ಐಗಳಿ: ಭಾರತೀಯ ಸಂಸ್ಕೃತಿಯಲ್ಲಿ ದೇವರ ಬಗ್ಗೆ ಇರುವ ಶ್ರದ್ಧೆ, ಭಕ್ತಿಯ ಪ್ರತೀಕವಾಗಿ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತವೆ. ಅದರಂತೆ ಶಕ್ತಿ, ಭಕ್ತಿ ಮತ್ತು ಬುದ್ಧಿಯನ್ನು ಒಟ್ಟಿಗೆ ಹೊಂದಿದ ದೇವರೇ ಆಂಜನೇಯ ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ಸಮೀಪದ ಸಿಂಧೂರ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಹನುಮ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿ, ಶ್ರೀಶೈಲ ಪೀಠಕ್ಕೂ ಮತ್ತು ಹನುಮಂತನಿಗೂ ಅವಿನಾಭಾವ ಸಂಬಂಧವಿದೆ. ಹನುಮಂತ ವಾಯುದೇವನ ಮಗ. ಶ್ರೀಶೈಲ ಪೀಠದ ತತ್ತ್ವವೂ ವಾಯು ಎಂದರು. ಪೀಠದಿಂದ ಕಳಸಾರೋಣವಾಗಿರುವುದು ಸಂತಸ ಎಂದರು.
ಸಿಂಧೂರ ಗ್ರಾಮದ ಹೆಸರನ್ನು ನಾಡಿನಾದ್ಯಂತ ತೋರಿಸಿಕೊಟ್ಟ ಮಹಾನ್ ನಾಯಕ ವೀರ ಸಿಂಧೂರ ಲಕ್ಷ್ಮಣ. ಅವನ ಆದರ್ಶಗಳನ್ನು ಯುವಕರು ಅಳವಡಿಕೊಳ್ಳಬೇಕು. ನಮ್ಮ ಆರ್ಥಿಕ ಸಂಪತ್ತಿಗಿಂತ ಶಾಂತಿ, ನೆಮ್ಮದಿ ಜತೆಗೆ ತೃಪ್ತಿ ಎಂಬ ಆಂತರಿಕ ಸಂಪತ್ತು ಮನುಷ್ಯನಲ್ಲಿರಬೇಕು. ವೃದ್ಧಾಶ್ರಮಗಳು ಭಾರತೀಯ ಸಂಸ್ಕೃತಿಯಲ್ಲ, ಪ್ರತಿಯೊಬ್ಬ ವಿವಾಹಿತರು ತಂದೆ- ತಾಯಿಯನ್ನು ಪ್ರೀತಿಯಿಂದ ಪೋಷಿಸಬೇಕು ಎಂದು ತಿಳಿಸಿದರು.
ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಜವಳಿಯ ಗಂಗಾಧರ ಶಿವಾಚಾರ್ಯರು, ತಿಕೋಟಾದ ಶಿವಬಸವ ಶಿವಾಚಾರ್ಯರು, ಗೋಕಾಕದ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲದ ಸಂಗನಬಸವ ಶಿವಾಚಾರ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಪ್ಪ ಹಾರೂಗೇರಿ, ಮಹೇಶ ಹಿರೇಮಠ, ರಾಮಗೊಂಡ ಬಾಬಾನಗರ, ಅಣ್ಣಪ್ಪ ಬಾಳಿಕಾಯಿ, ಮಾರುತಿ ಮದಬಾವಿ, ರಾಜು ಹಿಪ್ಪರಗಿ ಇತರರು ಇದ್ದರು. ಬಿ.ಆರ್. ಪಾಟೀಲ ಸ್ವಾಗತಿಸಿ, ವಂದಿಸಿದರು.