More

    ಬಿಬಿಎಂಪಿ ಕೌನ್ಸಿಲರ್‌ಗಳಿಗೆ ಅಧಿಕಾರಿಗಳಿಂದ ತಲಾ 90000 ರೂ.ನ ಐಫೋನ್ ಗಿಫ್ಟ್!

    ಬೆಂಗಳೂರು: ಚುನಾಯಿತ ಅವಧಿ ಪೂರ್ಣಗೊಳಿಸಿದ ಬಿಬಿಎಂಪಿ ಕಾರ್ಪೋರೇಟರ್‌ಗಳಿಗೆ ಪಾಲಿಕೆ ಅಧಿಕಾರಿಗಳು ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಭರ್ಜರಿ ಉಡುಗೊರೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.

    2015-2020ರ ಅವಧಿಗೆ ಆಯ್ಕೆಯಾದ ಪಾಲಿಕೆ ಸದಸ್ಯರ ಅವಧಿ ಸೆ.10ಕ್ಕೆ ಪೂರ್ಣಗೊಂಡಿದೆ. ಸದಸ್ಯರು ಅಧಿಕಾರದಲ್ಲಿದ್ದಾಗ ಪಾಲಿಕೆ ಅಧಿಕಾರಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಅವರಿಗೆ ಸೂಕ್ತ ಗೌರವಾರ್ಪಣೆಯೊಂದಿಗೆ ಭೋಜನ ಕೂಟ ಏರ್ಪಡಿಸಬಹುದು. ಆದರೆ, ಯಲಹಂಕ ವಲಯದ ಅಧಿಕಾರಿಗಳು ತಮ್ಮ ವಲಯದ ನಿರ್ಗಮಿತ ಕೌನ್ಸಿಲರ್‌ಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಾಜು 90 ಸಾವಿರ ರೂ. ಮೌಲ್ಯದ ಉಡುಗೊರೆಯನ್ನು ಮಂಗಳವಾರ ನೀಡಿದ್ದಾರೆ. ಇಷ್ಟೊಂದು ದೊಡ್ಡ ಗಿಫ್ಟ್ ನೀಡಲು ಕಾರಣವೇನು, ಅವರಿಂದ ಈ ಅಧಿಕಾರಿಗಳಿಗೆ ಯಾವ ರೀತಿಯ ಲಾಭ ಆಗಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

    ಯಲಹಂಕದ ಐಷಾರಾಮಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕೆಂಪೇಗೌಡ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಚಂದ್ರಮ್ಮ ಕೆಂಪೇಗೌಡ, ಚೌಡೇಶ್ವರಿ ವಾರ್ಡ್‌ನ ಆರ್. ಪದ್ಮಾವತಿ ಅಮರನಾಥ್, ಅಟ್ಟೂರಿನ ನೇತ್ರ್ರಾ ಪಲ್ಲವಿ, ಯಲಹಂಕ ಉಪನಗರ ವಾರ್ಡ್‌ನ ಎಂ. ಸತೀಶ್, ಕುವೆಂಪುನಗರ ವಾರ್ಡ್‌ನ ಪಾರ್ತಿಬರಾಜನ್, ಕೊಡಿಗೆಹಳ್ಳಿ ವಾರ್ಡ್‌ನ ಕೆ.ಎಂ. ಚೇತನ್, ವಿದ್ಯಾರಣ್ಯಪುರದ ಎಚ್. ಕುಸುಮ, ದೊಡ್ಡಬೊಮ್ಮಸಂದ್ರದ ಜಯಲಕ್ಷ್ಮಮ್ಮ ಪಿಳ್ಳಪ್ಪ, ಥಣಿಸಂದ್ರದ ಕೆ.ಎಂ. ಮಮತಾ ಹಾಗೂ ಹಲವು ನಾಮನಿರ್ದೇಶಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಜಂಟಿ ಆಯುಕ್ತ ಡಾ.ಡಿ.ಆರ್. ಅಶೋಕ್, ಮುಖ್ಯ ಇಂಜಿನಿಯರ್ ರಂಗನಾಥ್ ಸೇರಿ ವಲಯದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿ ಜನಪ್ರತಿನಿಧಿಗೆ ಶಾಲು, ಹಾರ, ಕೆಂಪೇಗೌಡ ಸ್ಮರಣಿಕೆ ಹಾಗೂ 90 ಸಾವಿರ ರೂ. ಮೌಲ್ಯದ ಐಫೋನ್ ಉಡುಗೊರೆ ಅರ್ಪಿಸಿದರು.

    ಅಧಿಕಾರಾವಧಿ ಪೂರ್ಣಗೊಳಿಸಿದ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸುವ ಕುರಿತು ಪಾಲಿಕೆ ಆಯುಕ್ತರು ಅಥವಾ ಆಡಳಿತಾಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ. ಜತೆಗೆ, ಈ ಕುರಿತು ಹಿರಿಯ ಅಧಿಕಾರಿಗಳ ಅನುಮತಿಯನ್ನು ಪಡೆಯದೆ, ಯಲಹಂಕ ವಲಯದ ಜಂಟಿ ಆಯುಕ್ತರೇ ಮುಂದೆ ನಿಂತು ಸಮಾರಂಭ ಆಯೋಜಿಸಿದ್ದಾರೆ. 10ಕ್ಕೂ ಅಧಿಕ ಮಾಜಿ ಸದಸ್ಯರಿಗೆ ಉಡುಗೊರೆ ನೀಡಲು ಖರ್ಚು ಮಾಡಲಾದ 15 ಲಕ್ಷ ರೂ.ಗಿಂತ ಅಧಿಕ ಹಣ ಎಲ್ಲಿಂದ ಬಂತೆಂಬುದು ರಹಸ್ಯವಾಗಿದೆ.

    ಬೀಳ್ಕೊಡುಗೆ ಸಮಾರಂಭದ ಆಯೋಜನೆ ಕುರಿತು ಯಲಹಂಕ ವಲಯ ಜಂಟಿ ಆಯುಕ್ತ ಡಾ. ಅಶೋಕ್ ಪ್ರತಿಕ್ರಿಯಿಸಿ, ಗುತ್ತಿಗೆದಾರರು ನಮ್ಮ ವಲಯದ ಮಾಜಿ ಸದಸ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿದ್ದರಿಂದ ನಾವು ಪಾಲ್ಗೊಂಡಿದ್ದೇವೆ. ಅಧಿಕಾರಿ ಅಥವಾ ಸಿಬ್ಬಂದಿಯಿಂದ ಸದಸ್ಯರಿಗೆ ಸನ್ಮಾನ, ಉಡುಗೊರೆ ನೀಡಿಲ್ಲವೆಂದು ಹೇಳಿದ್ದಾರೆ.

    ಹಿಂದಿ ಹೇರಿಕೆ ವಿರುದ್ಧ ದರ್ಶನ್​ ಖಡಕ್​ ಪೋಸ್ಟ್​; ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್​ ಆಚರಣೆ ಬೇಡವೆಂದ ದಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts