More

    ಮತ್ತೆ ಕೋವಿಡ್ ಕೇಂದ್ರವಾದ ಮಂಗಳೂರು

    ವೇಣುವಿನೋದ್ ಕೆ.ಎಸ್. ಮಂಗಳೂರು
    ರಾಜ್ಯದಲ್ಲೇ ಅತ್ಯಧಿಕ ಕೋವಿಡ್-19 ಪ್ರಕರಣ ದಾಖಲಿಸುತ್ತಿರುವ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಈಗ ಪ್ರತಿದಿನ ಎರಡು ಅಥವಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಕೇರಳದಿಂದ ಮಂಗಳೂರಿಗೆ ಓದಲು ಬರುತ್ತಿರುವ ವಿದ್ಯಾರ್ಥಿಗಳೆಂಬುದನ್ನು ಜಿಲ್ಲಾ ಆರೋಗ್ಯ ಇಲಾಖೆಯ ತಜ್ಞರು ಪತ್ತೆ ಮಾಡಿದ್ದಾರೆ.

    ಮಂಗಳೂರಿನಲ್ಲಿ 30ಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಕಾಲೇಜುಗಳು ಇದ್ದು, ಇದರಲ್ಲಿನ ಶೇ.90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇರಳ ಮೂಲದವರು. ಏಳು ಮೆಡಿಕಲ್ ಕಾಲೇಜುಗಳಿದ್ದು, ಅವುಗಳಲ್ಲೂ ಅಧಿಕ ಸಂಖ್ಯೆಯಲ್ಲಿ ಕೇರಳಿಗರಿದ್ದಾರೆ.

    ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಹೆಚ್ಚಾಗಿದ್ದ ಕೋವಿಡ್ ಪ್ರಕರಣ ನವೆಂಬರ್‌ನಿಂದ ಇಳಿಮುಖವಾಗಿತ್ತು. ಆ ಬಳಿಕ ಪ್ಯಾರಾಮೆಡಿಕಲ್ ಕಾಲೇಜುಗಳು ತೆರೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಪರಿಣಾಮ, ಡಿಸೆಂಬರ್ ವೇಳೆಗೆ ಕೆಲವು ಕಾಲೇಜುಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮುಂದುವರಿದು, ಸದ್ಯ ಕನಿಷ್ಠ 5 ಕಾಲೇಜುಗಳು ಕಂಟೇನ್ಮೆಂಟ್ ಜೋನ್‌ಗೆ ಒಳಪಟ್ಟಿವೆ.

    ವೈದ್ಯರಿಗೆ ಬುದ್ಧಿ ಹೇಳುವ ಪರಿಸ್ಥಿತಿ: ಮೆಡಿಕಲ್, ಪ್ಯಾರಾ ಮೆಡಿಕಲ್ ಕಾಲೇಜು ಎಂದರೆ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಬೋಧಕರಿಗೆ ಕೋವಿಡ್ ಪರಿಸ್ಥಿತಿಯ ಬಗ್ಗೆ ತಿಳಿ ಹೇಳಬೇಕಾಗಿಲ್ಲ. ಅವರಿಗೆ ಗೊತ್ತಿರಬೇಕು, ಆದರೆ ಆ ಕಡೆಯಿಂದ ತೀರಾ ನಿರ್ಲಕ್ಷೃದ ವರ್ತನೆ ಇರುವುದು ವಿಷಾದನೀಯ ಎನ್ನುತ್ತಾರೆ ಜಿಲ್ಲಾ ಕೋವಿಡ್ ಅಧಿಕಾರಿ ಡಾ.ಅಶೋಕ್.

    ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದರೂ ಅವರನ್ನು ಪ್ರತ್ಯೇಕವಾಗಿಸದೆ ಇತರರೊಂದಿಗೆ ಬೆರೆಯಲು ಬಿಟ್ಟಿರುವುದು, ಕೆಲವರನ್ನು ಪಾಸಿಟಿವ್ ಬಂದ ಬಳಿಕ ಅನೇಕರನ್ನು ಟೆಸ್ಟ್ ಮಾಡಿಸಿ ವರದಿ ಬರುವ ಮೊದಲೇ ಮನೆಗೆ ಕಳುಹಿಸಿದ್ದು ನಿರ್ಲಕ್ಷೃದ ಪರಮಾವಧಿ ಎಂದೇ ಪರಿಗಣಿಸಲಾಗಿದೆ.

    ‘ರ‌್ಯಾಟ್’ ಟೆಸ್ಟ್‌ಗೆ ಸೀಮಿತ: ಕೇರಳ ಕಡೆಯಿಂದ ಬರುವವರ ಮತ್ತೊಂದು ಬುದ್ಧಿವಂತಿಕೆ ಎಂದರೆ ಆರ್‌ಟಿ-ಪಿಸಿಆರ್ ಪರೀಕ್ಷೆ ಬದಲಿಗೆ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್(ರ‌್ಯಾಟ್) ಮಾಡಿಸಿಕೊಂಡು ಬರುವುದು. ನೂರರಲ್ಲಿ 80 ಮಂದಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿರುತ್ತಾರೆ. 20 ಮಂದಿ ರ‌್ಯಾಟ್ ಮಾಡಿಸಿರುತ್ತಾರೆ. ಅವರಲ್ಲಿ ಹಲವರ ವರದಿ ನಂಬಲರ್ಹವಲ್ಲ. ಅನೇಕ ಸಂದರ್ಭದಲ್ಲಿ ರ‌್ಯಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿದ್ದರೂ ವ್ಯಕ್ತಿ ಯಾವ ರೋಗಲಕ್ಷಣ ರಹಿತನಾಗಿ ವೈರಸ್ ಹೊಂದಿರುತ್ತಾನೆ. ಅವನಿಂದ ಹಲವರಿಗೆ ಸೋಂಕು ಹರಡುತ್ತದೆ ಎನ್ನುತ್ತಾರೆ ತಜ್ಞರು.

    ತೀವ್ರಗೊಂಡ ತಪಾಸಣೆ: ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿರುವ ಕಡೆಗಳಲ್ಲಿ ಕೋವಿಡ್ ಮತ್ತೆ ಹೆಚ್ಚುತ್ತಿರುವುದನ್ನು ಗಮನಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಈಗ ಅಂತಹ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದ ಸ್ಥಳೀಯ ವಿದ್ಯಾರ್ಥಿಗಳನ್ನು ಕಡ್ಡಾಯ 7 ದಿನದ ಐಸೊಲೇಶನ್‌ಗೆ ಕಳುಹಿಸುತ್ತಿದೆ, ಆ ಬಳಿಕ ಪರೀಕ್ಷೆ ನಡೆಸಿ ನೆಗೆಟಿವ್ ಬಂದ ಬಳಿಕವೇ ಕಾಲೇಜಿಗೆ ಬರಲು ಸೂಚನೆಯಿತ್ತಿದೆ. 10 ಕಾಲೇಜಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ತಂಡ ರಚನೆ ಮಾಡಿ ಎಲ್ಲ ಕಾಲೇಜುಗಳಲ್ಲೂ ಟೆಸ್ಟಿಂಗ್ ನಡೆಸಲಾಗುತ್ತಿದೆ. ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜಿಗೂ ಇದು ಅನ್ವಯವಾಗುತ್ತದೆ.

    ಕೇರಳ ಮೂಲದಿಂದ ಬರುವ ವಿದ್ಯಾರ್ಥಿಗಳಿರುವ ಕಡೆಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ನಾವೇ ತಂಡ ಮಾಡಿಕೊಂಡು ತೆರಳುತ್ತಿದ್ದೇವೆ. ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್‌ಗಳಿಗೂ ಈ ಬಗ್ಗೆ ನಿಗಾ ವಹಿಸುವಂತೆ ಸೂಚನೆಯಿತ್ತಿದ್ದೇವೆ.
    – ಡಾ.ಅಶೋಕ್, ಕೋವಿಡ್ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts