More

    ಫೋನ್‌ಇನ್‌ನಲ್ಲಿ ದೂರುಗಳ ಸುರಿಮಳೆ

    ಬೆಳಗಾವಿ: ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಮನೆ ಹಾನಿಗೊಳಗಾಗಿ ಅನೇಕ ತಿಂಗಳು ಕಳೆದರೂ ಹಾನಿಯ ಪರಿಹಾರ ಬಂದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಓಣಿಗಳಲ್ಲಿ ರಸ್ತೆ, ಬೀದಿ ದೀಪ, ಚರಂಡಿಗಳ ಸೌಲಭ್ಯಗಳು ಇಲ್ಲ…

    ಇವು ನಗರದ ಜಿಪಂ ಸಭಾಂಗಣದಲ್ಲಿ ಸಿಇಒ ಡಾ. ಕೆ.ವಿ. ರಾಜೇಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಗೋಕಾಕ, ಅಥಣಿ, ಬೆಳಗಾವಿ, ಬೈಲಹೊಂಗಲ ಸೇರಿ ವಿವಿಧ ತಾಲೂಕುಗಳಿಂದ ಸಾರ್ವಜನಿಕರು ಸಲ್ಲಿಸಿದ ದೂರುಗಳು.

    ಅಥಣಿ, ಗೋಕಾಕ ತಾಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರು ನೆರೆಯಿಂದ ಮನೆ, ಬೆಳೆಗಳ ಹಾನಿ ಅನುಭವಿಸಿದ್ದಾರೆ. ನಾಲ್ಕೈದು ತಿಂಗಳು ಕಳೆದರೂ ಪರಿಹಾರ ಬಂದಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೆಲ ಸಂತ್ರಸ್ತರು ಪರಿಹಾರ ಸಿಗದೇ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಕೂಡಲೇ ನೆರೆ ಹಾನಿ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಅನೇಕ ಸಂತ್ರಸ್ತರು ಆಗ್ರಹಿಸಿದರು.

    ಸೌಲಭ್ಯ ನೀಡಿ: ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಖಾಸಗಿ ಬಡಾವಣೆಗಳಲ್ಲಿನ ಜನರು ದೂರವಾಣಿ ಮೂಲಕ ಕುಡಿಯುವ ನೀರು, ರಸ್ತೆ, ಒಳಚರಂಡಿ ಹಾಗೂ ಬಿದಿ ದೀಪ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು. ನಿಯಮದ ಪ್ರಕಾರವೇ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಇದೀಗ ಅನಧಿಕೃತ ಬಡವಾಣೆಗಳು ಎಂದು ಹೇಳಿಕೊಂಡು ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.

    ಬೈಲಹೊಂಗಲ, ಹುಕ್ಕೇರಿ ಇತರ ತಾಲೂಕುಗಳಲ್ಲಿನ ಗ್ರಾಮಸ್ಥರು, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಘಟಕ ನಿರ್ಮಿಸಲಾಗಿದೆ. ಆದರೆ, ಯಾವುದೇ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ದಿನ ಆರಂಭವಾದರೆ ಮತ್ತೊಂದು ದಿನ ಬಂದ್ ಆಗಿರುತ್ತವೆ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.

    ಪರಿಹಾರ ವಿತರಣೆ: ದೂರುಗಳಿಗೆ ಸ್ಪಂದಿಸಿದ ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಅವರು, ಪ್ರವಾಹ ಸಂತ್ರಸ್ತರಿಗೆ ಮೊದಲ ಕಂತಿನ ಪರಿಹಾರ ವಿತರಣೆ ಮಾಡಲಾಗಿದೆ. ಬಾಕಿ ಉಳಿದಿರುವ ಪರಿಹಾರ ಹಂತ ಹಂತವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ. ಇಲ್ಲಿಯವರೆಗೆ ಪರಿಹಾರ ಬಾರದಿರುವ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.

    ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ಮಿಸಿಕೊಂಡಿರುವ ಬಹುತೇಕ ಬಡಾವಣೆಗಳು ಅನಧಿಕೃತವಾಗಿರುವುದರಿಂದ ಅವುಗಳಿಗೆ ಸೌಕರ್ಯ ಕಲ್ಪಿಸುವುದು ಕಷ್ಟ. ಗ್ರಾಪಂಗಳಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಏಜೆಂಟರಿಗೆ ವಹಿಸಲಾಗುವುದು. ಬಂದ್ ಆಗಿರುವ ಘಟಕಗಳನ್ನು ತಕ್ಷಣದಿಂದಲೇ ಆರಂಭಿಸಲು ಸೂಚಿಸಿದ್ದೇನೆ ಎಂದು ದೂರುದಾರರಿಗೆ ತಿಳಿಸಿದರು.

    ಫೋನ್‌ಇನ್ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಜಿಲ್ಲೆಯ ವಿವಿಧ ಭಾಗಗಳಿಂದ 36 ದೂರುಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಪ್ರತಿ ಶುಕ್ರವಾರ ನಡೆಯುವ ಪೋನ್ ಇನ್ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು.
    | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ

    ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಇತರ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾಕಷ್ಟು ದೂರುಗಳು ಬಂದಿದ್ದವು. ಅದರಲ್ಲಿ ಮುರಗೋಡದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿವೆ ಎಂದು ಸುಳ್ಳು ದೂರು ನೀಡಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
    | ಎಸ್.ಬಿ. ಮುಳ್ಳಳ್ಳಿ ಜಿಪಂ ಉಪ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts