More

    ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಸಿ.ಡಿ. ಕುಸಿತ!

    ಶಿರಹಟ್ಟಿ: ಪಟ್ಟಣ ಪಂಚಾಯಿತಿ ಆಡಳಿತ ವ್ಯಾಪ್ತಿಯ ವಾರ್ಡ್ ನಂ- 1ರ ಖಾನಾಪುರ ಗ್ರಾಮದ ಕುರುಬಗೇರಿ ಓಣಿಯ ರಸ್ತೆಯ ಚರಂಡಿಗೆ ನಿರ್ವಿುಸಿದ ಸಿ.ಡಿ. (ಅಡ್ಡ ಚರಂಡಿ) ಕುಸಿದಿದ್ದರಿಂದ ಪಾದಚಾರಿಗಳು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

    ನಗರೋತ್ಥಾನ ಯೋಜನೆಯಡಿ 35 ಲಕ್ಷ ರೂ. ವೆಚ್ಚದಲ್ಲಿ 3 ವರ್ಷಗಳ ಹಿಂದೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ವೇಳೆ ಕೊಳಚೆ ನೀರು ಹರಿದು ಹೋಗಲು ಚರಂಡಿ ನಿರ್ವಿುಸಲಾಗಿತ್ತು. ಚರಂಡಿ ಮೇಲೆ ಹಾಕಿದ್ದ ಕಾಂಕ್ರೀಟ್ ಕಿತ್ತು ಹೋಗಿದೆ. ವಾಹನ ಸವಾರರು ಸ್ವಲ್ಪ ಯಾಮಾರಿ ಈ ತೆಗ್ಗಿನಲ್ಲಿ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಮಧ್ಯೆ ಬಿದ್ದಿರುವ ತಗ್ಗು ರಾತ್ರಿ ವೇಳೆ ಕಾಣಿಸದ್ದರಿಂದ ಈಗಾಗಲೇ ಹಲವರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಸಿ.ಡಿ. ಕುಸಿದಿರುವುದನ್ನು ಬೇಗ ದುರಸ್ತಿ ಮಾಡಿಸುವಂತೆ ಸ್ಥಳೀಯರು ಪಪಂ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ. ಅಪಾಯ ಸಂಭವಿಸುವ ಮುನ್ನವೇ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಕುಸಿದಿರುವ ಸಿ.ಡಿ. ಯನ್ನು ಸರಿಪಡಿಸಬೇಕು ಎಂದು ಗ್ರಾಮದ ಯಲ್ಲಪ್ಪ ಹೆಗ್ಗಣ್ಣವರ ಆಗ್ರಹಿಸಿದ್ದಾರೆ.

    ಖಾನಾಪುರ ಗ್ರಾಮದಲ್ಲಿ ರಸ್ತೆಗೆ ನಿರ್ವಿುಸಿದ ಸಿ.ಡಿ. (ಅಡ್ಡ ಚರಂಡಿ) ಕುಸಿತದಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಉಂಟಾಗಿರುವ ತೊಂದರೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಅರಿತು ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

    | ಮಲ್ಲೇಶ ಎಂ.,

    ಶಿರಹಟ್ಟಿ ಪಪಂ ಮುಖ್ಯಾಧಿಕಾರಿ

    ಗ್ರಾಮದ ರಸ್ತೆಯ ಚರಂಡಿ ಮೇಲಿನ ಸಿ.ಡಿ. ಕುಸಿತದಿಂದ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ಅನಾಹುತ ಸಂಭವಿಸುವ ಮೊದಲು ದುರಸ್ತಿಗೊಳಿಸಲು ಪಪಂ ಕಿರಿಯ ಇಂಜಿನಿಯರ್ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ದುರಸ್ತಿ ಮಾಡಿಸುವುದಾಗಿ ತಿಳಿಸಿದ್ದಾರೆ.

    | ಚನ್ನಬಸವ್ವ ಕಲಾದಗಿ

    ಖಾನಾಪುರ ವಾರ್ಡ್ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts