More

    ಪರಿಹಾರ ಹಣಕ್ಕಾಗಿ ವೃದ್ಧೆಯ ಪರದಾಟ

    ಬ್ಯಾಡಗಿ: ಅತಿವೃಷ್ಟಿಯ ಸಂಕಷ್ಟದಲ್ಲಿ ರೈತರಿಗೆ ನೆರವಾಗಬೇಕಿದ್ದ ಬೆಳೆ ಪರಿಹಾರ ಹಣ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ಇಲಾಖೆ ನಿರ್ಲಕ್ಷ್ಯಂದ ಅನ್ಯರ ಪಾಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ಸಂತ್ರಸ್ತ ವೃದ್ಧೆಯೊಬ್ಬರು ಮೂರು ವರ್ಷಗಳಿಂದ ಹಣಕ್ಕಾಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಅಲೆದಾಡಿ ಸುಸ್ತಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.

    ತಾಲೂಕಿನ ತಿಮ್ಮಾಪುರ ಗ್ರಾಮದ ಇಂದ್ರಮ್ಮ ಚಿಕ್ಕಳ್ಳಿ ಪರಿಹಾರದಿಂದ ವಂಚಿತಗೊಂಡ ವೃದ್ಧೆ. ಇವರು 2019-20ನೇ ಸಾಲಿನಲ್ಲಿ ಬೆಳೆ ಹಾನಿ ಪರಿಹಾರಕ್ಕೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ, ಗ್ರಾಮ ಪಂಚಾಯಿತಿ, ತಾಲೂಕಿನ ನೋಡಲ್ ಅಧಿಕಾರಿ ಸೇರಿದಂತೆ ಐದು ಜನರ ತಂಡ ಬೆಳೆ ಪರಿಶೀಲಿಸಿತ್ತು. ಜಿಪಿಎಸ್ ಮಾಡಿಕೊಂಡು, ತೀವ್ರ ಮಳೆಗೆ ಹಾನಿಗೊಂಡ ಬೆಳೆಗೆ ಶೇಕಡವಾರು ಹಾನಿ ಅಂದಾಜು ನಮೂದಿಸಿ, ಪರಿಹಾರ ಮಂಜೂರಾತಿಗೆ ಶಿಫಾರಸು ನೀಡಿತ್ತು. ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಆಧಾರ, ಪಾಸ್ ಬುಕ್ ಪಡೆದಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈತ ಅನುವುಗಾರನ ಹೆಸರಿಗೆ ಗ್ರಾಮಲೆಕ್ಕಾಧಿಕಾರಿಯೊಬ್ಬರು ತನ್ನ ಲಾಗಿನ್​ನಿಂದ ಹಣ ಜಮೆ ಮಾಡಿ ವೃದ್ಧೆಗೆ ಮೋಸವೆಸಗಿದ್ದಾರೆ. ಈ ವಂಚನೆಯು ತೀವ್ರ ಚರ್ಚೆಗೂ ಕಾರಣವಾಗಿತ್ತು. ಬಳಿಕ ಆಗಿನ ಆಪರ ಜಿಲ್ಲಾಧಿಕಾರಿಯವರು ಗ್ರಾಮಲೆಕ್ಕಾಧಿಕಾರಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿತನ ಅಮಾನತು ಸಹ ಆಗಿಲ್ಲ; ಬದಲಾಗಿ ಬೇರೆ ಸ್ಥಳಕ್ಕೆ ನಿಯೋಜಿಸಲಾಗಿದೆ.

    30 ಸಾವಿರ ರೂ.ಗೆ ಪರದಾಟ: ವೃದ್ದೆ ತನ್ನ ಪಾಲಿನ ಪರಿಹಾರ ಮೊತ್ತಕ್ಕಾಗಿ ತಹಸೀಲ್ದಾರ್, ಪೊಲೀಸ್ ಠಾಣೆ, ಕೃಷಿ ಇಲಾಖೆ ಕಚೇರಿಗಳಿಗೆಲ್ಲ ಅಲೆದಾಡಿ ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ತಹಸೀಲ್ದಾರ್ ಕಚೇರಿಯವರು ‘ನೀವು ಪೊಲೀಸ್ ಠಾಣೆಗೆ ಹೋಗ್ರಿ’ ಎಂದು ಸಾಗಹಾಕಿದರು ಎಂದು ವೃದ್ಧೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಂಚನೆ ಕುರಿತು ಶಾಸಕರಿಂದ ಹಿಡಿದು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಮಣಿವಣ್ಣನ್ ಗಮನಕ್ಕೂ ತರಲಾಗಿದೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಉತ್ತರ ಸಿಕ್ಕಿದೆ.

    ‘ಪ್ರಕರಣ ಇರುವುದು ತಪ್ಪು ಮಾಡಿದ ಸಿಬ್ಬಂದಿ ವಿರುದ್ಧವೇ ಹೊರತು ನನ್ನ ವಿರುದ್ಧ ಅಲ್ಲ’ ಎಂದು ಹೇಳಿದೆ. ಹಾಗೆಲ್ಲ ಆಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದು ವೃದ್ಧೆ ದುಃಖಿಸುತ್ತಿದ್ದಾರೆ.

    ಮೂರು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿ ಸುಸ್ತಾಗಿದ್ದೇನೆ. ಎರಡು ವರ್ಷದಿಂದ ಬೆಳೆ ಕೂಡ ಬಾರದೆ ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಈ ಸಲದ ಬೆಳೆ ನೀರಿನಲ್ಲಿ ಮುಳುಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದರೂ ಪರಿಹಾರ ಬಂದಿಲ್ಲ. ಜಿಲ್ಲಾಧಿಕಾರಿಯವರು ವಿಶೇಷ ಕಾಳಜಿ ವಹಿಸಿ ನನಗೆ ದೊರಕಬೇಕಿದ್ದ 30 ಸಾವಿರ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಅದಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ.

    | ಇಂದ್ರಮ್ಮ ಚಿಕ್ಕಳ್ಳಿ, ನೊಂದ ರೈತಮಹಿಳೆ

    ತಿಮ್ಮಾಪುರ ಗ್ರಾಮದ ರೈತರ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿದ್ದು, ದೋಷಾರೋಪಣಾ ಪಟ್ಟಿ ಸಿದ್ಧಗೊಂಡಿದೆ. ಮೇಲಧಿಕಾರಿಗಳ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಒಂದೆರಡು ತಿಂಗಳಲ್ಲಿ ಸಂಬಂಧಿಸಿದ ರೈತರಿಗೆ ಪರಿಹಾರ ಸಿಗಬಹುದು.

    | ಪಿ.ಎಸ್. ಬಸವರಾಜ, ಸಿಪಿಐ ಬ್ಯಾಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts