More

    ನ್ಯಾಯದೇವತೆ | ಅಜ್ಜ-ಅಜ್ಜಿಯ ಆಸ್ತಿಯಲ್ಲಿ ನನಗೆ ಪಾಲಿಲ್ಲವೇ?

    ನ್ಯಾಯದೇವತೆ | ಅಜ್ಜ-ಅಜ್ಜಿಯ ಆಸ್ತಿಯಲ್ಲಿ ನನಗೆ ಪಾಲಿಲ್ಲವೇ?ಪ್ರಶ್ನೆ: ನಮ್ಮ ತಾಯಿಯ ತಂದೆ ತೀರಿಕೊಂಡು ಮೂವತ್ತು ವರ್ಷಗಳಾದವು. ನಮ್ಮ ಅಜ್ಜಿ ತೀರಿಕೊಂಡು ಇಪ್ಪತ್ತೈದು ವರ್ಷಗಳಾಗಿವೆ. ಅವರಿಗೆ ನಮ್ಮ ತಾಯಿ ಒಬ್ಬಳೇ ಮಗಳು. ನಮ್ಮ ತಾತ ಅಜ್ಜಿಯ ಎಲ್ಲ ಆಸ್ತಿಗಳೂ ನಮ್ಮ ತಾಯಿ ಹೆಸರಿಗೇ ಇವೆ. ಅವುಗಳ ಖಾತೆ ಪಹಣಿ ಮಾಡಲು ನಮ್ಮ ತಂದೆ ತುಂಬಾ ಕಷ್ಟ ಪಟ್ಟಿದ್ದಾರೆ. ನಮ್ಮ ತಾಯಿಗೆ ನಾನು ಒಬ್ಬಳೇ ಮಗಳು. ಈಗ ನಮ್ಮ ತಾಯಿ ನನ್ನನ್ನೂ ನನ್ನ ತಂದೆಯನ್ನೂ ಬಿಟ್ಟು ಬೇರೆ ವಾಸ ಮಾಡುತ್ತಿದ್ದಾರೆ. ನನಗೂ ನಮ್ಮ ತಂದೆಗೂ ಏನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ತಾತ ಅಜ್ಜಿಯ ಆಸ್ತಿಯಲ್ಲಿ ನನಗೆ ಪಾಲು ಬರುವುದಿಲ್ಲವೇ? ನಾನು ಕೋರ್ಟಿಗೆ ಹೋದರೆ ಅರ್ಧ ಆಸ್ತಿ ನನಗೆ ಬರುತ್ತದೆಯೇ? ನಮ್ಮ ತಂದೆ ಕಷ್ಟ ಪಟ್ಟಿದ್ದಕ್ಕೆ ಅವರಿಗೆ ಆಸ್ತಿಯಲ್ಲಿ ಭಾಗ ಇರುವುದಿಲ್ಲವೇ? ದಯವಿಟ್ಟು ತಿಳಿಸಿ.

    ಉತ್ತರ: ನಿಮ್ಮ ತಾಯಿಗೆ ಅವರ ತಂದೆ ತಾಯಿಯಿಂದ ಬಂದ ಆಸ್ತಿ, ನಿಮ್ಮ ತಾಯಿಯ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗಿರುತ್ತದೆ. ಸ್ವಯಾರ್ಜಿತ ಆಸ್ತಿಯಂತೆ ಅವರು ಆ ಆಸ್ತಿಗಳನ್ನು ಹೇಗೆ ಬೇಕಾದರೂ ಉಪಯೋಗಿಸಬಹುದು, ವಿಲೇವಾರಿ ಮಾಡಬಹುದು. ಯಾರಿಗೆ ಕೊಡಬೇಕು ಬಿಡಬೇಕು ಎನ್ನುವುದು ಅವರ ಇಷ್ಟ. ನಿಮಗಾಗಲೀ ನಿಮ್ಮ ತಂದೆಗಾಗಲೀ ಯಾವುದೇ ಭಾಗವೂ ಬರುವುದಿಲ್ಲ. ನಿಮ್ಮ ತಂದೆ ಕಷ್ಟ ಪಟ್ಟಿದ್ದಕ್ಕೆ ಆಸ್ತಿಯಲ್ಲಿ ಭಾಗ ಕೊಡಲು ಯಾವುದೇ ಕಾನೂನೂ ಇಲ್ಲ. ನಿಮ್ಮ ತಾಯಿಯ ಜೊತೆ ರಾಜಿ ಮಾಡಿಕೊಂಡು ಅವರ ಮನ ಒಲಿಸಿಕೊಂಡು, ಅವರೇ ಏನಾದರೂ ಆಸ್ತಿ ಕೊಟ್ಟರೆ ಅದನ್ನು ಪಡೆಯುವುದು ಒಳ್ಳೆಯದು.

    ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ನನಗೆ ಒಂಬತ್ತು ತಿಂಗಳ ಮಗ ಇದ್ದಾನೆ. ನನ್ನ ಹೆಂಡತಿ ನನ್ನ ತಂದೆ ತಾಯಿಯನ್ನು, ನನ್ನ ಅಕ್ಕ ತಂಗಿಯನ್ನು ಯಾವಾಗಲೂ ಅವಮಾನ ಮಾಡುತ್ತಿರುತ್ತಾಳೆ. ನನಗೂ ಬೆಲೆ ಕೊಡುತ್ತಿಲ್ಲ. ನಾನು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಆರು ತಿಂಗಳ ಒಳಗೆ ನನಗೆ ವಿಚ್ಛೇದನ ಸಿಗುತ್ತದೆಯೇ?

    ಉತ್ತರ: ದಾಂಪತ್ಯ ಜೀವನದ, ದಿನನಿತ್ಯದ ಏರು-ಪೇರುಗಳಿಗೆ ವಿಚ್ಛೇದನ ಉತ್ತರವಲ್ಲ. ನೀವು ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದರೆ, ನೀವು ಹೇಳುವ ಕಾರಣಗಳಿಂದ ನಿಮಗೆ ವಿಚ್ಛೇದನ ಸಿಗುವುದು ಕಷ್ಟ. ಮೇಲಾಗಿ ಆರು ತಿಂಗಳ ಒಳಗೆ ಪ್ರಕರಣ ಕೊನೆಯಾಗುವ ಸಾಧ್ಯತೆ ಇರುವುದಿಲ್ಲ. ನಿಮ್ಮ ಪತ್ನಿ ತಮ್ಮ ತಕರಾರು ಸಲ್ಲಿಸಿದರೆ, ಎರಡೂ ಕಡೆ ವಿಚಾರಣೆ ಮಾಡಿ, ಸರಿಯಾದ ಕಾರಣಗಳು ಇದ್ದಾಗ ಮಾತ್ರ ವಿಚ್ಛೇದನ ಕೊಡುತ್ತಾರೆ. ನೀವು ಪ್ರಕರಣ ದಾಖಲಿಸುವ ಬದಲು, ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕಾ ಕೇಂದ್ರಕ್ಕೆ “ನನಗೂ ನನ್ನ ಪತ್ನಿಗೂ ಮಧ್ಯೆ ಕೆಲವು ದಾಂಪತ್ಯ ಜೀವನದ ಸಮಸ್ಯೆಗಳಿವೆ. ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ನಡೆಸಿ ಅದನ್ನು ಬಗೆಹರಿಸಲು ಸಹಾಯ ಮಾಡಿ”, ಎಂದು ಅರ್ಜಿ ಕೊಡಿ. ಕೇಂದ್ರದವರು ನಿಮ್ಮ ಇಬ್ಬರನ್ನೂ ಹಿರಿಯರನ್ನೂ ಕರೆಸಿ, ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡುತ್ತಾರೆ. ಆ ನಂತರ ಕೇಸು ಹಾಕಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳಿ ಅಥವಾ ಇಬ್ಬರೂ ವಿವಾಹ ಸಂಧಾನಕಾರರ/ಮ್ಯಾರೇಜ್‌ ಕೌನ್ಸೆಲರ್‌ ಹತ್ತಿರ ಹೋಗಿ. ಅವರು ನಿಮ್ಮಿಬ್ಬರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

    (ಲೇಖಕರು, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಹಿರಿಯ ಮಧ್ಯಸ್ಥಿಕೆಗಾರರು)

    ನ್ಯಾಯದೇವತೆ: ಹೆಂಡತಿ ಒಪ್ಪಿದರೂ ಮರುಮದುವೆ ಸಲ್ಲ

    ನ್ಯಾಯದೇವತೆ; ಅಂತಾರಾಜ್ಯದ ಕೇಸ್ ಸುಪ್ರೀಂನಲ್ಲೇ ಆಗಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts