More

    ಜನ್ಮದಿನವನ್ನು ಸಂಭ್ರಮಿಸದೆ ರೈತರ ಪರ ನಿಂತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಶನಿವಾರ 39ನೇ ವರ್ಷಕ್ಕೆ ಕಾಲಿಟ್ಟರು. ಈ ವೇಳೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಪ್ರಕಟಿಸುವ ಮೂಲಕ ರೈತರ ಪರ ನಿಂತಿದ್ದು, ಮಾತುಕತೆಯ ಮೂಲಕ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಲಭಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಕರೊನಾ ವೈರಸ್ ವಿರುದ್ಧ ಜನರು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ‘ಅಪೇಕ್ಷೆ ಅಥವಾ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಜನ್ಮದಿನ ಉತ್ತಮವಾದ ಅವಕಾಶವಾಗಿದೆ. ಹೀಗಾಗಿ ಈ ಸಲದ ಜನ್ಮದಿನವನ್ನು ನಾನು ಸಂಭ್ರಮಿಸುವ ಬದಲಾಗಿ, ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿ ನಮ್ಮ ರೈತರು ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಮಾತುಕತೆಯಿಂದ ಶೀಘ್ರ ಪರಿಹಾರ ಸಿಗಲಿ ಎಂದು ಹಾರೈಕೆ ಮತ್ತು ಪ್ರಾರ್ಥನೆಯನ್ನಷ್ಟೇ ಮಾಡುತ್ತೇನೆ’ ಎಂದು ಯುವರಾಜ್ ಸಿಂಗ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ‘ನಿಸ್ಸಂಶಯವಾಗಿ ರೈತರು ದೇಶದ ಬೆನ್ನೆಲುಬು. ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲಾಗದ ಸಮಸ್ಯೆ ಯಾವುದೂ ಇಲ್ಲ ಎಂದು ನಂಬಿರುವವನು ನಾನು’ ಎಂದು 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಹೇಳಿದ್ದಾರೆ.

    ಈ ನಡುವೆ ರೈತರ ಹೋರಾಟದ ಬಗ್ಗೆ ತಂದೆ ಯೋಗರಾಜ್ ಸಿಂಗ್ ಆಡಿರುವ ಅಹಿತಕರ ಮಾತಿನಿಂದ ಅಂತರ ಕಾಯ್ದುಕೊಂಡಿರುವ ಯುವರಾಜ್, ‘ಹೆಮ್ಮೆಯ ಭಾರತೀಯನಾಗಿ ನನಗೆ ಯೋಗರಾಜ್ ಸಿಂಗ್ ಅವರ ಮಾತಿನಿಂದ ಅಪಾರ ಬೇಸರವಾಗಿದೆ. ಅವರ ಹೇಳಿಕೆ ವೈಯಕ್ತಿಕವಾದುದು. ನನ್ನ ಆಲೋಚನೆಗಳು ಅವರ ರೀತಿಯಲ್ಲಿಲ್ಲ’ ಎಂದಿದ್ದಾರೆ.

    ‘ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಎಲ್ಲರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಸಾಂಕ್ರಾಮಿಕ ಪಿಡುಗು ಇನ್ನೂ ನಿವಾರಣೆಯಾಗಿಲ್ಲ. ವೈರಸ್ ಅನ್ನು ಸಂಪೂರ್ಣವಾಗಿ ಸೋಲಿಸುವವರೆಗೆ ನಾವು ಎಚ್ಚರಿಕೆಯಿಂದ ಇರುವುದನ್ನು ಮುಂದುವರಿಸಬೇಕು’ ಎಂದಿರುವ ಯುವರಾಜ್, ಕೊನೆಯಲ್ಲಿ ‘ಜೈ ಜವಾನ್, ಜೈ ಕಿಸಾನ್, ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.

    ಇದೇ ವೇಳೆ, ಹಾಲಿ-ಮಾಜಿ ಕ್ರಿಕೆಟಿಗರು, ಮಾಜಿ ಸಹ-ಆಟಗಾರರು ಮತ್ತು ಕ್ರಿಕೆಟ್ ವಲಯದಿಂದ ಯುವರಾಜ್ ಸಿಂಗ್ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts