More

    ಹೇಗಿದ್ದಾಳೆ ಚಾರ್ಲಿ?; ಚಿತ್ರತಂಡಕ್ಕೆ ವರ್ಷದ ಸಂಭ್ರಮ, ಶ್ವಾನಕ್ಕೆ ಖುಷಿ ಬದುಕಿನ ಸಡಗರ

    | ಹರ್ಷವರ್ಧನ್ ಬ್ಯಾಡನೂರು

    ‘777 ಚಾರ್ಲಿ’. ರಕ್ಷಿತ್ ಶೆಟ್ಟಿ ಮತ್ತು ಸಂಗೀತ ಶೃಂಗೇರಿ ಅಭಿನಯದ, ಕಿರಣ್ ರಾಜ್ ನಿರ್ದೇಶನದ ಶ್ವಾನ, ಮಾನವ ಸಂಬಂಧಗಳ ಸುತ್ತ ಸುತ್ತುವ ಸಿನಿಮಾ. ಕಳೆದ ಶನಿವಾರ (ಜೂ. 10) ಚಿತ್ರ ರಿಲೀಸ್ ಆಗಿ ಒಂದು ವರ್ಷ ಪೂರ್ಣಗೊಂಡಿದೆ. ಹಾಗಾದರೆ ಈಗ ಚಾರ್ಲಿ ಎಲ್ಲಿದ್ದಾಳೆ? ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ? ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾಳಾ? ಹೀಗೆ ಸಿನಿಮಾ ಹಾಗೂ ಚಾರ್ಲಿ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. ಅದಕ್ಕೆ ‘777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್ ಉತ್ತರಿಸಿದ್ದಾರೆ.

    ‘’777 ಚಾರ್ಲಿ’ ಚಿತ್ರದಲ್ಲಿ ಎರಡು ಶ್ವಾನಗಳು ನಟಿಸಿದ್ದವು. ಒಂದು ಮರಿ ಚಾರ್ಲಿ ಇನ್ನೊಂದು ದೊಡ್ಡ ಚಾರ್ಲಿ. ಈ ಎರಡು ಚಾರ್ಲಿಗಳ ಕಂಪನಿಗಾಗಿ ಎರಡು ಚಾರ್ಲಿಗಳಿದ್ದವು. ಹೀಗೆ ಸಿನಿಮಾಗಾಗಿ ನಾವು ನಾಲ್ಕು ಚಾರ್ಲಿಗಳನ್ನು ದತ್ತು ಪಡೆದಿದ್ದೆವು. ಈ ಶ್ವಾನಗಳು ನಮ್ಮೊಂದಿಗೆ ಸುಮಾರು ನಾಲ್ಕು ವರ್ಷಗಳ ಕಾಲ ಪಯಣಿಸಿವೆ. ಅವುಗಳನ್ನು ಮತ್ತೆ ಕಮರ್ಷಿಯಲ್ ಉದ್ದೇಶಕ್ಕಾಗಿ ಬಳಸಬಾರದು ಅಂತ ಮೊದಲೇ ನಿರ್ಧರಿಸಿದ್ದೆವು. ಶ್ವಾನಗಳಿಗೆ ಶಬ್ದ ಮತ್ತು ಲೈಟಿಂಗ್ಸ್ ಮಧ್ಯೆ ಇರುವುದು ಕಷ್ಟ. ಹೀಗಾಗಿ ಈ ಸಿನಿಮಾ ಬಳಿಕ ಮತ್ತೆ ಅವುಗಳಿಗೆ ನಾವು ತೊಂದರೆ ಕೊಡಬಾರದು ಅಂತ ತೀರ್ಮಾನಿಸಿದ್ದೆವು. ‘777 ಚಾರ್ಲಿ’ ಸಿನಿಮಾ ಅವುಗಳ ಮೊದಲ ಹಾಗೂ ಕೊನೆಯ ಚಿತ್ರ. ಕಳೆದ ಒಂದು ವರ್ಷದಿಂದ ಮೈಸೂರಿನಲ್ಲಿ ಟ್ರೇನರ್ ಜತೆ ಕೆನಲ್‌ನಲ್ಲಿವೆ. ನಾನು, ರಕ್ಷಿತ್ ಶೆಟ್ಟಿ ಅಥವಾ ಪರಂವಾ ಸ್ಟುಡಿಯೋದ ಯಾರೇ ಆಗಲಿ ಮೈಸೂರಿಗೆ ಹೋದರೆ ಚಾರ್ಲಿಯನ್ನು ಭೇಟಿ ಮಾಡಿ, ಕೆಲ ಕಾಲ ಅವುಗಳ ಜತೆ ಇರುತ್ತೇವೆ. ಕೆಲ ದಿನಗಳ ಹಿಂದಷ್ಟೇ ಚಿತ್ತಾರ ಅವಾರ್ಡ್ಸ್‌ನಲ್ಲಿ ಚಾರ್ಲಿಗೆ ವಿಶೇಷ ಪ್ರಶಸ್ತಿ ದೊರೆಯಿತು. ಅದನ್ನು ಪಡೆಯಲು ಬೆಂಗಳೂರಿಗೆ ಬಂದಿದ್ದಳು’ ಎಂದು ಮಾಹಿತಿ ನೀಡುತ್ತಾರೆ ಕಿರಣ್ ರಾಜ್.

    ಹೇಗಿದ್ದಾಳೆ ಚಾರ್ಲಿ?; ಚಿತ್ರತಂಡಕ್ಕೆ ವರ್ಷದ ಸಂಭ್ರಮ, ಶ್ವಾನಕ್ಕೆ ಖುಷಿ ಬದುಕಿನ ಸಡಗರ

    ಹೀಗೆ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿದ್ದ ಶ್ವಾನಗಳು ತಮ್ಮ ಪಾಡಿಗೆ ಆರಾಮಾಗಿವೆ. ಮತ್ತೊಂದೆಡೆ ಸಿನಿಮಾ ರಿಲೀಸ್ ಆದ ಬಳಿಕ ಚಾರ್ಲಿ ಹೆಸರಿನಲ್ಲಿ ಫಂಡ್ ಇಟ್ಟಿರುವ ರಕ್ಷಿತ್ ಶೆಟ್ಟಿ ಮತ್ತು ತಂಡ, ಆ ಮೂಲಕ ನಾಯಿಗಳ ರಕ್ಷಣೆಯಲ್ಲಿ ತೊಡಗಿರುವ ಎನ್‌ಜಿಒಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ‘ಭಾರತದಾದ್ಯಂತ ಕೆಲವು ಎನ್‌ಜಿಓಗಳಿಗೆ ಚಾರ್ಲಿ ಫಂಡ್‌ಅನ್ನು ವಿತರಿಸುತ್ತಾ ಬಂದಿದ್ದೇವೆ. ನಮಗೆ ಏನೇ ಸಕ್ಸಸ್ ಸಿಕ್ಕಿದ್ದರೂ ಅದಕ್ಕೆ ಮುಖ್ಯ ಕಾರಣ ಚಾರ್ಲಿ. ಆಕೆಯ ಹೆಸರು ಮುಂದೆಯೂ ಇರಬೇಕು ಎಂಬುದು ನಮ್ಮ ಆಸೆ. ಹೀಗಾಗಿಯೇ ಈ ಫಂಡ್ ಮೂಲಕ ಎನ್‌ಜಿಒಗಳಿಗೆ ಸಪೋರ್ಟ್ ಮಾಡುತ್ತಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ. ‘777 ಚಾರ್ಲಿ’ ಬಳಿಕ ಕಿರಣ್ ಹೊಸ ಕಥೆಯಲ್ಲಿ ಬಿಜಿಯಿದ್ದಾರೆ. ‘ಮೊದಲರ್ಧ ಮುಗಿದಿದೆ. ದ್ವಿತೀಯಾರ್ಧ ಬರೆಯುತ್ತಿದ್ದೇನೆ. ಚಾರ್ಲಿ ಕಥೆಗೂ ತುಂಬ ಸಮಯ ತೆಗೆದುಕೊಂಡಿದ್ದೆ. ಇದು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸಿನಿಮಾ ಆದ ಕಾರಣ, ಇನ್ನೂ ಮೂರ್ನಾಲ್ಕು ತಿಂಗಳು ಸಮಯ ಬೇಕು’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts