More

    88 ಲಕ್ಷ ರೂ. ಬೆಲೆ ಬಾಳುವ ಹಳೆ ನೋಟು ಜಪ್ತಿ; ಮೂವರು ಅರೆಸ್ಟ್​..!

    ಬೆಂಗಳೂರು: ರದ್ದಾದ ನೋಟುಗಳನ್ನು ಅಮಾಯಕರಿಗೆ ಕೊಟ್ಟು ವಂಚನೆ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

    ಪದ್ಮನಾಭನಗರದ ಯೋಗಾನಂದಂ ಅಲಿಯಾಸ್ ಯೋಗೇಶ್ (39), ಆಂಧ್ರಪ್ರದೇಶದ ವೆಂಕಟ ನಾರಾಯಣ ಅಲಿಯಾಸ್ ರಾಜಣ್ಣ (60) ಮತ್ತು ಹರಿಪ್ರಸಾದ್ (53) ಬಂಧಿತರು. ನೋಟಿನ ಮೂಲ ವಾರಸುದಾರರ ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತರಿಂದ ಹಳೆಯ 500 ಮುಖ ಬೆಲೆಯ 88 ಲಕ್ಷ ರೂ. ಬೆಲೆ ಬಾಳುತ್ತಿದ್ದ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕೇಂದ್ರ ಸರ್ಕಾರ, 2016ರಲ್ಲಿ ಹಳೆಯ 500 ರೂ. ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಕೆಲ ತಿಂಗಳ ಕಾಲ ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಆದರೆ, 6 ವರ್ಷಗಳಾದರೂ ಕೆಲವರು ರದ್ದಾದ ನೋಟುಗಳನ್ನು ಬದಲಾವಣೆ ಮಾಡಿ ಕೊಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಅದೇ ರೀತಿ ತಮಿಳುನಾಡು ಮೂಲದ ವ್ಯಕ್ತಿ ಕಡೆಯಿಂದ 88 ಲಕ್ಷ ರೂ. ಮೊತ್ತದ ಹಳೆಯ 500 ರೂ. ಮುಖ ಬೆಲೆಯ ನೋಟುಗಳನ್ನು ಆಂಧ್ರಪ್ರದೇಶದ ಆರೋಪಿಗಳು ತಂದಿದ್ದರು. ಬದಲಾವಣೆಗೆ ಅವಕಾಶ ಸಿಗದೆ ಇರುವ ಕಾರಣಕ್ಕೆ ಒಬ್ಬರಾದ ಮೇಲೆ ಒಬ್ಬರಂತೆ ಶೇ.2 ಕಮಿಷನ್ ಇಟ್ಟುಕೊಂಡು ಬದಲಾವಣೆಗೆ ಗಿರಾಕಿಗಳನ್ನು ಹುಡುಕಾಟ ನಡೆಸುತ್ತಿದ್ದರು. ಆದರೆ, ಎಲ್ಲಿಯೂ ಸಾಧ್ಯವಾಗಿರಲಿಲ್ಲ.

    ಡಿ.28ರ ತಡರಾತ್ರಿ ಕದಿರೇನಹಳ್ಳಿ ಬ್ರಿಡ್ಜ್‌ನಲ್ಲಿ ಕಾರಿನಲ್ಲಿ ಹಳೇ ನೋಟು ಚಲಾವಣೆಗೆ ಪ್ರಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಕುಳಿತಿದ್ದ ಮೂವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 40 ಲಕ್ಷ ರೂ. ಮೌಲ್ಯದ ಹಳೆಯ ನೋಟಗಳು ಪತ್ತೆಯಾಗಿವೆ. ಅದಾದ ನಂತರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಉಳಿದ 48 ಲಕ್ಷ ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ. ಈ ಎಲ್ಲ ಆರೋಪಿಗಳು ರಿಯಲ್ ಎಸ್ಟೇಟ್ ಬ್ರೋಕರ್‌ಗಳಾಗಿದ್ದಾರೆ. ಈ ದಂಧೆಯಲ್ಲಿ ಮತ್ತಷ್ಟು ಮಂದಿಯ ಕೈವಾಡದ ಶಂಕೆ ಇದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts