More

    ಒಬಿಸಿಗೆ ಮೀಸಲು ಬಲ; ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33 ಪ್ರಾತಿನಿಧ್ಯ

    ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ‘ಅಧಿಕೃತವಾಗಿ’ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಿದ್ದ ನ್ಯಾ.ಭಕ್ತವತ್ಸಲ ಆಯೋಗವು ಸಲ್ಲಿಸಿದ ದ್ವಿತೀಯ ಹಾಗೂ ಪೂರಕ ವರದಿಯನ್ನು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಹಿಂದಿನ ಎರಡು ಸಭೆಯಲ್ಲಿಯೂ ವರದಿ ಬಗ್ಗೆ ಚರ್ಚೆ ನಡೆದಿದ್ದರೂ ಅಂಗೀಕರಿಸಿರಲಿಲ್ಲ. ಇದೀಗ ತೀರ್ಮಾನ ಕೈಗೊಂಡಿದ್ದು, ನಗರ ಸ್ಥಳೀಯ ಸಂಸ್ಥೆ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮೀಸಲು ನೀಡಲು ಅವಕಾಶ ಸಿಗಲಿದೆ. ಮಹಾರಾಷ್ಟ್ರ ಪ್ರಕರಣದಲ್ಲಿ ಯಾವ ಆಧಾರ, ಮಾನದಂಡದಲ್ಲಿ ರಾಜಕೀಯ ಮೀಸಲು ನೀಡಲಾಗುತ್ತಿದೆ ಎಂದು ಸವೋಚ್ಛ ನ್ಯಾಯಾಲಯ ತಿಳಿಯಬಯಸಿತ್ತು. ಹೀಗಾಗಿ ಸರ್ಕಾರ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯನ್ನು ಅರಿಯಲು ಆಯೋಗ ರಚಿಸಿತ್ತು. ಇದೀಗ ವರದಿ ಪಡೆದುಕೊಂಡು ತಾನು ಯಾವ ಆಧಾರದಲ್ಲಿ ಮೀಸಲು ಕೊಡುತ್ತಿದ್ದೇವೆ ಎಂದು ಅಧಿಕೃತ ಮುದ್ರೆಯೊತ್ತಿದೆ. ಇದರಿಂದ ವಿವಿಧ ಹಂತದ ಸ್ಥಳೀಯ ಸಂಸ್ಥೆ ಚುನಾವಣೆಗೆ ಉಂಟಾಗಿದ್ದ ದೊಡ್ದ ಅಡೆತಡೆ ನಿವಾರಣೆಯಾಗಿದೆ.ಸಮಿತಿಯು ಐದು ಶಿಫಾರಸು ಮಾಡಿದ್ದು, ಅದರಲ್ಲಿ ಮೂರನ್ನು ಮಾತ್ರ ಅಂಗೀಕರಿಸಲಾಗಿದೆ ಎಂದು ಸಭೆಯ ನಂತರ ಕಾನೂನು ಸಚಿವ ಎಚ್.ಕೆ. ಪಾಟೀಲ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಮುಂದೇನು?: ಒಬಿಸಿ ಮೀಸಲು ಸಂಬಂಧ ಪ್ರಕರಣ ಸುಪ್ರಿಂಕೋರ್ಟ್​ನಲ್ಲಿದ್ದು, ಸರ್ಕಾರ ತನ್ನ ತೀರ್ವನವನ್ನು ನ್ಯಾಯಾಲಯಕ್ಕೆ ತಿಳಿಸಬೇಕಾಗಿದೆ. ಈ ಹಿಂದೆ ಗಡುವನ್ನೂ ಸಹ ನೀಡಿತ್ತು. ಇದೀಗ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಿದೆ. ಬಳಿಕ ಪೂರಕ ಕಾನೂನು ತಿದ್ದುಪಡಿ ತಂದು ಶಾಸನ ಸಭೆಯಲ್ಲಿ ಒಪ್ಪಿಗೆ ಪಡೆದು ಮೀಸಲು ಜಾರಿ ಮಾಡಬೇಕಿದೆ. ಚಳಿಗಾಲದ ಅಧಿವೇಶನ ನಡೆದಲ್ಲಿ ಸುಗ್ರೀವಾಜ್ಞೆಗೂ ಅವಕಾಶ ಇರಲಿದೆ.

    ಹಿಂದುಳಿದ ಮೀಸಲೇಕೆ?: ಭಕ್ತವತ್ಸಲ ಸಮಿತಿ ಪ್ರಕಾರ, ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿನ ಪ್ರತ್ಯಕ್ಷ (ಎಂಫರಿಕಲ್) ದತ್ತಾಂಶ ಆಧರಿಸಿ ಹೇಳುವುದಾದರೆ ಇತರೆ ಹಿಂದುಳಿದ ವರ್ಗಗಳ ವಿಭಾಗ ‘ಎ’ ಮತ್ತು ‘ಬಿ’ ಅಡಿ ಬರುವ ಅಸಂಖ್ಯಾತ ಜಾತಿ ಮತ್ತು ಸಮುದಾಯಗಳು ಇಂದಿಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿವೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಟ್ಟಾರೆ ಸೀಟುಗಳ ಪೈಕಿ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡುವುದು ಸಮರ್ಥನೀಯ ಎಂದು ವಿವರಿಸಿದೆ.

    ಕೆಎಂಸಿ ಕಾಯ್ದೆ ಸೆಕ್ಷನ್ 10ರಡಿ ಹಿಂದುಳಿದ ವರ್ಗಗಳ ‘ಎ’ ಮತ್ತು ‘ಬಿ’ ಅಧೀನದಲ್ಲಿ ಬರುವ ಸದಸ್ಯರಿಗೆ ಒಟ್ಟಾರೆ ಮೇಯರ್ ಮತ್ತು ಉಪಮೇಯರ್​ಗಳ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ, ಬಿಬಿಎಂಪಿ ಕಾಯ್ದೆ ಸೆಕ್ಷನ್ 58ರಲ್ಲಿ ಒಬಿಸಿಗಳಿಗೆ ಸಂಬಂಧಿಸಿದ ಸೀಟುಗಳ ಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳದೇ ಮೌನ ವಹಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ. 2027 ಅಥವಾ 2028ರಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಪರಿಣಾಮಕಾರಿಯಾಗಿ ಮೀಸಲು ಕಲ್ಪಿಸಲು ಹಾಲಿ ಹಿಂದುಳಿದ ವರ್ಗಗಳ ವಿಭಾಗ ‘ಎ’ ಮತ್ತು ‘ಬಿ’ ಮರುವರ್ಗೀಕರಿಸಿ, ಮತ್ತೆರಡು ಹಿಂದುಳಿದ ವರ್ಗಗಳನ್ನಾಗಿಸಲು ಪರಿಶೀಲಿಸಬಹುದು ಎಂಬ ಅಭಿಪ್ರಾಯ ನೀಡಲಾಗಿದೆ. ಆದರೆ, ಸಂಪುಟ ಈ ಅಂಶವನ್ನು ಪರಿಗಣಿಸದಿರುವುದಕ್ಕೆ ಸಾಕಷ್ಟು ಮಹತ್ವವಿದೆ.

    ಅನುಮೋದಿತ ಶಿಫಾರಸುಗಳು

    ಮುಂಬರುವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಲು ಭಕ್ಸವತ್ಸಲ ಸಮಿತಿ ಶಿಫಾರಸು ಮಾಡಿದೆ. ಹಾಗೆಯೇ, ಒಟ್ಟಾರೆ ಮೀಸಲಾತಿಯು ಶೇ.50 ಅನ್ನು ಮೀರದಂತೆ ಮುಂದುವರಿಸಿಕೊಂಡು ಹೋಗುವಂತೆಯೂ ಸ್ಪಷ್ಟವಾಗಿ ವರದಿಯಲ್ಲಿ ತಿಳಿಸಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹತೋಟಿಗೆ ನೀಡಲು ಮಾಡಿದ ಶಿಫಾರಸ್ಸನ್ನು ಸಹ ಸಚಿವ ಸಂಪುಟ ಸಭೆ ಒಪ್ಪಿದೆ. ಮೂರನೆಯದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲು ಕಲ್ಪಿಸಬೇಕೆಂಬ ಆಯೋಗದ ಪ್ರಸ್ತಾಪವನ್ನೂ ಒಪ್ಪಲಾಗಿದೆ. ಅಂದಹಾಗೆ, ಅಂಗೀಕರಿಸದಿರುವ ಎರಡು ಪ್ರಮುಖ ಶಿಫಾರಸನ್ನು ಮರು ಪರಿಶೀಲನೆಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾಪ ಸಹ ಇಲ್ಲ.

    ತಿರಸ್ಕಾರಗೊಂಡ ಸಲಹೆಗಳೇನು?

    ಬಿಬಿಎಂಪಿ ಕಾಯ್ದೆ 2020ರಂತೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ 30 ತಿಂಗಳು ಕಾಲಾವಧಿ ನಿಗದಿ ಪಡಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರುವುದು ಸೂಕ್ತವೆಂದು ಹೇಳಿದ್ದನ್ನು ಸಂಪುಟ ಸಭೆ ಒಪ್ಪಿಲ್ಲ. 2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿಗಳನ್ನು ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಶಿಫಾರಸನ್ನು ಕಡೆಗಣಿಸಿದೆ.

    ಕೊರತೆ ಅಧ್ಯಯನ

    ನ್ಯಾ. ಭಕ್ತವತ್ಸಲ ಅಧ್ಯಕ್ಷತೆಯ ಆಯೋಗವು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಅಧ್ಯಯನ ನಡೆಸಿ, ಶಿಫಾರಸು ಮಾಡಲು ಕಾರ್ಯನಿರ್ವ ಹಿಸುತ್ತಿತ್ತು. ತನ್ನ ಮೊದಲ ವರದಿಯನ್ನು 2022ರ ಜುಲೈ 21ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಬಿಜೆಪಿ ಸರ್ಕಾರವಿದ್ದಾಗಲೇ ವರದಿ ಸಂಪುಟದ ಮುಂದೆ ಬಂದಿದ್ದು, ಪೂರ್ಣ ವರದಿಯನ್ನು ಅಂಗೀಕರಿಸಿತ್ತು. ಇದೀಗ ಮತ್ತೆ 2ನೇ ವರದಿಯನ್ನು ಸ್ವೀಕರಿಸಲಾಗಿದೆ.

    ಎಲ್ಲೆಲ್ಲಿ ಅನ್ವಯ?

    • 31 ಜಿಪಂ, 240 ತಾಪಂ
    • 10 ಮಹಾನಗರ ಪಾಲಿಕೆ, 61 ನಗರಸಭೆ
    • 124 ಪುರಸಭೆ, 115 ಪಟ್ಟಣ ಪಂಚಾಯಿತಿ
    • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
    • 6,022 ಗ್ರಾಪಂಗಳು

    ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ನೀಡಲು ಭಕ್ತವತ್ಸಲ ಸಮಿತಿ ಶಿಫಾರಸನ್ನು ಸರ್ಕಾರ ರ್ಚಚಿಸಿ ಅಂಗೀಕರಿಸಿದೆ.

    | ಎಚ್.ಕೆ. ಪಾಟೀಲ್ ಕಾನೂನು ಮತ್ತು ಸಂಸದೀಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts