More

    ನ್ಯಾಯದೇವತೆ: ಹೆಂಡತಿ ಒಪ್ಪಿದರೂ ಮರುಮದುವೆ ಸಲ್ಲ

    ನನ್ನ ಅಕ್ಕನ ಮಗಳನ್ನೇ ಮದುವೆ ಆಗಿ ನಾಲ್ಕು ವರ್ಷವಾಗಿದೆ. ಮದುವೆ ಆದ ಮೇಲೆ ಎರಡು ಮೂರು ದಿನ ಮಾತ್ರ ನನ್ನ ಜತೆ ಇದ್ದಾಕೆ ಡಿಗ್ರಿ ಮುಗಿಸಿ ಬರುತ್ತೇನೆ ಎಂದು ತವರಿಗೆ ಹೋದವಳು ವಾಪಸಾಗಲಿಲ್ಲ. ನಾನೇ ಅವಳಿಗೆ ಓದಿಸಿದೆ ಕೂಡ. ಈಗ ಬಾ ಎಂದರೆ ಏನೇನೋ ಸಬೂಬು ಹೇಳುತ್ತಿದ್ದಾಳೆ. ನನ್ನ ಹೆಂಡತಿ ಹಾಗೂ ಅಕ್ಕ ಇಬ್ಬರೂ ‘ಬರಲು ಸಾಧ್ಯವೇ ಇಲ್ಲ. ಬೇರೆ ಮದುವೆ ಮಾಡಿಕೋ’ ಎನ್ನುತ್ತಿದ್ದಾರೆ. ಹಾಗೆಂದು ಬರೆದುಕೊಡು ಎಂದರೆ ಹೆಂಡತಿ ಒಪುತ್ತಿಲ್ಲ. ನನ್ನ ಹೆಂಡತಿಯಿಂದ ಒಪ್ಪಿಗೆ ಬರೆಯಿಸಿಕೊಳ್ಳದೆಯೇ ನಾನು ಇನ್ನೊಂದು ಮದುವೆ ಆಗಬಹುದೇ?

    ನ್ಯಾಯದೇವತೆ: ಹೆಂಡತಿ ಒಪ್ಪಿದರೂ ಮರುಮದುವೆ ಸಲ್ಲಪತ್ನಿ ಬದುಕಿರುವವರೆಗೆ , ಆಕೆಯಿಂದ ಕಾನೂನು ರೀತ್ಯಾ ವಿಚ್ಛೇದನ ಪಡೆಯದೆ ನೀವು ಮತ್ತೊಂದು ಮದುವೆ ಆಗುವಂತಿಲ್ಲ. ಹಾಗೆ ಮಾಡಿದರೆ ಅದು ಎರಡನೇ ಮದುವೆ ಎಂದಾಗಿ ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧವಾಗುತ್ತದೆ. ನಿಮ್ಮ ಹೆಂಡತಿ ಲಿಖಿತವಾಗಿ ಒಪ್ಪಿಗೆ ಕೊಟ್ಟರೂ ನೀವು ಆಕೆಯಿಂದ ವಿಚ್ಛೇದನ ಪಡೆಯದೇ ಮರುಮದುವೆ ಆಗಬೇಡಿ.

    ಮದುವೆಯಾಗಿ 10 ವರ್ಷ.ಒಬ್ಬಳು ಮಗಳಿದ್ದಾಳೆ. ನಮ್ಮ ಮದುವೆಯಾದ ಆರು ತಿಂಗಳಿಗೆ ಗಂಡನ ಕೆಲಸ ಹೋಯಿತು. ನಾನೇ ಸಂಸಾರ ತೂಗಿಸುತ್ತಿದ್ದೇನೆ. ನನ್ನ ಪತಿ ಕೆಲಸ ಹುಡುಕದೇ ಉಂಡಾಡಿಯಾಗಿ ಇದ್ದಾರೆ. ನನ್ನ ಸಂಬಳ ಎಲ್ಲ ಅವರಿಗೇ ಕೊಡಬೇಕು. ನನಗೆ ಕೆಲಸದಲ್ಲೂ ಸಹಾಯ ಮಾಡುವುದಿಲ್ಲ. ಈಗ ಕೇವಲ ನನ್ನ ದುಡಿಮೆಯಲ್ಲಿ ಮೂರು ಆಸ್ತಿ ಮಾಡಿದ್ದೇವೆ. ಎಲ್ಲ ಆಸ್ತಿಗಳನ್ನು ಇಬ್ಬರ ಹೆಸರಿಗೂ ನನ್ನ ಗಂಡ ಮಾಡಿಸಿದ್ದಾರೆ. ಅವರ ತಂದೆ ತಾಯಿ ನಮ್ಮ ಮನೆಯಲ್ಲೇ ಇದ್ದಾರೆ. ಅವರ ಬಂಧು ಬಳಗ ಬರುತ್ತಿರುತ್ತಾರೆ. ಎಲ್ಲ ಖರ್ಚೂ ನನ್ನ ಸಂಪಾದನೆಯಿಂದಲೇ. ನಾನು ಒಂದು ದಿನ ಆಟೋದಲ್ಲಿ ಬಂದರೆ ಜಗಳ ಆಡಿ ಬೈದಾಡಿ ಹೊಡೆಯಲು ಬರುತ್ತಾರೆ. ಆರು ತಿಂಗಳ ಹಿಂದೆ ನಮ್ಮ ತಂದೆ ತೀರಿಕೊಂಡರು. ತಾಯಿಗೆ ಯಾವ ಆಸರೆಯೂ ಇಲ್ಲ ಎಂದು ನನ್ನ ಜತೆಯೇ ಇರಲು ಬಂದಿದ್ದಾರೆ. ಅವರನ್ನು ಹೊರಹಾಕುವಂತೆ ಗಂಡ ಹೇಳುತ್ತಿದ್ದಾರೆ. ದಿನ ನಿತ್ಯ ಜಗಳ . ನನಗೆ ಪ್ರಾಣ ಕಳೆದುಕೊಳ್ಳಬೇಕು ಎನ್ನಿಸುತ್ತಿದೆ. ಕಾನೂನಿನಲ್ಲಿ ಏನಾದರೂ ಪರಿಹಾರ ಇದೆಯೆ?

    ನೀವು ಅನಾವಶ್ಯಕವಾಗಿ ಹೆದರುತ್ತಿದ್ದೀರಿ. ಪಾಪಿಗೆ ಹೆದರಬಾರದು. ಪಾಪ ಮಾಡಲು ಹೆದರಬೇಕು. ವಿದ್ಯಾವಂತರಾಗಿ ಕೈತುಂಬ ದುಡಿಯುತ್ತಿರುವ ನಿಮ್ಮಂತಹ ಹೆಣ್ಣು ಮಕ್ಕಳು ಗಂಡ ಮತ್ತು ಆತನ ಕಡೆಯವರು ದಬ್ಬಾಳಿಕೆ ಮಾಡಲು ಬಿಟ್ಟರೆ ಬೇರೆ ಹೆಣ್ಣು ಮಕ್ಕಳ ಕಥೆ ಏನಾಗಬೇಕು? ನಿಮ್ಮನ್ನು ಮದುವೆಯಾಗಿ ಉಪಕಾರ ಮಾಡಿದ್ದೇನೆ ಎನ್ನುವ ಮನೋಭಾವದಿಂದ ನಿಮ್ಮ ಪತಿ ಮತ್ತು ಆತನ ಮನೆಯವರಿಗೆ ಇದ್ದರೆ , ನೀವು ಅವರಿಗೆ ಸೋಲಬೇಕಾಗಿಲ್ಲ. ದೃಢಕಾಯದ ಗಂಡಸು ತನ್ನನ್ನು ತಾನು ಪೋಷಿಸಿಕೊಳ್ಳಲು ಶಕ್ತಿ ಇರುವುದಾದರೆ ಅವನನ್ನು ಹೆಂಡತಿ ಪೋಷಣೆ ಮಾಡಬೇಕಾಗಿಲ್ಲ. ಆತನ ತಂದೆ ತಾಯಿಯರನ್ನು ನೀವು ಸಾಕಬೇಕಾದ ಅವಶ್ಯಕತೆಯೂ ಇಲ್ಲ. ಕಬ್ಬಿನ ಜಲ್ಲೆಯಂತೆ ನಿಮ್ಮನ್ನು ಹಿಂಡಿ ಹಾಕುವ ಹಕ್ಕು ನಿಮ್ಮ ಪತಿಗೂ, ಆತನ ಮನೆಯವರಿಗೂ ಇಲ್ಲ . ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣ ದಾಖಲಿಸಿ. ನಿಮ್ಮ ಪತಿ ಮತ್ತು ಆತನ ತಂದೆ ತಾಯಿ ನಿಮ್ಮ ಮನೆಯಿಂದ ಹೊರ ಹೋಗಬೇಕೆನ್ನುವ ಆದೇಶವನ್ನು ಪಡೆಯಿರಿ.

    ಇನ್ನು ಆಸ್ತಿಯ ವಿಷಯ: ಆಸ್ತಿ ಯಾರ ಹೆಸರಿನಲ್ಲಿ ಇರುತ್ತದೋ ಅವರನ್ನು ಆಸ್ತಿಯ ಮಾಲೀಕರನ್ನಾಗಿ ಕಾನೂನು ಪರಿಗಣಿಸುತ್ತದೆ. ಬೇನಾಮಿ ಕಾಯ್ದೆ ಈಗ ಇಲ್ಲದಿರುವುದರಿಂದ ಆಸ್ತಿಗಳು ನಿಮ್ಮ ಇಬ್ಬರದ್ದೂ ಎಂದು ನ್ಯಾಯಾಲಯ ಪರಿಗಣಿಸಬಹುದು. ನೀವು ಕೂಡಲೇ ಆಸ್ತಿಗಳು ನಿಮ್ಮದೇ ಎಂದು ಹಕ್ಕು ಘೊಷಣೆಗೆ ಪ್ರಕರಣ ದಾಖಲಿಸಿ. ಪರ್ಯಾಯವಾಗಿ ನಿಮ್ಮನ್ನು ಅರ್ಧ ಆಸ್ತಿಯ ಮಾಲೀಕರು ಎಂದು ಘೊಷಿಸಿದರೆ ಹಣ ಪೂರ್ತಿ ನಿಮ್ಮಿಂದ ಹೋಗಿರುವುದರಿಂದ ಅರ್ಧ ಹಣವಾದರೂ ಬಡ್ಡಿ ಸಮೇತ ನಿಮಗೆ ವಾಪಸ್ ಬರಬೇಕೆಂದು ನೀವು ದಾವೆಯಲ್ಲಿ ಕೇಳಿ ನೋಡಬಹುದು. ಹೆಣ್ಣು ಮಕ್ಕಳು ಮದುವೆ ಆದ ಹೊಸತರಲ್ಲಿ ಹುಚ್ಚು ಉತ್ಸಾಹದಿಂದ ತಮ್ಮ ದುಡಿಮೆಯ ಹಣ ಹಾಕಿ ಗಂಡ ಹೆಂಡತಿ ಇಬ್ಬರ ಹೆಸರಲ್ಲೂ ಆಸ್ತಿ ಮಾಡುವ ಮುಂಚೆ ನೂರು ಬಾರಿ ಯೋಚಿಸಬೇಕು.

    ಅಜ್ಜನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಇಬ್ಬರು ಹಾಗೂ ಎರಡನೇ ಹೆಂಡತಿಗೆ ಮೂವರು ಗಂಡು ಮಕ್ಕಳು. ಈಗ ನಮ್ಮ ಅಜ್ಜ ಮತ್ತು ಅವರ ಇಬ್ಬರು ಹೆಂಡತಿಯರೂ ಬದುಕಿಲ್ಲ. ಆಸ್ತಿ ವಿಭಾಗ ಆಗಬೇಕಿದೆ. ಮೊದಲ ಹೆಂಡತಿಯ ಮಕ್ಕಳಿಗೆ ಅರ್ಧ ಭಾಗ ಎರಡನೇ ಹೆಂಡತಿಯ ಮಕ್ಕಳಿಗೆ ಇನ್ನೊಂದು ಭಾಗ ತೆಗೆಯಬೇಕು ಎನ್ನುತ್ತಿದ್ದಾರೆ. ಇದು ಕಾನೂನಿನ ಪ್ರಕಾರವೆ?

    ಹಿಂದೂ ಮೃತನ ಆಸ್ತಿ ಆತನ ಹೆಂಡತಿ ಮತ್ತು ಮಕ್ಕಳಿಗೆ ಸಮಪಾಲಾಗಿ ಹೋಗುತ್ತದೆ. ಮೊದಲ ಹೆಂಡತಿ ಬದುಕಿದ್ದರೆ, ಎರಡನೇ ಹೆಂಡತಿಗೆ ಪಾಲು ಬರುವುದಿಲ್ಲ. ಇಬ್ಬರು ಹೆಂಡತಿಯರೂ ತೀರಿಕೊಂಡಿದ್ದರೆ, ಆಗ ಎಲ್ಲ ಮಕ್ಕಳಿಗೂ ಸಮಪಾಲು ಬರುತ್ತದೆ. ಹೀಗಾಗಿ ನಿಮ್ಮ ಇಬ್ಬರು ಅಜ್ಜಿಯರೂ ತೀರಿಕೊಂಡ ನಂತರ ಅಜ್ಜ ತೀರಿಕೊಂಡಿದ್ದರೆ, ಅವರ ಆಸ್ತಿಯಲ್ಲಿ ಐದೂ ಮಕ್ಕಳಿಗೂ ಸಮಭಾಗ ಆಗುತ್ತದೆ. ಆದರೆ ನಿಮ್ಮ ಅಜ್ಜ ಮೊದಲು ಸತ್ತಿದ್ದರೆ, ಆಗ ನಿಮ್ಮ ಅಜ್ಜನ ಮೊದಲ ಹೆಂಡತಿಗೆ ಒಂದು ಭಾಗ, ನಿಮ್ಮ ಅಜ್ಜನ ಐದೂ ಮಕ್ಕಳಿಗೆ ತಲಾ ಒಂದು ಭಾಗ ಹೋಗುತ್ತದೆ. ನಿಮ್ಮ ಅಜ್ಜನ ಎರಡನೇ ಹೆಂಡತಿಗೆ ಭಾಗ ಹೋಗುವುದಿಲ್ಲ. ನಿಮ್ಮ ಅಜ್ಜನ ಮೊದಲ ಹೆಂಡತಿ ತೀರಿ ಕೊಂಡಾಗ ಆಕೆಯ ಆರನೇ ಒಂದು ಭಾಗ ಆಕೆಯ ಎರಡು ಮಕ್ಕಳಿಗೂ ಹೋಗುತ್ತದೆ. ನಿಮ್ಮ ಅಜ್ಜ ಮತ್ತು ಅಜ್ಜಿಯರು ಯಾವಾಗ ತೀರಿಕೊಂಡರು ಎನ್ನುವುದರ ಮೇಲೆ ಆಸ್ತಿಯಲ್ಲಿ ಬರುವ ಭಾಗ ಇಂತಿಷ್ಟೇ ಎಂದು ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts