More

    ಡಿ.22, 27ರಂದು ಗ್ರಾಪಂ ಚುನಾವಣೆ

    ಬೆಳಗಾವಿ: ಜಿಲ್ಲೆಯಲ್ಲಿ ಡಿ. 22 ಹಾಗೂ ಡಿ. 27ರಂದು ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಡಿ. 7 ಮತ್ತು ಎರಡನೇ ಹಂತದ ಚುನಾವಣೆಗೆ ಡಿ. 11ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಧಿಸೂಚನೆ ಹೊರಡಿಸಿದ ಬಳಿಕ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೊದಲನೇ ಹಂತಕ್ಕೆ ಡಿ. 11, ಎರಡನೇ ಹಂತಕ್ಕೆ ಡಿ. 16 ಕಡೆಯ ದಿನವಾಗಿದೆ ಎಂದು ತಿಳಿಸಿದರು.

    ಪ್ರಕ್ರಿಯೆ ವಿವರ: ಮೊದಲನೇ ಹಂತದ ನಾಮಪತ್ರ ಪರಿಶೀಲನೆ ಡಿ. 12ರಂದು ಹಾಗೂ ಎರಡನೇ ಹಂತಕ್ಕೆ ಡಿ. 17ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೊದಲ ಹಂತಕ್ಕೆ ಡಿ. 14 ಹಾಗೂ ಎರಡನೇ ಹಂತಕ್ಕೆ ಡಿ. 19 ಕೊನೆಯ ದಿನವಾಗಿದೆ. ಮೊದಲ ಹಂತದ ಚುನಾವಣೆಗೆ ಡಿ.22ರಂದು ಹಾಗೂ ಎರಡನೇ ಹಂತಕ್ಕೆ ಡಿ. 27ರಂದು ಮತದಾನ ನಡೆಯಲಿದೆ. ಡಿ. 30ರಂದು ಮತ ಎಣಿಕೆ
    ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

    477 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ: ಜಿಲ್ಲೆಯ ಒಟ್ಟು 499 ಗ್ರಾಪಂ ಪೈಕಿ 2020ರ ಡಿಸೆಂಬರ್ ಅಂತ್ಯದವರೆಗೆ ಅವಧಿ ಮುಕ್ತಾಯವಾಗಲಿರುವ 477 ಪಂಚಾಯಿತಿಯ 2,738 ಕ್ಷೇತ್ರಗಳಿಗೆ, ವಿವಿಧ ವರ್ಗವಾರು 8,195 ಸದಸ್ಯ ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುವುದು. ಸಂಬಂಧಪಟ್ಟ ಗ್ರಾಪಂಗಳಲ್ಲಿ ನಾಮಪತ್ರ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

    25.24 ಲಕ್ಷ ಮತದಾರರು: ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 12,84,695 ಪುರುಷರು ಮತ್ತು 12,39,486 ಮಹಿಳೆಯರು ಸೇರಿ ಒಟ್ಟು 25,24,181 ಮತದಾರರು ಇದ್ದಾರೆ. ಚುನಾವಣಾ ಪ್ರಕ್ರಿಯೆಗೆ 534 ಚುನಾವಣಾಧಿಕಾರಿಗಳು ಹಾಗೂ 576 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹಿರೇಮಠ ಅವರು ತಿಳಿಸಿದರು.

    ಡಿ.31ರ ವರೆಗೆ ನೀತಿಸಂಹಿತೆ: ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 30ರಿಂದ ಡಿಸೆಂಬರ್
    31ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರಲಿದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆಯ ಪ್ರದೇಶಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ಪಷ್ಟಪಡಿಸಿದರು.

    ಬಿಗಿ ಬಂದೋಬಸ್ತ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಹಣ-ಹೆಂಡ ಹಂಚಿಕೆಯ ಮೂಲಕ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಮತಗಟ್ಟೆ ಗುರುತಿಸಿ ಅವುಗಳ ಆಧಾರದ ಮೇಲೆ ಭದ್ರತಾ ಮತ್ತಿತರ ವಿಚಕ್ಷಣಾ ತಂಡ ನಿಯೋಜಿಸಲಾಗುವುದು ಎಂದು ತಿಳಿಸಿದರು. ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ತಾಲೂಕುವಾರು ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು. ಉಳಿದಂತೆ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಎಲ್ಲ ರೀತಿ ವ್ಯವಸ್ಥೆ ಮಾಡಲಾಗುವುದು. ಅಂತಾರಾಜ್ಯ, ಅಂತರ್‌ಜಿಲ್ಲೆ ಹಾಗೂ ಅಂತರ್ ತಾಲೂಕು ಮಾದರಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಗಡಿ ತಾಲೂಕುಗಳಿಗೆ ಸಂಬಂಧಿಸಿದಂತೆ ನೆರೆಯ ರಾಜ್ಯದ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

    7 ಗ್ರಾಪಂಗೆ ಚುನಾವಣೆ ಇಲ್ಲ: ಕಾಗವಾಡ ತಾಲೂಕಿನ ಕಾಗವಾಡ, ಯರಗಟ್ಟಿ ತಾಲೂಕಿನ ಯರಗಟ್ಟಿ, ಬೆಳಗಾವಿ ತಾಲೂಕಿನ ಮಚ್ಚೆ, ಪೀರನವಾಡಿ, ಧೂಪದಾಳ ಹಾಗೂ ಗೋಕಾಕ ತಾಲೂಕಿನ ಅಂಕಲಗಿ, ಅಕ್ಕತಂಗೇರಹಾಳ ಗ್ರಾಪಂಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿವೆ. ಹೀಗಾಗಿ ಇವುಗಳಿಗೆ ಚುನಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

    ಅಕ್ರಮದ ಮಾಹಿತಿ ನೀಡಲು ಕಂಟ್ರೋಲ್ ರೂಮ್: ಆಯಾ ತಾಲೂಕುಗಳಲ್ಲಿ ಡಿ. 30ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಅಕ್ರಮ ಕಂಡುಬಂದಲ್ಲಿ ಕಂಟ್ರೋಲ್ ರೂಮ್ ನಂಬರ್-112ಕ್ಕೆ ಸಾರ್ವಜನಿಕರು ಮಾಹಿತಿ ನೀಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts