More

    ಅಧಿಕಾರಿಗಳ ಬುದ್ಧಿವಾದಕ್ಕೆ ಮಣಿದ ಮಗ: ತಾಯಿಯನ್ನು ಜೋಪಾನ ಮಾಡುತ್ತೇನೆಂದು ವಾಗ್ದಾನ

    ಬಳ್ಳಾರಿ: ಹೆತ್ತ ತಾಯಿಯನ್ನು ಗೃಹಬಂಧನದಲ್ಲಿಟ್ಟು ಅಮಾನುಷವಾಗಿ ನಡೆದುಕೊಂಡಿದ್ದ ಮಗ ಕೊನೆಗೂ ಎಚ್ಚೆತ್ತುಕೊಂಡು, ಜೋಪಾನದಿಂದ ನೋಡಿಕೊಳ್ಳುತ್ತೇನೆಂದು ವಾಗ್ದಾನ ಮಾಡಿದ್ದಾನೆ. ಹೀಗಾಗಿ ಅವಕಾಶ ಕೊಟ್ಟು ನೋಡೋಣ ಎನ್ನುವ ನಿರ್ಧಾರಕ್ಕೆ ಬಂದಿರುವ ಅಧಿಕಾರಿಗಳು, ಮಗನ ಸುಪರ್ದಿಗೆ ತಾಯಿಯನ್ನು ಕಳುಹಿಸಲು ತಿರ್ಮಾನಿಸಿದ್ದಾರೆ.

    ನಗರದ ಕೌಲ್ ಬಜಾರ್ ಏರಿಯಾದ ಜವಾರಿ ಬೀದಿಯಲ್ಲಿರುವ ಸುಂಕಲಮ್ಮ ದೇವಸ್ಥಾನದ ಹಿಂಭಾಗದ ನಿಲಯದಲ್ಲಿ ಶ್ರೀನಿವಾಸ ಎಂಬ ಪುತ್ರ, ವೃದ್ಧ ತಾಯಿ ವಿಜಯಲಕ್ಷ್ಮ್ಮಿಯನ್ನು ಮನೆ ಮೇಲಿನ ಕೋಣೆಯಲ್ಲಿ ಕೂಡಿ ಹಾಕಿದ್ದ. ಒಳಗೆ ಹೋಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಸೂಕ್ತ ಚಿಕಿತ್ಸೆಯೂ ಇಲ್ಲದೆ, ಊಟ ದೊರಕದೆ ವೃದ್ಧೆ ಯಮಯಾತನೆ ಅನುಭವಿಸಿದ್ದರು.

    ಸ್ಥಳೀಯರ ಮಾಹಿತಿ ಮೇರೆಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾ.13ರಂದು ವೃದ್ಧೆಯಿರುವ ಮನೆಗೆ ದಾಳಿ ಮಾಡಿ ರಕ್ಷಿಸಿ, ವಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ವೃದ್ಧೆ ಹಲವು ದಿನಗಳಿಂದ ಸ್ನಾನ ಮಾಡದಿರುವುದು, ಶುಗರ್ ಸೇರಿ ನಾನಾ ಕಾಯಿಲೆಗಳು ಒಕ್ಕರಿಸಿದ್ದರಿಂದ ವೃದ್ಧೆ ದೇಹ ಕೊಳೆಯುತಿತ್ತು. ಜತೆಗೆ ಕಾಲಲ್ಲಿ ಹಾಕಿದ ಬ್ಯಾಂಡೇಜ್ ಬಿಚ್ಚದ್ದರಿಂದ ಹುಳುಗಳು ತುಂಬಿದ್ದವು. ಹೀಗಾಗಿ ಹೆತ್ತ ತಾಯಿಯನ್ನೇ ವಿಚಿತ್ರವಾಗಿ ನೋಡಿಕೊಂಡ ಪುತ್ರ ಮತ್ತು ಸೊಸೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಕಳೆದ 14 ದಿನದಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧೆ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ.

    ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ಉತ್ತರಿಸಿರುವ ಮಗ ಶ್ರೀನಿವಾಸ, ಇನ್ನು ಮುಂದೆ ತಾಯಿಯನ್ನು ಜೋಪಾನ ಮಾಡುವೆ. ಗೃಹಬಂಧನದಲ್ಲಿಡಲ್ಲ. ಉತ್ತಮವಾಗಿ ಚಿಕಿತ್ಸೆ ಕೊಡಿಸುವೆನೆಂದು ತಿಳಿಸಿದ್ದಾನೆ. ಹೀಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಮತ್ತೆ ವೃದ್ಧೆಯನ್ನು ಮಗನ ಬಳಿ ಬಿಡಲು ತಿರ್ವಾನಿಸಿದ್ದಾರೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ಮೂರ‌್ನಾಲ್ಕು ದಿನಕ್ಕೊಮ್ಮೆ ವೃದ್ಧೆಯಿರುವ ಮನೆಗೆ ಭೇಟಿ ನೀಡಲಿದೆ. ಮತ್ತೆ ಹಿಂದಿನಂತೆ ವರ್ತಿಸಿದರೆ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಗ ಮತ್ತು ಸೊಸೆ ವಿರುದ್ಧ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಧಿಕಾರಿಗಳು ತಿರ್ಮಾನಿಸಿದ್ದಾರೆ. ಈ ಕುರಿತು ವಿಜಯವಾಣಿ ಮಾ.14ರಂದು ‘ಗೃಹಬಂಧಮುಕ್ತರಾದ ವೃದ್ಧೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts