More

    ದೇವಾಲಯಗಳಿಂದ ಹೆಚ್ಚಾಗುವುದು ಸನಾತನ ಧರ್ಮದ ಶಕ್ತಿ: ಕನ್ಯಾಡಿ ಬ್ರಹ್ಮಾನಂದ ಶ್ರೀ ಆಶೀರ್ವಚನ

    ಬೆಳ್ತಂಗಡಿ: ಸನಾತನ ಹಿಂದು ಸಮಾಜದ ಸಂಸ್ಕಾರಯುತ ಬದುಕಿಗೆ ಭಗವದ್ಗೀತೆ, ರಾಮಾಯಾಣ, ಮಹಾಭಾರತ ಗ್ರಂಥಗಳು ದಾರಿದೀಪಗಳಾಗಿವೆ. ದೇವಾಲಯಗಳು, ವಿದ್ಯಾಲಯಗಳು ನಮ್ಮ ಸಂಸ್ಕಾರ ಕೇಂದ್ರಗಳಾಗಿವೆ. ಇವುಗಳು ಜೀರ್ಣೋದ್ಧಾರಗೊಂಡು, ಗಟ್ಟಿಯಾದಾಗ ಸನಾತನ ಹಿಂದು ಧರ್ಮಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದು ಶ್ರೀರಾಮ ಕ್ಷೇತ್ರ ಕನ್ಯಾಡಿಯ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಸೋಮವಾರ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

    ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಬರೋಡ ಅಧ್ಯಕ್ಷತೆ ವಹಿಸಿದ್ದರು.

    ಕಳಿಯ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಬ್ರಹ್ಮಕಲಶೋತ್ಸವದ ಬಳಿಕವೂ ದೇವಾಲಯಗಳಲ್ಲಿ ಮೂರು ಹೊತ್ತು ದೇವರಿಗೆ ಪೂಜೆ ನಡೆಯಬೇಕು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಬಂದಾಗ ಊರಿನ ಪ್ರಗತಿಗೂ ಕಾರಣವಾಗುತ್ತದೆ. ಓಡೀಲು ದೇವಸ್ಥಾನದಲ್ಲಿ ಎಲ್ಲ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ, ದೇವಾಲಯಗಳ ಮೂಲಕ ಸಂಸ್ಕಾರ ನೀಡುವ ಕಾರ್ಯಗಳು ನಡೆಯಬೇಕು ಎಂದರು.

    ಅರ್ಕಜೆ ಅವಿಭಕ್ತ ಕುಟುಂಬದ ಹಿರಿಯರಾದ ಲಲಿತ ದೂಮಣ್ಣ ಶೆಟ್ಟಿ ಇವರ ಪಾದಪೂಜೆ ಅವರ ಕುಟುಂಬಸ್ಥರು ನೆರವೇರಿಸಿದರು.
    ಶಂಕರನಾರಾಯಣ ಭಟ್ ಮಿತ್ತೊಟ್ಟು, ಸ್ವಸ್ತಿಕ್ ಲುಮೀನರ್ಸ್‌ ಪಡಂಗಡಿಯ ಸಂಪತ್‌ಕುಮಾರ್ ಜೈನ್, ವಿಠಲ ಶೆಟ್ಟಿ ಪಾಡ್ಯಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಸಮಿತಿ ಕೋಶಾಧಿಕಾರಿ ವಸಂತ ಗೌಡ ವರಕಬೆ, ಶ್ರೀಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದರು.

    ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿಯ ಸದಸ್ಯೆ ಶಾಂತಾ ಜೆ.ಬಂಗೇರ ವಂದಿಸಿದರು.

    ದೇವಾಲಯಗಳು ಹಿಂದು ಧರ್ಮದ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ನಾವು ಭಕ್ತಿ, ಶ್ರದ್ಧೆಯನ್ನು ಸಮರ್ಪಣೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರಿಗೆ ಬ್ರಹ್ಮಕಲಶೋತ್ಸವ ಮುಖ್ಯವಲ್ಲ, ಬಳಿಕ ನಾವೆಷ್ಟು ಬಾರಿ ದೇವಸ್ಥಾನಕ್ಕೆ ಬರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿಯ ಬ್ರಹ್ಮಕಲಶೋತ್ಸವದಲ್ಲಿ ಹಿರಿಯರ,ಮಾತೆಯ ಪಾದಪೂಜೆ ಮೂಡುವ ಮೂಲಕ ಸತ್ಕರ್ಮಗಳಿಗೆ ಪ್ರೇರಣೆಯಾಗಿದ್ದಾರೆ.
    – ಶ್ರೀ ರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠ

    ನಾಲ್ಕು ಗ್ರಾಮಗಳಿಂದ ಸಮರ್ಪಣೆಯಾದ ಹೊರಕಾಣಿಕೆ ನೋಡಿದಾಗ ಗ್ರಾಮದಲ್ಲಿ ಜನರು ಸಮರ್ಪಣಾ ಭಾವದಿಂದ ಹೊರೆಕಾಣಿಕೆ ತಂದಿದ್ದಾರೆ ಎನ್ನುವುದು ಸ್ಪಷ್ಟ. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯಿಂದ ಹಿಡಿದು ಎಲ್ಲ ಕಾರ್ಯಗಳನ್ನು ವಿವಿಧ ಸಮಿತಿಯವರು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಕೇಳಿದಾಗ, ಕೊಡುವುದಕ್ಕಿಂತ, ಕೊಡುವ ಮನೋಭಾವ ಬರಬೇಕು. ದೇವರಿಗೆ ವಸ್ತುರೂಪದಲ್ಲೂ ಸೇವೆಯನ್ನು ಸಲ್ಲಿಸಬಹುದು.
    – ಶಶಿಧರ ಶೆಟ್ಟಿ ಬರೋಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts