More

    ಮಂಗಳೂರಿನಲ್ಲಿ ಇನ್ನೊಂದು ಪುರಾತನ ಬಾವಿ

    ಮಂಗಳೂರು: ಡೊಂಗರಕೇರಿ ಅಶ್ವತ್ಥಕಟ್ಟೆ ಸಮೀಪ ರಸ್ತೆ ಕಾಮಗಾರಿ ವೇಳೆ ಸುಸ್ಥಿತಿಯಲ್ಲಿರುವ ಪುರಾತನ ಬಾವಿ ಪತ್ತೆಯಾಗಿದೆ. ಇದು ಶತಮಾನಗಳ ಹಿಂದಿನ ಬಾವಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

    ಸುಮಾರು 50 ಅಡಿ ಆಳವಿದ್ದು, ಸುತ್ತ ಕೆಂಪುಕಲ್ಲಿನಿಂದ ಕಟ್ಟಲಾಗಿದೆ. 4.50 ಮೀಟರ್ ಅಗಲವಿರುವ ಈ ಬಾವಿಯಲ್ಲಿ ಸುಮಾರು 15 ಅಡಿ ಆಳದವರೆಗೆ ಶುದ್ಧ ನೀರು ಇದೆ. 1917ರಲ್ಲಿ ಅಂದಿನ ಮಂಗಳೂರು ಮುನ್ಸಿಪಾಲಿಟಿ ನಗರದ ವಿವಿಧೆಡೆ ತೋಡಿರುವ 18 ಬಾವಿಗಳಲ್ಲಿ ಈಗ ಪತ್ತೆಯಾಗಿರುವ ಬಾವಿಯೂ ಒಂದು. ಅಂದು ಅಲ್ಲಿನ ಬಹಳಷ್ಟು ಮನೆಯವರು ಈ ಬಾವಿಯ ನೀರು ಉಪಯೋಗಿಸುತ್ತಿದ್ದರು.

    ಮಂಗಳೂರು ಮುನ್ಸಿಪಾಲಿಟಿ ನಗರಕ್ಕೆ ನಲ್ಲಿ ನೀರಿನ ವ್ಯವಸ್ಥೆ ಮಾಡಿದ ಬಳಿಕ ಕ್ರಮೇಣ ಈ ಬಾವಿ ನೀರು ಬಳಕೆ ಕಡಿಮೆಯಾಯಿತು. ಒಂದೆರಡು ಮಂದಿ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ನಡೆದಿದೆ. ಬಳಿಕ ಉಪಯೋಗವಿಲ್ಲವೆಂದು 1969ರ ಸುಮಾರಿಗೆ ಬಾವಿಯನ್ನು ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ.

    ಪತ್ತೆಯಾದ ನಾಲ್ಕನೇ ಬಾವಿ: ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಪತ್ತೆಯಾಗಿರುವ ನಾಲ್ಕನೇ ಪುರಾತನ ಬಾವಿ ಇದು. ಈ ಹಿಂದೆ ಕಳೆದ ಸೆಪ್ಟೆಂಬರ್‌ನಲ್ಲಿ ಹಂಪನಕಟ್ಟೆ ಬಳಿ ಶತಮಾನದ ಹಿಂದಿನ ಬಾವಿ ಪತ್ತೆಯಾಗಿತ್ತು. ಆ ಬಾವಿಗೆ ಆವರಣ ನಿರ್ಮಿಸಿ ಸುಂದರಗೊಳಿಸಲಾಗಿದೆ. ಆ ಬಳಿಕ ಬೋಳಾರ ಜಂಕ್ಷನ್ ಬಳಿ ಬ್ರಿಟಿಷ್ ಕಾಲದ ಪುರಾತನ ಬಾವಿ ಗೋಚರಿಸಿತ್ತು. ತಿಂಗಳ ಹಿಂದೆ ನವಭಾರತ ಸರ್ಕಲ್ ಒಳಗಡೆಯೇ ಒಂದು ಬಾವಿ ಪತ್ತೆಯಾಗಿತ್ತು.

    ಈಗಾಗಲೇ 4 ಬಾವಿಗಳು ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಪತ್ತೆಯಾಗಿದೆ. ಈ ಪೈಕಿ ಹಂಪನಕಟ್ಟೆ ಬಾವಿಗೆ ಹೊಸ ರೂಪ ನೀಡಲಾಗಿದೆ. ಇನ್ನುಳಿದ ಮೂರು ಬಾವಿಗಳಿಗೂ ಕಾಯಕಲ್ಪ ನೀಡಲಾಗುವುದು. ಬಾವಿ ಉಳಿಸಿ ಕಾಮಗಾರಿ ನಡೆಸಲಾಗುವುದು. ನೀರು ಕುಡಿಯಲು ಯೋಗ್ಯವೇ ಎಂದೂ ಪರೀಕ್ಷೆ ನಡೆಸಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts