More

    ಅನುದಾನ ವಾಪಸ್​ಗೆ ಅಧಿಕಾರಿಗಳೇ ಹೊಣೆ

    ಹಾವೇರಿ: ಕರೊನಾ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಕಾಲದಲ್ಲಿ ಬಳಸಬೇಕು. ಅನುದಾನ ವಾಪಸ್ಸಾದರೆ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ ಎಚ್ಚರಿಸಿದರು.

    ಜಿಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನುದಾನ ಬಳಕೆಗೆ ಮಾರ್ಚ್​ವರೆಗೆ ಗಡುವಿದೆ ಎಂಬ ಧೋರಣೆ ಕೈಬಿಡಬೇಕು. ನವೆಂಬರ್, ಡಿಸೆಂಬರ್ ತಿಂಗಳೊಳಗೆ ನಿಗದಿತ ಗುರಿ ಸಾಧಿಸಬೇಕು. ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಬೇಕು ಎಂದು ಸೂಚಿಸಿದರು.

    ಕಳೆದ ವರ್ಷ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ,ನಿರ್ವಣಕ್ಕಾಗಿ ಅನುದಾನ ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಕ್ ಆರ್ಡರ್ ನೀಡಿದರೂ ಕಾಮಗಾರಿ ಆರಂಭಿಸಿಲ್ಲ. ಇಂಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಕಟ್ಟಡ ನಿರ್ವಣದ ಜವಾಬ್ದಾರಿ ವಹಿಸಿಕೊಂಡಿರುವ ಏಜೆನ್ಸಿಗಳು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.

    ವರದಾಸಿರಿ ಯೋಜನೆಯಡಿ ವರದಾ ನದಿ ದಂಡೆಯಲ್ಲಿ ಸಸಿ ನೆಡಲು ಅನುಕೂಲವಾಗುವಂತೆ ಈ ನದಿಪಾತ್ರದ ಮೂರು ತಾಲೂಕಿಗೆ ತಲಾ 10 ಸಾವಿರದಂತೆ ಬಿದಿರು ಸಸಿಗಳನ್ನು ಪೂರೈಸಬೇಕು. ರೈತರಿಗೆ ಪೂರೈಸಲು ಈ ವರ್ಷದಿಂದ ಶ್ರೀಗಂಧ, ರಕ್ತಚಂದನ ಸಸಿಗಳನ್ನು ಬೆಳೆಸಿ ಪೂರೈಸಲು ಕ್ರಮ ವಹಿಸಬೇಕು ಎಂದರು.

    ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಸುಣ್ಣಪುಟ್ಟ ದುರಸ್ತಿ ಕಾರ್ಯಕೈಗೊಳ್ಳಲು 75 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಪ್ರತಿ ಅಂಗನವಾಡಿ ಕಟ್ಟಡಕ್ಕೆ ಕನಿಷ್ಠ ಒಂದರಿಂದ ಒಂದೂವರೆ ಲಕ್ಷ ರೂ. ಅನುದಾನ ಒದಗಿಸಿ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕೈಗೊಳ್ಳಬೇಕು ಎಂದರು.

    ಸಿಇಒ ರಮೇಶ ದೇಸಾಯಿ, ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಿವಾನಂದ ಕನ್ನಪ್ಪಳವರ, ಟಾಕನಗೌಡ ಪಾಟೀಲ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

    ಯುಟಿಪಿ ಕಾಮಗಾರಿ ಮಾಹಿತಿ ನೀಡಿ: ಯುಟಿಪಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಕಾಮಗಾರಿಗಳ ಪ್ರಗತಿಯ ಮಾಹಿತಿಯನ್ನು ಅಧಿಕಾರಿಗಳು ಒದಗಿಸುತ್ತಿಲ್ಲ. ತಕ್ಷಣ ನೀರಾವರಿ ಕಾಲುವೆಗಳ ನಿರ್ವಹಣೆಗೆ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ಒದಗಿಸಬೇಕು. ಪೈಪ್​ಲೈನ್ ಕಾಮಗಾರಿಗಳಿಂದ ರೈತರ ಬೆಳೆ ಹಾನಿಯ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕ್ರಮ ವಹಿಸಬೇಕು. ಸಭೆಗೆ ಸಮರ್ಪಕ ಮಾಹಿತಿ ನೀಡದ ನೀರಾವರಿ ಇಲಾಖೆ ಇಂಜಿನಿಯರ್ ಮೇಲೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts