More

    ಕಾನ್ಪುರ ಟೆಸ್ಟ್‌ನಲ್ಲಿ ಕುಸಿದ ಭಾರತಕ್ಕೆ ಶ್ರೇಯಸ್-ಜಡೇಜಾ ಆಸರೆ

    ಕಾನ್ಪುರ: ಪದಾರ್ಪಣೆಯ ಟೆಸ್ಟ್‌ನಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್ (75*ರನ್, 136 ಎಸೆತ, 7 ಬೌಂಡರಿ, 2 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಹೋರಾಟದಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೌರವಯುತ ಮೊತ್ತದತ್ತ ಮುನ್ನಡೆದಿದೆ. ಆಲ್ರೌಂಡರ್ ರವೀಂದ್ರ ಜಡೇಜಾ (50*ರನ್, 100 ಎಸೆತ, 6 ಬೌಂಡರಿ) ಒದಗಿಸಿದ ಉತ್ತಮ ಬೆಂಬಲದಿಂದ ಶ್ರೇಯಸ್, ಕಿವೀಸ್ ಬೌಲರ್‌ಗಳಿಗೆ ಕಗ್ಗಂಟಾದರು.

    ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಕಿವೀಸ್ ವೇಗಿಗಳಿಂದ ಆಘಾತ ಎದುರಿಸಿತು. ಆಗ ಜತೆಗೂಡಿದ ಶ್ರೇಯಸ್-ಜಡೇಜಾ ಜೋಡಿ ಮುರಿಯದ 5ನೇ ವಿಕೆಟ್‌ಗೆ 113 ರನ್ ಸೇರಿಸಿತು. ಇದರಿಂದ ಭಾರತ ತಂಡ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 258 ರನ್ ಪೇರಿಸಿ ಸದೃಢ ಸ್ಥಿತಿಯಲ್ಲಿದೆ. ಕಿವೀಸ್ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದರೂ, ಮೊದಲ ದಿನ ಭಾರತವನ್ನು ವೇಗಿಗಳಷ್ಟೇ ಕಾಡಿದರು. ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಎನಿಸಲಿಲ್ಲ. ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಸಿಡಿಸುವತ್ತ ಮುನ್ನಡೆದಿರುವ ಶ್ರೇಯಸ್ ಮತ್ತು 17ನೇ ಅರ್ಧಶತಕ ಪೂರೈಸಿದ ಜಡೇಜಾ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಶ್ರೇಯಸ್-ಜಡೇಜಾ ಆಸರೆ
    ಚಹಾ ವಿರಾಮಕ್ಕೆ ಮುನ್ನ ಭಾರತ ತಂಡ 145 ರನ್‌ಗೆ ಅಗ್ರ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜತೆಗೂಡಿದ ಶ್ರೇಯಸ್-ಜಡೇಜಾ ಜೋಡಿ ಕೊನೇ ಅವಧಿ ಪೂರ್ತಿ ಕಿವೀಸ್‌ಗೆ ಸವಾಲಾಗಿ ನಿಂತಿತು. ಈ ಬಲಗೈ-ಎಡಗೈ ಜೋಡಿ ತಾಳ್ಮೆ ಮಿಶ್ರಿತ ಆಕ್ರಮಣಕಾರಿ ಆಟದೊಂದಿಗೆ ಮೊತ್ತ ಏರಿಸಿತು. ಭಾರತ ಪರ 22 ಏಕದಿನ ಮತ್ತು 32 ಟಿ20 ಪಂದ್ಯ ಆಡಿದ ಬಳಿಕ ಟೆಸ್ಟ್ ಪದಾರ್ಪಣೆ ಮಾಡಿದ ಶ್ರೇಯಸ್, ಆ ಅನುಭವವನ್ನು ಇಲ್ಲಿ ಬಳಸಿಕೊಂಡರು. ಜಡೇಜಾ ಅರ್ಧಶತಕ ಪೂರೈಸಿ ಎಂದಿನಂತೆ ಖಡ್ಗ ಝಳಪಿಸುವಂತೆ ಸಂಭ್ರಮಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ತಿಣುಕಾಡಿದ ಕಿವೀಸ್, 80 ಓವರ್ ಪೂರ್ಣಗೊಂಡ ಬೆನ್ನಲ್ಲೇ ಹೊಸ ಚೆಂಡು ತೆಗೆದುಕೊಂಡಿತು. ಆದರೆ ಆಗ ಮಂದ ಬೆಳಕಿನ ಅಡಚಣೆ ಕಾಡಿದ್ದರಿಂದ 6 ಓವರ್ ಮುನ್ನವೇ ದಿನದಾಟ ಕೊನೆಗೊಂಡಿತು.

    ಗಿಲ್ ಶುಭ ಆರಂಭ
    ಕೆಎಲ್ ರಾಹುಲ್-ರೋಹಿತ್ ಶರ್ಮ ಗೈರಿನಲ್ಲಿ ಹೊಸ ಆರಂಭಿಕ ಜೋಡಿಯಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಶುಭಮಾನ್ ಗಿಲ್ ಇನಿಂಗ್ಸ್ ಆರಂಭಿಸಿದರು. ಆದರೆ ಮಯಾಂಕ್ ಪಂದ್ಯದ 8ನೇ ಓವರ್‌ನಲ್ಲೇ ವಿಕೆಟ್ ಕೀಪರ್ ಬ್ಲಂಡೆಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಮತ್ತೋರ್ವ ಆರಂಭಿಕ ಶುಭಮಾನ್ ಗಿಲ್ (52 ರನ್, 93 ಎಸೆತ, 5 ಬೌಂಡರಿ, 1 ಸಿಕ್ಸರ್) ಆಸರೆಯಾಗಿ ನಿಂತರು. ವನ್‌ಡೌನ್ ಬ್ಯಾಟರ್ ಚೇತೇಶ್ವರ ಪೂಜಾರ (26) ಜತೆಗೂಡಿ 2ನೇ ವಿಕೆಟ್‌ಗೆ 61 ರನ್ ಸೇರಿಸಿದರು. ಇದರಿಂದ ಭಾರತ ಭೋಜನ ವಿರಾಮದ ವೇಳೆಗೆ 1 ವಿಕೆಟ್‌ಗೆ 82 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ವಿರಾಮದ ಬಳಿಕ ಮೊದಲ ಓವರ್‌ನಲ್ಲೇ ಗಿಲ್ ಔಟಾದರೆ, ಪೂಜಾರ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟಿಮ್ ಸೌಥಿ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಕಾಡಿದ ಜೇಮಿಸನ್
    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್‌ನಲ್ಲಿ ಭಾರತವನ್ನು ಕಾಡಿದ್ದ ಲಂಬೂ ವೇಗಿ ಕೈಲ್ ಜೇಮಿಸನ್ (47ಕ್ಕೆ 3), ತವರಿನ ವಾತಾವರಣದಲ್ಲೂ ಭಾರತ ತಂಡಕ್ಕೆ ಸವಾಲಾದರು. ಆರಂಭಿಕ ಮಯಾಂಕ್ ಅಗರ್ವಾಲ್ (13) ವಿಕೆಟ್ ಕಬಳಿಸಿ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದ್ದ ಜೇಮಿಸನ್, ಬಳಿಕ ಶುಭಮಾನ್ ಗಿಲ್ ಮತ್ತು ಹಂಗಾಮಿ ನಾಯಕ ಅಜಿಂಕ್ಯ ರಹಾನೆ (35) ಇಬ್ಬರನ್ನೂ ಬೌಲ್ಡ್ ಮಾಡಿದರು. ರನ್‌ಬರ ನೀಗಿಸುವ ಒತ್ತಡದಲ್ಲಿರುವ ಟೆಸ್ಟ್ ತಜ್ಞ ಬ್ಯಾಟರ್‌ಗಳಾದ ಪೂಜಾರ ಮತ್ತು ರಹಾನೆ ಉತ್ತಮ ಆರಂಭ ಕಂಡರೂ, ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ಶಕ್ತರಾಗಲಿಲ್ಲ.

    ಶ್ರೇಯಸ್‌ಗೆ ಕ್ಯಾಪ್ ನೀಡಿದ ಸನ್ನಿ
    ನಿರೀಕ್ಷೆಯಂತೆಯೇ ಟೆಸ್ಟ್ ಪದಾರ್ಪಣೆ ಮಾಡಿದ ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ದಿಗ್ಗಜ ಸುನೀಲ್ ಗಾವಸ್ಕರ್ ಪಂದ್ಯಕ್ಕೆ ಮುನ್ನ ಟೆಸ್ಟ್ ಕ್ಯಾಪ್ ಪ್ರದಾನ ಮಾಡಿದರು. 26 ವರ್ಷದ ಶ್ರೇಯಸ್ ಭಾರತ ಪರ ಟೆಸ್ಟ್ ಆಡಿದ 303ನೇ ಆಟಗಾರ ಎನಿಸಿದರು. ಈ ಮೂಲಕ ಅವರು ಎಲ್ಲ 3 ಕ್ರಿಕೆಟ್ ಪ್ರಕಾರಗಳಲ್ಲೂ ಭಾರತವನ್ನು ಪ್ರತಿನಿಧಿಸಿದ ಸಾಧನೆ ಮಾಡಿದರು. ಪದಾರ್ಪಣೆ ಮಾಡುವ ಯುವ ಆಟಗಾರರಿಗೆ ಭಾರತೀಯ ದಿಗ್ಗಜರಿಂದ ಕ್ಯಾಪ್ ನೀಡುವ ಸಂಪ್ರದಾಯವನ್ನು ಹೊಸ ಕೋಚ್ ರಾಹುಲ್ ದ್ರಾವಿಡ್ ಮರಳಿ ಜಾರಿಗೆ ತಂದಿದ್ದಾರೆ. ಈ ಮುನ್ನ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್‌ಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಕ್ಯಾಪ್ ನೀಡಿದ್ದರು.

    *282: 22 ವರ್ಷದ ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ಟೆಸ್ಟ್ ಪದಾರ್ಪಣೆ ಮಾಡಿದ 282ನೇ ಆಟಗಾರ ಎನಿಸಿದರು. ಜತೆಗೆ ಇಶ್ ಸೋಧಿ (21 ವರ್ಷ) ಬಳಿಕ ಕಿವೀಸ್ ಪರ ಟೆಸ್ಟ್ ಪದಾರ್ಪಣೆ ಮಾಡಿದ ಅತಿ ಕಿರಿಯರೆನಿಸಿದರು.

    *8: ಬೆಂಗಳೂರು ಮೂಲದ ರಚಿನ್ ರವೀಂದ್ರ ಕಿವೀಸ್ ಪರ ಟೆಸ್ಟ್ ಆಡಿದ 8ನೇ ಭಾರತ ಮೂಲದ ಸ್ಪಿನ್ನರ್ ಎನಿಸಿದರು. ದೀಪಕ್ ಪಟೇಲ್, ಇಶ್ ಸೋಧಿ, ಜೀತನ್ ಪಟೇಲ್, ಜೀತ್ ರಾವಲ್, ಅಜಾಜ್ ಪಟೇಲ್, ರೋನಿ ಹಿರಾ ಮತ್ತು ತರುಣ್ ನೆಥುಲಾ ಹಿಂದಿನ ಸಾಧಕರು.

    ಭಾರತ: 84 ಓವರ್‌ಗಳಲ್ಲಿ 4 ವಿಕೆಟ್‌ಗೆ 258 (ಮಯಾಂಕ್ 13, ಶುಭಮಾನ್ ಗಿಲ್ 52, ಪೂಜಾರ 26, ರಹಾನೆ 35, ಶ್ರೇಯಸ್ ಅಯ್ಯರ್ 75*, ರವೀಂದ್ರ ಜಡೇಜಾ 50*, ಜೇಮಿಸನ್ 47ಕ್ಕೆ 3 ).

    ಐಪಿಎಲ್ 15ನೇ ಆವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts