More

    ಗೋಮಾಳ ಸಂರಕ್ಷಿಸಲು ಅಧಿಕಾರಿಗಳು ವಿಫಲ

    ಚ್.ಡಿ.ಕೋಟೆ: ಲೋಕಾಯುಕ್ತ ನ್ಯಾಯಾಲಯ ವರ್ಷದ ಹಿಂದೆ ಆದೇಶಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಗೋಮಾಳ ಜಾಗವನ್ನು ಉಳಿಸಲು ಮುಂದಾಗಿಲ್ಲ. ಆದರೂ ನಾವು ಇದೇ ವಿಚಾರವಾಗಿ ಪದೇ ಪದೆ ದೂರು ನೀಡುತ್ತಿದ್ದೇವೆ. ಇದರಿಂದ ಪ್ರಯೋಜನ ಏನು ಎಂದು ಲೋಕಾಯುಕ್ತ ಎಸ್ಪಿ ಎದುರು ದೂರುದಾರರು ಅಸಹಾಯಕತೆ ವ್ಯಕ್ತಪಡಿಸಿದರು.


    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಸಜ್ಜಿತ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಟಕೆರೆ ಗ್ರಾಮದ ಕೃಷ್ಣ ಮತ್ತು ಮಾದಪುರ ಕುಮಾರಸ್ವಾಮಿ ಮಾತನಾಡಿ, ಸವ್ವೆ ಗ್ರಾಮದ ಸ.ನಂ 58, 59, 65 ಹಾಗೂ 70 ರಲ್ಲಿ ಆಂಧ್ರಪ್ರದೇಶದ ಮೂಲದ ವ್ಯಕ್ತಿ 30 ವರ್ಷಗಳ ಹಿಂದೆ 33 ಎಕರೆ ಜಮೀನು ಖರೀದಿ ಮಾಡಿ ರವಿಬಾಬು ಅವರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ಆದರೆ, ಜಿಪಿಎ ಮಾಡಿಕೊಂಡ ವ್ಯಕ್ತಿ ಸರ್ಕಾರಿ ಗೋಮಾಳ 30 ಎಕರೆ ಜಮೀನಿನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂದರು.


    ಈ ವಿಚಾರವಾಗಿ ನಾವು ಕಂದಾಯ ಸಚಿವರ ಜನಸಂಪರ್ಕ ಸಭೆಯಲ್ಲಿ ದೂರು ನೀಡಿದ್ದು ಸರ್ಕಾರದ ಅಧೀನ ಕಾರ್ಯದರ್ಶಿ ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದ್ದರು. ಆದರೂ ಕಂದಾಯ ಇಲಾಖೆ ಕ್ರಮವಹಿಸಲಿಲ್ಲ. ನಂತರ ನಾವು ಲೋಕಾಯುಕ್ತಕ್ಕೆ ದೂರು ನೀಡಿದ್ದೆವು. ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸರ್ಕಾರಿ ಗೋಮಾಳ ಜಾಗವನ್ನು ತೆರವುಗೊಳಿಸಿ ಆರ್‌ಟಿಸಿ ಕಾಲಂನಲ್ಲಿ ಸರ್ಕಾರಿ ಜಮೀನು ಎಂದು ನಮೂದಿಸಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಆದೇಶಿಸಿ ವರ್ಷ ಕಳೆದರೂ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಹಾಗಾಗಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರ್ಕಾರಿ ಜಮೀನು ಉಳಿಸಿ ಬಡವರಿಗೆ ನೀಡಬೇಕು ಎಂದು ಮನವಿ ಮಾಡಿದರು.
    ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಇಲ್ಲದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಎಚ್ಚರಿಕೆ ನೀಡಿದರು.


    ತುಂಬಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಕ್ಕಹಳ್ಳಿ ಶಿವಣ್ಣ ಮಾತನಾಡಿ, ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಾರೆ. ಹಣ ನೀಡಿದರೆ ಮಾತ್ರ ಕೆಲಸ. ಕಂದಾಯ ವಸೂಲಿ ಮಾಡಲು ಗ್ರಾಮಗಳಿಗೆ ತೆರಳುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಪ್ರಗತಿ ಕುಂಠಿತ ಆಗಲು ಇವರು ಕಾರಣರಾಗಿದ್ದಾರೆ ಎಂದು ದೂರಿದರು.

    ಲೋಕಾಯುಕ್ತ ಎಸ್ಪಿ ಮಾತನಾಡಿ, ಪಂಚಾಯಿತಿ ಸದಸ್ಯರೇ ಬಂದು ಕೆಲಸ ಕಾರ್ಯ ಆಗುತ್ತಿಲ್ಲ ಎಂದು ದೂರು ಹೇಳುತ್ತಿದ್ದಾರೆ ಎಂದರೆ ಜನಸಾಮಾನ್ಯರ ಕೆಲಸ ಕಾರ್ಯಗಳು ಆಗಲು ಸಾಧ್ಯವೇ ಇಲ್ಲ. ಹಿಂದುಳಿದ ತಾಲೂಕಾಗಿದ್ದು ಎಸ್‌ಸಿ, ಎಸ್ಟಿ ಸಮುದಾಯದವರು ಹೆಚ್ಚು ವಾಸಿಸುತ್ತಿದ್ದಾರೆ. ಇವರ ಅಭಿವೃದ್ಧಿಗೆ ಒತ್ತು ಕೊಡಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

    ಅಕ್ರಮವಾಗಿ ರೆಸಾರ್ಟ್‌ಗಳ ನಿರ್ಮಾಣ
    ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ಎರಡು ವರ್ಷದಿಂದ ನಮ್ಮ ಜಮೀನಿಗೆ ತೆರಳಲು ರಸ್ತೆ ಬಿಡಿಸಿಕೊಡಿ ಎಂದು ತಹಸೀಲ್ದಾರ್‌ಗೆ ಅರ್ಜಿ ನೀಡಿ ಮನವಿ ಮಾಡಲಾಗಿದೆ. ಹತ್ತು ಬಾರಿ ತಹಸೀಲ್ದಾರ್ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಆದರೆ ಸಮಸ್ಯೆ ಬಗೆಹರಿದಿಲ್ಲ ಎಂದು ಅಳಲು ತೋಡಿಕೊಂಡರು.
    ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್ಪಿ, ಹತ್ತು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅಂತರಸಂತೆ ಪ್ರಕಾಶ್ ಬುದ್ದ ಮಾತನಾಡಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಖಾಸಗಿ ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಲೋಪ ಕಾರಣವಾಗಿದೆ. ಅರಣ್ಯ ಇಲಾಖೆ ಸುತ್ತೋಲೆ ಪ್ರಕಾರ ಅರಣ್ಯದ ಅಂಚಿನಿಂದ 10 ಕಿ.ಮೀ.ವ್ಯಾಪ್ತಿಯೊಳಗೆ ಯಾವುದೇ ಮಾನವ ನಿರ್ಮಿತ ಚಟುವಟಿಕೆಗಳು ನಡೆಯುವಂತಿಲ್ಲ. ಆದರೂ ರೆಸಾರ್ಟ್ ಮಾಲೀಕರ ಜತೆ ಅಧಿಕಾರಿಗಳು ಶಾಮಿಲಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಹಾಗಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್‌ಎಫ್‌ಒ ಭರತ್, ಇತ್ತೀಚೆಗೆ ಅಂತಹ ಯಾವುದೇ ರೆಸಾರ್ಟ್‌ಗಳಿಗೆ ನಾವು ಅನುಮತಿ ನೀಡಿಲ್ಲ ಎಂದರು. ಆಗ ದೂರುದಾರರು ಎಲ್ಲೆಡೆ ರೆಸಾರ್ಟ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಲು ಮುಂದಾದಾಗ ಎಸ್ಪಿ ಅವರು ಇದರ ಸಂಪೂರ್ಣ ವರದಿ ನೀಡುವಂತೆ ಆರ್‌ಎಫ್‌ಒಗೆ ಸೂಚಿಸಿದರು.

    ನಾನೇ ಸ್ಥಳ ಪರಿಶೀಲಿಸುತ್ತೇನೆ
    ಹೆಗ್ಗಡಪುರ ಕೆಂಪಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಬಹುತೇಕ ಕೆರೆಗಳು ಒತ್ತುವರಿಯಾಗಿ ಭೂಮಾಲೀಕರ ಒಡೆತನದಲ್ಲಿದ್ದು ಜಮೀನುಗಳಾಗಿ ಪರಿವರ್ತನೆ ಆಗಿವೆ. ಕೆರೆಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದರು.

    ಈ ಬಗ್ಗೆ ತಾಲೂಕು ಸರ್ವೇಯರ್ ಶಂಭುಲಿಂಗ ಮಾತನಾಡಿ, ತಾಲೂಕಿನಲ್ಲಿ ಒಟ್ಟು 282 ಕೆರೆಗಳಿದ್ದು 88 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಲು ಮುಂದಾದಾಗ ಸಭೆಯಲ್ಲಿದ್ದ ಸಾರ್ವಜನಿಕರು ನೀವು ಬಿಡಿಸಿರುವ 88 ಕೆರೆಗಳಲ್ಲಿ 8 ಕೆರೆಗಳ ಹೆಸರನ್ನು ತಿಳಿಸಿ. ಎಷ್ಟು ಕೆರೆಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದೀರಾ ಅದನ್ನು ಸಭೆಯ ಗಮನಕ್ಕೆ ತನ್ನಿ ಎಂದಾಗ ಸರ್ವೇಯರ್ ಉತ್ತರಿಸಲು ತಡಬಡಿಸಿದರು. ಆಗ ಲೋಕಾಯುಕ್ತ ಎಸ್ಪಿ, ನಾನೇ ಸ್ಥಳ ಪರಿಶೀಲಿಸುತ್ತೇನೆ ಎಂದು ತಿಳಿಸಿದರು. ರಸ್ತೆ ತೆರವು, ಜಮೀನು ಬಿಡಿಸಿಕೊಡಿ, ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ, ಹಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಹತ್ತಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು.

    ಲೋಕಯುಕ್ತ ಎಸ್ಪಿ ಸಜ್ಜಿತ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ದೂರು ಸಲ್ಲಿಸಿದಾಗ ಪರಿಶೀಲನೆ ನಡೆಸಿ ನಿಮ್ಮ ವ್ಯಾಪ್ತಿಯೊಳಗೆ ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಿದ್ದರೆ ಮಾಡಿಕೊಡಿ ಇಲ್ಲ, ಅವರಿಗೆ ಸರಿಯಾದ ಮಾಹಿತಿ ನೀಡಿ ಹಿಂಬರಹ ನೀಡಿ. ಸುಮ್ಮನೆ ಅಲೆದಾಡಿಸುವುದು ಬೇಡ ಎಂದು ತಿಳಿಸಿದರು.
    ಲೋಕಾಯುಕ್ತ ಪೊಲೀಸರು ಎಂದರೆ ಕೇವಲ ಲಂಚ ಪಡೆಯುವವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಭಾವನೆ ಅಧಿಕಾರಿಗಳಲ್ಲಿ ಇದೆ. ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ನೀಡದಿದ್ದಾಗಲೂ ಅಧಿಕಾರಿಗಳ ವಿರುದ್ಧ ಕ್ರಮವಹಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
    ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೀಶ್, ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್, ಇನ್‌ಸ್ಪೆಕ್ಟರ್ ಜಯರತ್ನಾ, ರವಿಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts