ಮಳೆ ಮತ್ತು ನಂತರದ ದಿನಗಳಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಈರುಳ್ಳಿ ಬೀಜ ಉತ್ಪಾದನೆ ಕುಂಠಿತಗೊಂಡಿತ್ತು. ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಮುಖಿಯಾಗಿ ಏರಿಕೆ ಕಂಡಿದ್ದರಿಂದ ರೈತರು ಇದ್ದ ಉತ್ಪನ್ನವನ್ನೆಲ್ಲ ಮಾರಾಟ ಮಾಡಿದ್ದಾರೆಯೇ ಹೊರತು ಬೀಜ ತಯಾರಿಸಿಲ್ಲ.

    ಪರಿಣಾಮ ಹಿಂಗಾರು ಹಂಗಾಮಿನಲ್ಲಿ ಬೀಜ ಖರೀದಿಗೆ ರೈತರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಸ್ಥಳೀಯ ರೈತರು ತಯಾರಿಸಿದ ಒಳ್ಳೆಯ ತಳಿಗಳ ಬೀಜದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

    ದುಪ್ಪಟ್ಟಾದ ದರ: 2019-20 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರತಿ ಕೆಜಿ ಈರುಳ್ಳಿ ಬೀಜಕ್ಕೆ 2,350 ರೂ.ನಿಂದ 3,200 ರೂ.ವರೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಆದರೆ, ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಕೆಜಿಗೆ 4,250 ರೂ.ನಿಂದ 5,500 ರೂ.ಗೆ ಮಾರಾಟವಾಗುತ್ತಿದೆ. ಅದಲ್ಲದೆ ರಾಜ್ಯದ ಎಲ್ಲೆಡೆ ಉಳ್ಳಾಗಡ್ಡಿ ಬಿತ್ತನೆ ಬೀಜಕ್ಕೆ ಬಾರಿ ಬೇಡಿಕೆ ಹೆಚ್ಚಿದೆ.

    ಇದರಿಂದ ಈ ಬಾರಿ ಈರುಳ್ಳಿ ಬೀಜದ ದರ ವರ್ಷಕ್ಕಿಂತ 2 ಪಟ್ಟು ಹೆಚ್ಚಾಗಿದೆ. ಉತ್ತಮ ತಳಿಯ ಬೀಜ ಕೆಜಿಗೆ 1,000 ರಿಂದ 1,500 ರೂ.ವರೆಗೆ ಏರಿಕೆ ಕಂಡಿದೆ. ಕಂಪನಿಗಳ ಬಿತ್ತನೆಯ ಬೀಜ 800 ರೂ.ಹೆಚ್ಚಾಗಿದೆ. ಹಾಗಾಗಿ ರೈತರು ಬಿತ್ತನೆ ಬೀಜಕ್ಕಾಗಿ ಇನ್ನಷ್ಟು ಹಣ ತೆರಬೇಕಾಗಿದೆ.

    ಈರುಳ್ಳಿ ಬೆಳೆಯತ್ತ ಚಿತ್ತ: ಎರಡು ವರ್ಷಗಳ ಅವಧಿಯಲ್ಲಿ ಈರುಳ್ಳಿ ಕ್ವಿಂಟಾಲ್‌ಗೆ ಸರಾಸರಿ 9,450 ರಿಂದ 14,500 ರೂ. ವರೆಗೆ ಮಾರಾಟವಾಗಿತ್ತು. ಈ ವರ್ಷ ಮುಂಗಾರಿನಲ್ಲಿ ಈರುಳ್ಳಿಗೆ ಇನ್ನಿಲ್ಲದ ಬೇಡಿಕೆ ಬಂದು ಉತ್ತಮ ಬೆಲೆಗೆ ಮಾರಾಟವಾಗಿತ್ತು. ಹಿನ್ನೆಲೆಯಲ್ಲಿ ಈ ವರ್ಷವೂ ಈರುಳ್ಳಿಗೆ ಉತ್ತಮ ಧಾರಣೆ ಸಿಗುವ ಆಶಾಭಾವನೆಯಿಂದ ಈರುಳ್ಳಿ ಬೆಳೆಯಲು ರೈತ ಸಮುದಾಯ ಮುಂದಾಗಿದ್ದರಿಂದ ಉಳ್ಳಾಗಡ್ಡಿ ಬೀಜಕ್ಕೆ ಬೇಡಿಕೆ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ವ್ಯಾಪಾರಿಗಳು ತಿಳಿಸಿದ್ದಾರೆ.

    ಈ ವರ್ಷ ಈರುಳ್ಳಿ ಬೀಜದ ದರದಲ್ಲಿ ಏರಿಕೆ ಕಂಡಿದ್ದು, ರೈತರು ತಯಾರಿಸಿದ ಒಳ್ಳೆಯ ತಳಿಗಳ ಬೀಜಕ್ಕೆ ಕೆಜಿಗೆ 1,000 ರಿಂದ 1,500 ರೂ.ವರೆಗೆ ಏರಿಕೆ ಕಂಡಿದೆ. ತುಟ್ಟಿಯಾಗಿರುವ ಬೀಜ ತಂದು ಬಿತ್ತನೆ ಮಾಡಿದರೂ ಮುಂದೆ ಉತ್ತಮ ಬೆಲೆ ಸಿಗುವ ಭರವಸೆ ಇಲ್ಲ.
    | ಎಂ.ದೇವರಡ್ಡಿ , ಈರುಳ್ಳಿ ಬೆಳೆಗಾರ, ಯರಗಟ್ಟಿ

    ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಗಳಲ್ಲಿ ಈರುಳ್ಳಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಬೀಜದ ದರ ಏರಿಕೆ ಕಂಡಿದೆ. ಬೀಜ ತಯಾರಿಸುವ ವಿವಿಧ ಕಂಪನಿಗಳು ನಿಗದಿಪಡಿಸುವ ದರ ನಿಯಂತ್ರಣ ಅವಶ್ಯಕ.
    | ಡಾ.ಕೆ.ಕೋಡಿಗೌಡ, ಬೆಳಗಾವಿ ಎಪಿಎಂಸಿ ಕಾರ್ಯದರ್ಶಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts