More

    ಸುರೇಶ್ ರೈನಾರನ್ನು ಕೈಬಿಟ್ಟಿದ್ದಕ್ಕೆ ಕಾರಣ ವಿವರಿಸಿದ ಚೆನ್ನೈ ಸೂಪರ್‌ಕಿಂಗ್ಸ್

    ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ರನ್‌ಪ್ರವಾಹವನ್ನೇ ಹರಿಸಿರುವ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಈ ಬಾರಿಯ ಆಟಗಾರರ ಹರಾಜಿನಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ. ಇದರಿಂದಾಗಿ ಐಪಿಎಲ್ 15ನೇ ಆವೃತ್ತಿಯಲ್ಲಿ ಆಡುವ ಅವಕಾಶ ಅವರ ಕೈತಪ್ಪಿದೆ. ಈ ಬಾರಿ ರೈನಾ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಕಾರಣಗಳನ್ನು ವಿವರಿಸಿದ್ದು, ‘ಹಾಲಿ ಫಾರ್ಮ್‌ನಲ್ಲಿ ರೈನಾ ತಂಡಕ್ಕೆ ಸೂಕ್ತ ಆಟಗಾರರಂತೆ ಕಾಣಿಸುತ್ತಿಲ್ಲ’ ಎಂದು ಹೇಳಿದ್ದಾರೆ. ಜತೆಗೆ, ‘ನಾವೂ ರೈನಾರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಅವರು ಈ ಹಿಂದೆ ತಂಡಕ್ಕೆ ದೊಡ್ಡ ಆಸ್ತಿಯಾಗಿದ್ದರು’ ಎಂದು ಹೇಳಿದ್ದಾರೆ.

    ರೈನಾ ಐಪಿಎಲ್‌ನ 12 ಆವೃತ್ತಿಗಳಲ್ಲಿ ಸಿಎಸ್‌ಕ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ 2 ಕೋಟಿ ರೂ. ಮೂಲಬೆಲೆ ಹೊಂದಿದ್ದ ಅವರನ್ನು ಸಿಎಸ್‌ಕೆ ಸಹಿತ ಯಾವುದೇ ತಂಡ ಖರೀದಿಸಲು ಆಸಕ್ತಿ ತೋರಿರಲಿಲ್ಲ. ಅವರು ಸಿಎಸ್‌ಕೆ ತಂಡ ಉಪನಾಯಕ ಮತ್ತು ಧೋನಿ ಗೈರಾದಾಗ ಕೆಲ ಪಂದ್ಯಗಳಿಗೆ ಹಂಗಾಮಿ ನಾಯಕರೂ ಆಗಿದ್ದರು. ಧೋನಿ ಜತೆಗೆ ಉತ್ತಮ ಸ್ನೇಹವನ್ನೂ ಹೊಂದಿರುವ ರೈನಾ, ಧೋನಿ ಜತೆಯಲ್ಲೇ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದರು.

    ‘ಮಿಸ್ಟರ್ ಐಪಿಎಲ್’ ಎಂದೇ ಕರೆಯಲ್ಪಡುತ್ತಿದ್ದ ರೈನಾ, ಐಪಿಎಲ್‌ನಲ್ಲಿ ಒಟ್ಟಾರೆ 205 ಪಂದ್ಯವಾಡಿದ್ದು, 1 ಶತಕ, 39 ಅರ್ಧಶತಕಗಳ ಸಹಿತ 5,528 ರನ್ ಬಾರಿಸಿದ್ದಾರೆ. ಸಿಎಸ್‌ಕೆ ಅಭಿಮಾನಿಗಳಿಂದ ‘ಚಿನ್ನ ಥಲಾ’ ಎಂದೇ ಕರೆಯಲ್ಪಡುತ್ತಿದ್ದರು. ರೈನಾರನ್ನು ಕಡೆಗಣಿಸಿದ್ದಕ್ಕೆ ಸಿಎಸ್‌ಕೆ ಅಭಿಮಾನಿಗಳಿಂದಲೂ ಈಗಾಗಲೆ ಆಕ್ರೋಶ ವ್ಯಕ್ತವಾಗಿದೆ.

    ಕಳೆದ ವರ್ಷದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್‌ರನ್ನು ಆರ್‌ಸಿಬಿಗೆ ಬಿಟ್ಟುಕೊಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕಾಶಿ ವಿಶ್ವನಾಥನ್, ಡ್ವೇನ್ ಬ್ರಾವೊ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್ ಮತ್ತು ದೀಪಕ್ ಚಹರ್‌ರನ್ನು ಉಳಿಸಿಕೊಳ್ಳಲು ಯಶಸ್ವಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಹರಾಜಿನ ಆರ್ಥಿಕ ಲೆಕ್ಕಾಚಾರ ಭಿನ್ನವಾದುದು. ಎಲ್ಲರನ್ನೂ ರಿಟೇನ್ ಮಾಡಿಕೊಳ್ಳುವುದು ಕಷ್ಟಕರ. ಹೀಗಾಗಿ ಕೆಲವರನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅವರ ಬದಲಿಗೆ ಬೇರೆಯವರನ್ನು ಪಡೆದುಕೊಂಡಿದ್ದೇವೆ. ಇನ್ನೀಗ ಅವರಿಂದ ನಾವು ನಮಗೆ ಬೇಕಾದ ಶ್ರೇಷ್ಠ ನಿರ್ವಹಣೆಯನ್ನು ಪಡೆದುಕೊಳ್ಳಬೇಕಿದೆ’ ಎಂದು ಕಾಶಿ ವಿವರಿಸಿದ್ದಾರೆ.

    ದೀಪಕ್ ಚಹರ್‌ಗೆ 14 ಕೋಟಿ ರೂ. ವ್ಯಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಸ್‌ಕೆ ಸಿಇಒ, ದೀಪಕ್ ಚಹರ್ ಅವರೊಬ್ಬ ಮ್ಯಾಚ್ ವಿನ್ನರ್. ನಮ್ಮ ತಂಡದ ಪರ ಅತ್ಯುತ್ತಮ ನಿರ್ವಹಣೆ ತೋರುತ್ತ ಬಂದಿದ್ದಾರೆ. ಹೀಗಾಗಿ ಅವರ ಮೇಲೆ ಹೆಚ್ಚಿನ ಬಿಡ್ ಮಾಡಿದೆವು ಎಂದು ಹೇಳಿದ್ದಾರೆ. ಸಿಎಸ್‌ಕೆ ತಂಡ ನಾಯಕ ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಅವರನ್ನು ಈ ಮೊದಲೇ ರಿಟೇನ್ ಮಾಡಿಕೊಂಡಿತ್ತು.

    ಐಪಿಎಲ್‌ನಲ್ಲಿ ಶ್ರೇಯಸ್, ಪ್ಲೆಸಿಸ್, ಧವನ್‌ಗೆ ನಾಯಕತ್ವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts