More

    ಚರಂಡಿ ಹೂಳೆತ್ತುವ ಕಾಮಗಾರಿಗೆ ಆಕ್ಷೇಪ

    ಕುಮಟಾ: ಮಳೆಗಾಲಕ್ಕೆ ಮುನ್ನ ಮಾಡಬೇಕಾದ ಚರಂಡಿ ಹೂಳೆತ್ತುವ ಕಾಮಗಾರಿ ಇನ್ನೂ ಬಹಳಷ್ಟು ಕಡೆಗಳಲ್ಲಿ ಬಾಕಿ ಇದೆ. ಮಾಡಿದ ಕೆಲಸವೂ ಸರಿಯಾಗಿಲ್ಲ ಎಂದು ಪುರಸಭೆಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

    ಸೋಮವಾರ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಸೋಮವಾರ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಕ್ಷೇಪಿಸಿದರು.

    ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ನಡೆಸಿದ ಚರಂಡಿ ಹೂಳೆತ್ತಿ ಸ್ವಚ್ಛಗೊಳಿಸುವ ಕಾಮಗಾರಿಗೆ ಸಂಬಂಧಿಸಿ ಸಭೆಯ ಅನುಮೋದನೆಗೆ ವಿಷಯ ಪ್ರಸ್ತಾಪಿಸಿದಾಗ ಸಭೆಯಲ್ಲಿ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

    ವಾರ್ಡ್​ನ ಬಹಳಷ್ಟು ಕಡೆಗಳಲ್ಲಿ ಚರಂಡಿ ಹೂಳೆತ್ತಿಲ್ಲ. ಹೂಳೆತ್ತಿದ ಬಳಿಕ ಹೂಳನ್ನು ಅಲ್ಲಿಯೇ ನಾಲ್ಕೈದು ದಿನ ಬಿಟ್ಟಿದ್ದರಿಂದ ಮಳೆಗೆ ಪುನಃ ಹೂಳು ಗಟಾರ್ ಸೇರಿದೆ. ಮಾಡಿದ ಕೆಲಸ ಸರಿಯಾಗಿಲ್ಲ. ಮಳೆಗಾಲ ಮುಗಿಯುವವರೆಗೂ ಹೂಳೆತ್ತುವ ಕೆಲಸ ಮಾಡುತ್ತಲೇ ಇರುತ್ತೀರಾ ಎಂದು ಪ್ರಶ್ನಿಸಿದರು.

    ಉಪಾಧ್ಯಕ್ಷ ರಾಜೇಶ ಪೈ ಉತ್ತರಿಸಿ, ಕೆಲಸಗಾರರ ಲಭ್ಯತೆಯ ಆಧಾರದಲ್ಲಿ ಪ್ರತಿ ವಾರ್ಡ್​ನಲ್ಲೂ ವೇಗವಾಗಿ ಕೆಲಸ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

    ಮುಖ್ಯವಾಗಿ ನಗರಾಭಿವೃದ್ಧಿ ಇಲಾಖೆ ಹಾಗೂ ಒಳಚರಂಡಿ ಮಂಡಳಿಯಿಂದ ಒಳಚರಂಡಿ ಕಾಮಗಾರಿಗೆ ಪರಿಷ್ಕೃತ ದರಪಟ್ಟಿಯಂತೆ 79.60 ಕೋಟಿ ರೂಪಾಯಿಗಳಿಗೆ ಅನುಮೋದಿಸಿ ಠರಾವು ಪಾಸು ಮಾಡಲಾಯಿತು.

    ಪುರಸಭೆ ತರಕಾರಿ ಮಾರುಕಟ್ಟೆ ಬಳಿಯ ಹಳೆಯ ಬಸ್ ನಿಲ್ದಾಣ ತೆರವುಗೊಳಿಸುವ ಕುರಿತು ಮುಖ್ಯಾಧಿಕಾರಿ ಸುರೇಶ ಎಂ.ಕೆ. ಸದಸ್ಯರ ಅನುಮತಿ ಕೋರಿದರು. ಇದೇ ರೀತಿ ಹಳೇ ಮೀನು ಪೇಟೆ ಬಳಿಯ ಶಿಥಿಲ ಕಟ್ಟಡಗಳನ್ನು ಕೂಡಲೆ, ತೆರವುಗೊಳಿಸದಿದ್ದರೆ ಅಪಾಯವಿದೆ ಎಂದು ಸದಸ್ಯ ಸಂತೋಷ ನಾಯ್ಕ ಎಚ್ಚರಿಸಿದರು.

    ಉಳಿದಂತೆ ಪೌಕಾರ್ವಿುಕರ ಉಪಾಹಾರ ಭತ್ಯೆ, ಟೆಂಡರ್​ಗಳು, ಹೊರಗುತ್ತಿಗೆ ನೌಕರರ ನೇಮಕಾತಿ ಹಾಗೂ ಸಂಬಳ ವಿಚಾರ, ಮರಾಕಲ್ ಜಂಟಿ ನೀರು ಸರಬರಾಜು ಯೋಜನೆ, ಗುಂದ ರಸ್ತೆ ನಿರ್ವಣಕ್ಕೆ ಭೂಸ್ವಾಧೀನ, ವಿವಿಧ ಸಾಮಗ್ರಿ ಖರೀದಿ, ಕ್ರಿಯಾಯೋಜನೆಗಳು ಇನ್ನಿತರ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಯಾಯಿತು.

    ಅಧ್ಯಕ್ಷೆ ಮೋಹಿನಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಅನೀಲ ಹರ್ಮಲಕರ್ ಹಾಗೂ ಸದಸ್ಯರು ಇದ್ದರು.

    ಬೀದಿ ನಾಯಿಗಳ ಸಂತಾನ ಶಕ್ತಿಹರಣಕ್ಕೆ ರೂ. 7 ಲಕ್ಷ

    ಒಂದೊಂದು ಬೀದಿನಾಯಿಗೆ ಸಾವಿರಾರು ರೂಪಾಯಿ ವ್ಯಯಿಸಿ ಮಾಡಿದ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ವ್ಯರ್ಥವಾಗಿದೆ ಎಂದು ಸದಸ್ಯ ಸಂತೋಷ ನಾಯ್ಕ ಸಭೆಯ ಗಮನ ಸೆಳೆದರು. ಪ್ರತಿ ನಾಯಿಯ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ 1110 ರೂಪಾಯಿಗಳಂತೆ ಪುರಸಭೆ ಪಾವತಿಸಬೇಕಿದೆ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ನಿರ್ವಿುಸಿದ್ದ ಟೆಂಟ್​ಗೆ ತಿಂಗಳಿಗೆ 30 ಸಾವಿರ ರೂಪಾಯಿ ಬಾಡಿಗೆಯಂತೆ ಎರಡು ತಿಂಗಳಿಗೆ 60 ಸಾವಿರ ರೂಪಾಯಿ ತುಂಬಬೇಕಿದೆ. ಒಟ್ಟು 640 ಬೀದಿನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು. 7,10,400 ರೂಪಾಯಿ ವೆಚ್ಚ ತಗುಲಿದೆ. ಆದರೆ, ಈಗ ಶಸ್ತ್ರ ಚಿಕಿತ್ಸೆಯಾದ ನಾಯಿಗಳು ಮರಿ ಹಾಕುತ್ತಿದೆ ಎಂದರು. ಇದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿದರು. ಮುಖ್ಯಾಧಿಕಾರಿ ಸುರೇಶ ಎಂ.ಕೆ. ಪ್ರತಿಕ್ರಿಯಿಸಿ, ಶಸ್ತ್ರ ಚಿಕಿತ್ಸೆ ಮಾಡಿದ ನಾಯಿಯ ಕಿವಿಗೆ ‘ವಿ’ ಆಕಾರದಲ್ಲಿ ಗಾಯದ ಗುರುತು ಮಾಡಲಾಗಿದ್ದು, ಪರಿಶೀಲಿಸಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts