More

    ಗ್ರಾಮಸ್ಥರೊಂದಿಗಿನ ಅಧಿಕಾರಿಗಳ ಸಭೆ ವಿಫಲ

    ಮುಂಡರಗಿ: ಗುಮ್ಮಗೋಳ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಗದಗ ಎಸಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಲು ಸೋಮವಾರ ಏರ್ಪಡಿಸಿದ್ದ ಸಭೆ ವಿಫಲವಾಯಿತು.

    ಗುಮ್ಮಗೋಳ ಪುನರ್ವಸತಿ ಗ್ರಾಮದಲ್ಲಿ ಮೂಲಸೌಕರ್ಯ, ಜಮೀನುಗಳಿಗೆ ತೆರಳಲು ರಸ್ತೆ ಅನುಕೂಲ ಸೇರಿ ಒಟ್ಟು 28 ಬೇಡಿಕೆಗಳನ್ನು ಈಡೇರಿಸುವವರೆಗೂ ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ ಚುನಾವಣೆಗಳನ್ನು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ, ತಹಸೀಲ್ದಾರ್ ಆಶಪ್ಪ ಪೂಜಾರಿ, ತಾಪಂ ಇಒ ಸಂತೋಷ ಪಾಟೀಲ, ನೀರಾವರಿ ಇಲಾಖೆಯ ಎಇಇ ವಿನಯ ಬಿ.ಎಂ., ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಗುಮ್ಮಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ಏರ್ಪಡಿಸಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಆದರೆ, ಅಧಿಕಾರಿಗಳ ಮನವೊಲಿಕೆಗೆ ಗ್ರಾಮಸ್ಥರು ಜಗ್ಗಲಿಲ್ಲ.

    ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್​ನ ಹಿನ್ನೀರಿನಿಂದ ಮುಳುಗಡೆಯಾಗಿರುವ ಗ್ರಾಮಕ್ಕೆ ಕಲ್ಪಿಸಿರುವ ಪುನರ್ವಸತಿ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸೇರಿ ಒಟ್ಟು 28 ಬೇಡಿಕೆಗಳಿದ್ದು, ಅದರಲ್ಲಿ ಪ್ರಮುಖವಾಗಿ ಪುನರ್ವಸತಿ ಗ್ರಾಮದಲ್ಲಿ 200 ಮನೆಗಳನ್ನು ನಿರ್ವಿುಸಿ ಕೊಡಬೇಕು. ಗ್ರಾಮದ ಜಮೀನುಗಳಿಗೆ ತೆರಳುವುದಕ್ಕೆ ರಸ್ತೆ ಮಾಡಿಕೊಡಬೇಕು. ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಈ ಕುರಿತು ಪ್ರತಿಕ್ರಿಯಿಸಿದ ಎಸಿ ರಾಯಪ್ಪ ಹುಣಸಗಿ ಅವರು, ಪುನರ್ವಸತಿ ಗ್ರಾಮಕ್ಕೆ ತಾವು ತೆರಳಿದ ನಂತರ ಅಲ್ಲಿ ಮನೆಗಳನ್ನು ನಿರ್ವಿುಸಿಕೊಳ್ಳುವುದಕ್ಕೆ ಪ್ರತಿ ಮನೆಗೆ 95 ಸಾವಿರ ರೂ. ಜೊತೆಗೆ ದನದ ಕೊಟ್ಟಿಗೆ, ಶೌಚಗೃಹ ನಿರ್ವಿುಸಿಕೊಡಲಾಗುತ್ತದೆ. ಮನೆ ನಿರ್ವಿುಸಿಕೊಳ್ಳುವುದಕ್ಕೆ ಮರಳು ಕೊಡಿಸುವಂಥ ವ್ಯವಸ್ಥೆ, ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಸಾಲ ನೀಡುವುದು. ನಮ್ಮ ಹಂತದಲ್ಲಿನ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ. ಒಮ್ಮೆ ಪರಿಹಾರ ನೀಡಿದ ಮೇಲೆ ಮತ್ತೊಮ್ಮೆ ಪರಿಹಾರ ನೀಡುವುದಕ್ಕೆ ಬರುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಚುನಾವಣೆ ಪ್ರಜಾಪ್ರಭುತ್ವದ ಶಕ್ತಿ. ನಿಮ್ಮ ಹಕ್ಕನ್ನು ನೀವು ಕಳೆದುಕೊಳ್ಳಬೇಡಿ. ಚುನಾವಣೆ ಮಾಡಿ ನಂತರ ನಿಮ್ಮ ಹಕ್ಕನ್ನು ನೀವು ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

    ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಮಾತನಾಡಿ, ಮತದಾನ ಪವಿತ್ರ ಹಕ್ಕು. ಚುನಾವಣೆ ಬಹಿಷ್ಕರಿಸಿದರೆ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ನಿರಂತರ ಪ್ರಯತ್ನದಿಂದ ಸಮಸ್ಯೆ ಬಗೆಹರಿಯುತ್ತವೆ. ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜಿಲ್ಲಾ ಹಂತದಲ್ಲಿರುವ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಇನ್ನುಳಿದವುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

    ಹಲವು ವರ್ಷಗಳಿಂದ ಸಮಸ್ಯೆಗಳಲ್ಲಿಯೇ ಜೀವನ ಮಾಡಿಕೊಂಡು ಬರುತ್ತಿದ್ದೇವೆ. ಮನೆ ಮಂಜೂರು ಮಾಡಿಸುವುದಾಗಿ ಜನಪ್ರತಿನಿಧಿಗಳು ಮಾತು ನೀಡಿದ್ದರು. ಆದರೆ, ಈವರೆಗೂ ಮನೆ ನೀಡಲಿಲ್ಲ. ನಮ್ಮ ಬೇಡಿಕೆ ಈಡೇರಿಸುವವರೆಗೂ ಚುನಾವಣೆ ಮಾಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಅಧಿಕಾರಿಗಳು ಚುನಾವಣೆಗೆ ಸಹಕರಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಂಡರು. ಗ್ರಾಮಸ್ಥರು ಮಾತ್ರ ತಮ್ಮ ನಿರ್ಧಾರಕ್ಕೆ ಬದ್ಧವಾಗಿ ಚುನಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ತಹಸೀಲ್ದಾರ್ ಆಶಪ್ಪ ಪೂಜಾರಿ ನೇತೃತ್ವದಲ್ಲಿ ಶನಿವಾರವೂ ಗ್ರಾಮಸ್ಥರೊಂದಿಗೆ ಸಭೆ ನಡಟೆಸಲಾಗಿತ್ತು ಆಗಲೂ ಸಭೆ ವಿಫಲವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts