More

    ಪರೀಕ್ಷೆಯಲ್ಲಿ ಅನುತ್ತೀರ್ಣ ಸಂಖ್ಯೆ ಕಡಿತಗೊಳಿಸುವ ಉದ್ದೇಶ: ಸಚಿವ ಮಧು

    ಬೆಂಗಳೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮೂರು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ವಿಕಾಸಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷೆ-1ರ ಪೂರ್ವಭಾವಿ ಸಿದ್ದತೆ ಕುರಿತು ಮಾಹಿತಿಯನ್ನು ಹಂಚಿಕೊಂಡ ಅವರು, ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಸಾಮಾನ್ಯ ಪ್ರಶ್ನೆಗಳಿಗೆ ಮಂಡಳಿಯ ವೆಬ್‌ಸೈಟ್‌ನಲ್ಲಿ ಉತ್ತರಗಳನ್ನು ಕಲ್ಪಿಸುವ ಮೂಲಕ ಗೊಂದಲಗಳನ್ನು ಪರಿಹರಿಸಲಾಗಿದೆ ಎಂದರು.

    ಈ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ 80 ಅಂಕ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಅಂತರಿಕ ಮೌಲ್ಯಮಾಪನ ಮಾಡಲಾಗುತ್ತದೆ. ಹಾಗೆಯೇ ರೆಗ್ಯುಲರ್ ವಿದ್ಯಾರ್ಥಿಗಳಿಗೆ ವಿತರಿಸುವ 80 ಅಂಕಗಳ ಪ್ರಶ್ನೆಪತ್ರಿಕೆಗಳನ್ನೇ ಖಾಸಗಿ ಅಭ್ಯರ್ಥಿಗಳಿಗೂ ವಿತರಿಸಲಾಗುತ್ತದೆ. ಖಾಸಗಿ ಅಭ್ಯರ್ಥಿಗಳು 80 ಅಂಕಗಳಿಗೆ ಗಳಿಸುವ ಅಂಕಗಳನ್ನು ನೂರು ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

    ವಸಸಂಹಿತೆ ಇಲ್ಲ:

    ಪರೀಕ್ಷಾ ಕೇಂದ್ರದಲ್ಲಿನ ಸಮವಸ ಕುರಿತಂತೆ ಸ್ಪಷ್ಟಪಡಿಸಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯಾ ಶಾಲೆಯ ಸಮವಸವನ್ನು ಧರಿಸಬೇಕು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಾಲಿಸಬೇಕು. ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ಹೇಳಿದರು.

    ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಏಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ -2 ಮೇ 3ನೇ ವಾರದಲ್ಲಿ ನಡೆಸಲಾಗುವುದು. ಆಯಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತುರ್ತಾಗಿ ಅಂಕಪಟ್ಟಿ ಅಗತ್ಯವಿದ್ದಲ್ಲಿ ಡಿಜಿಲಾಕರ್‌ನಿಂದ ಪಡೆಯಬಹುದು. ಒಂದು ವೇಳೆ ವಿದ್ಯಾರ್ಥಿ ಮೊದಲ ವಾರ್ಷಿಕ ಪರೀಕ್ಷೆ ಮಾತ್ರ ಬರೆಯುವ ನಿರ್ಧಾರ ಕೈಗೊಂಡಿದ್ದರೆ ಫಲಿತಾಂಶ ಪ್ರಕಟಗೊಂಡ ಒಂದು ತಿಂಗಳೊಳಗೆ ಅಂಕಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಇಲಾಖೆ ಅಧಿಕಾರಿಗಳಾದ ರಿತೇಶ್‌ಕುಮಾರ್ ಸಿಂಗ್, ಎನ್. ಮಂಜುಶ್ರೀ, ಬಿ.ಬಿ. ಕಾವೇರಿ, ಸಿಂಧು ಬಿ. ರೂಪೇಶ್, ಎಚ್.ಎನ್. ಗೋಪಾಲಕೃಷ್ಠ ಉಪಸ್ಥಿತರಿದ್ದರು.

    ಎಸ್ಸೆಸ್ಸೆಲ್ಸಿಗೆ 9 ಲಕ್ಷ ವಿದ್ಯಾರ್ಥಿಗಳು
    ಮಾ.1 ರಿಂದ ಮಾ. 22ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು 3,30,644 ಬಾಲಕರು ಮತ್ತು 3,67,980 ಬಾಲಕಿಯರು ಸೇರಿ ಒಟ್ಟು 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
    ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ. 25ರಿಂದ ಏ.6ರ ವರೆಗೆ ನಡೆಯಲಿದ್ದು 4,58,427 ಬಾಲಕರು ಮತ್ತು 4,37,844 ಬಾಲಕಿಯರು ಸೇರಿ ಒಟ್ಟು 8,96,271 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ. 2,747 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

    52 ಅನಧಿಕೃತ ಶಾಲೆಗಳು
    ರಾಜ್ಯದಲ್ಲಿ ಪ್ರಸ್ತುತ 52 ಅನಧಿಕೃತ ಶಾಲೆಗಳಿರುವುದು ದೃಢಪಟ್ಟಿದೆ. ಈ ಶಾಲೆಗಳಲ್ಲಿ ಓದುತ್ತಿರುವ ಸುಮಾರು 5 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ಅವರನ್ನು ಪಕ್ಕದ ಅಧಿಕೃತ ಶಾಲೆಗಳ ಜತೆ ಸಂಯೋಜನೆ ನಡೆಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts