More

    ಮತದಾರರ ಮನವೊಲಿಕೆಗೆ ಅಧಿಕಾರಿಗಳ ಹರಸಾಹಸ

    ಸಕಲೇಶಪುರ : ಮತದಾನ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದ ಗ್ರಾಮಸ್ಥರ ಮನವೊಲಿಕೆಗೆ ತಾಲೂಕಿನ ಹಿರಿಯ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.

    ತಾಲೂಕಿನ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ನೆಲಗಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ನೀಡುವ ಜಲಜೀವನ್ ಮಿಷನ್ ಯೋಜನೆಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಲವು ಕಿ.ಮೀ. ಗಳಿಂದ ಕುಡಿಯುವ ನೀರನ್ನು ತರಬೇಕಿದೆ. ಎರಡು ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಯೋಜನೆ ಪ್ರದೇಶ ಸೆಕ್ಷನ್ 4ಕ್ಕೆ ಬರುತ್ತದೆ ಎಂಬ ಕಾರಣ ನೀಡಿ ಅರಣ್ಯ ಇಲಾಖೆ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಈ ಸಂಬಂಧ ಹಲವು ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದರು.

    ಇದರಿಂದ ಎಚ್ಚೆತ್ತ ಉಪವಿಭಾಗಾಧಿಕಾರಿ ಗುರುವಾರ ಗ್ರಾಮಕ್ಕೆ ತೆರಳಿ ಕಾಮಗಾರಿಗೆ ಅವಕಾಶ ನೀಡುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಕಾಮಗಾರಿಗೆ ಅವಕಾಶ ನೀಡಲಾಗುವುದು. ಆದ್ದರಿಂದ, ಮತದಾನ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.

    ಈ ವೇಳೆ ಮಾತನಾಡಿದ ಗ್ರಾಮಸ್ಥರು, ಇಂತಹ ಹಲವು ಆಶ್ವಾಸನೆಗಳು ನಮಗೆ ದೊರೆತಿವೆ. ಆದರೆ, ಕಾರ್ಯಗತಗೊಂಡಿಲ್ಲ. ಲೋಕಸಭಾ ಚುನಾವಣೆಯ ಮತದಾನದ ದಿನದ ಒಳಗಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾಮಗಾರಿಗೆ ಅವಕಾಶ ನೀಡುವ ಪತ್ರ ಗ್ರಾಮಸ್ಥರಿಗೆ ತಲುಪಿದರೆ ಮತದಾನ ಮಾಡಲಾಗುವುದು ಎಂದು ಪಟ್ಟುಹಿಡಿದರು.

    ಹೆತ್ತೂರು ಹೋಬಳಿ ಹಳ್ಳಿಯೂರು ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವುದಾಗಿ ಪ್ರಕಟಿಸಿದ್ದರು. ಇದರಿಂದ ಗ್ರಾಮಕ್ಕೆ ತೆರಳಿದ್ದ ಉಪವಿಭಾಗಾಧಿಕಾರಿ ಗ್ರಾಮಸ್ಥರೊಂದಿಗೆ ಮಾತನಾಡಿ, ಜಲಜೀವನ್ ಮಿಷನ್ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗುವುದು ಎಂಬ ಭರವಸೆ ನೀಡಿದ ನಂತರ ಮತದಾನ ಬಹಿಷ್ಕಾರದಿಂದ ಗ್ರಾಮಸ್ಥರು ಹಿಂದೆ ಸರಿದಿದ್ದಾರೆ.

    ಯಸಳೂರು ಹೋಬಳಿ ಹೊಸೂರು ಗ್ರಾಮಸ್ಥರು ಗ್ರಾಮದಲ್ಲಿ ನಡೆಯುತ್ತಿರುವ ಕರಿಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿ ತೀವ್ರರೂಪದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ, ಗಣಿಗಾರಿಕೆ ಸ್ಥಗಿತಗೊಳಿಸಬೇಕು. ತಪ್ಪಿದಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂಬ ಬೆದರಿಕೆ ಒಡಿದ್ದರು. ಗ್ರಾಮಕ್ಕೆ ತೆರಳಿದ್ದ ಉಪವಿಭಾಗಾಧಿಕಾರಿ ತಾತ್ಕಾಲಿಕವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವ ಮೂಲಕ ಗ್ರಾಮಸ್ಥರ ಮನವೊಲಿಕೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts