More

    ಹಿರಿಯ ಜೀವಗಳಿಗೆ ಮಮತೆಯ ರಂಜನೆ

    ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನಾ ದಿನ

    ಜಿಲ್ಲೆಯಲ್ಲಿ ಮೊದಲ ಪ್ರಯೋಗ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಪುನೀತ್‌ರಾಜ್‌ಕುಮಾರ್ ಅಭಿನಯದ ‘ರಾಜಕುಮಾರ’ಚಲನಚಿತ್ರದ ದೃಶ್ಯಗಳನ್ನು ನೆನಪಿಸುವ ಮಾದರಿಯಲ್ಲಿಯೇ ಹಿರಿಯ ಜೀವಗಳಿಗೆ ಜೀವನೋತ್ಸಾಹ ತುಂಬುವ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ಮನರಂಜನಾ ಚಟುವಟಿಕೆ ಆಯೋಜಿಸುವ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.
    ಹಿರಿಯ ನಾಗರಿಕರಲ್ಲಿನ ಏಕಾಂಗಿತನ, ಹಿಂಜರಿಕೆ, ಬೇಸರ, ಅನಾಥಪ್ರಜ್ಞೆ ದೂರ ಮಾಡುವ ಪ್ರಯತ್ನವಾಗಿ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರಗಳಲ್ಲಿ ಇಲಾಖೆಯಿಂದ ಪ್ರತಿ ಶುಕ್ರವಾರ ವಿವಿಧ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಹಳೇಬೇರು-ಹೊಸಚಿಗುರಿನ ನಡುವೆ ‘ಸಂಗಮ’: ಅಜ್ಜಿ-ತಾತ, ಮೊಮ್ಮಕಳ ನಡುವಿನ ಬಾಂಧವ್ಯದ ಮಹತ್ವ ಸಾರುವ, ಕೂಡು ಕುಟುಂಬದ ಒಗ್ಗಟ್ಟಿನ ಶಕ್ತಿ ಬಗ್ಗೆ ತಿಳಿಹೇಳುವ, ಹಿರಿಯ ನಾಗರಿಕರ ಬದುಕುವ ಹಕ್ಕನ್ನು ಎತ್ತಿತೋರಿಸುವ ಮುಖ್ಯವಾಗಿ ಹಿರಿಯರು-ಕಿರಿಯರ ನಡುವಿನ ‘ಜನರೇಷನ್ ಗ್ಯಾಪ್’ಗೆ ಮದ್ದು ನೀಡುವ ಹೊಸ ಆಲೋಚನೆಯೊಂದಿಗೆ ಮುಂದಡಿ ಇಟ್ಟಿದ್ದ ಗ್ರಾಮಾಂತರ ಜಿಲ್ಲೆಯ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ‘ಸಂಗಮ’ ಹೆಸರಿನಲ್ಲಿ ವಾತ್ಸಲ್ಯ ವೇದಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಿತ್ತು. ಇದರ ಮುಂದುವರಿದ ಭಾಗವಾಗಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಹಿರಿಯರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಿದೆ.
    ನೋಡಲ್ ಅಧಿಕಾರಿಗಳ ನೇಮಕ: ಇಲಾಖೆಯಿಂದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ನಡೆಯುವ ಮನರಂಜನಾ ಚಟುವಟಿಕೆಗಳ ಬಗ್ಗೆ ಗಮನ ನೀಡಲು ಹಾಗೂ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಾಮಾನ್ಯವಾಗಿ ಇಂಥ ಕೇಂದ್ರಗಳಲ್ಲಿ ಮನರಂಜನಾ ಚಟುವಟಿಕೆಗಳು ನಡೆಯುತ್ತಿದ್ದರೂ ಅವುಗಳು ಏಕಾತನತೆಯಿಂದ ಕೂಡಿರುತ್ತವೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ವಿಶೇಷ ಚಟುವಟಿಕೆ ರೂಪಿಸಿ ಹಿರಿಯರಲ್ಲಿ ಉತ್ಸಾಹ ತುಂಬಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
    ಇಲಾಖೆಯಿಂದ ಅನುಮತಿ ಪಡೆದಿರುವ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನ ಪಡೆಯುತ್ತಿರುವ ಹಾಗೂ ಖಾಸಗಿ ವೃದ್ಧಾಶ್ರಮಗಳು, ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ‘ಸಂಗಮ-ಹಿರಿಯರು ಮತ್ತು ಕಿರಿಯರ ವಾತ್ಸಲ್ಯ ವೇದಿಕೆ’ಯೋಜನೆ ಜಾರಿಗೊಳಿಸಲಾಗಿದೆ. ಹಿರಿಯ ನಾಗರಿಕರ ಮನರಂಜಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಲಾ ಕಾಲೇಜುಗಳಲ್ಲಿ ಅರಿವು:

    ಪ್ರಸ್ತುತ ದಿನಮಾನಗಳಲ್ಲಿ ಎಲ್ಲರ ಬದುಕು ಯಾಂತ್ರಿಕವಾಗುತ್ತಿದೆ, ಜೀವನ ಬಂಡಿಯ ವೇಗದ ನಡುವೆ ಹಿರಿಯ ನಾಗರೀಕರು ಕಡೆಗಣಿಸಲ್ಪಡುತ್ತಿದ್ದಾರೆ. ಅವರಲ್ಲಿ ಜೀವನೋತ್ಸಾಹ ಕುಗ್ಗಿಹೋಗುತ್ತಿದೆ. ಯಾರಿಗೂ ಬೇಡವಾದ ವಸ್ತುವಂತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡು ಕುಟುಂಬ ಎಂಬುದು ಕಲ್ಪನೆಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಮಟ್ಟದಲ್ಲಿಯೇ ಮಕ್ಕಳಲ್ಲಿ ಹಿರಿಯ ನಾಗರಿಕರ ಬಗ್ಗೆ ಗಮನ ನೀಡುವಂತೆ ಅವರೊಂದಿಗೆ ಬೆರೆತು ಅವರಿಗೂ ಗೌರವಯುತ ಬದುಕು ನಡೆಸುವ ಅವಕಾಶ ನೀಡುವಂತೆ ಅರಿವು ಮೂಡಿಸುವ ಪ್ರಯತ್ನವಾಗಿ ಇಲಾಖೆ ಜಿಲ್ಲೆಯ ನಾಲ್ಕೂ ತಾಲೂಕುಗಳ ಶಾಲಾ ಕಾಲೇಜುಗಳಲ್ಲಿ ಹಿರಿಯ ನಾಗರಿಕರ ಬಗ್ಗೆ ಕಿರಿಯರ ಅರಿವು ಎಂಬ ಕಾರ್ಯಕ್ರಮ ರೂಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts