More

    ಬದುಕಿಗೆ ಸಿಹಿಯಾದ ಕುಂಬಳ

    ಮುಳಬಾಗಿಲು: ಲಾಕ್‌ಡೌನ್‌ನಿಂದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ಕೃಷಿಕರು ನಷ್ಟದ ಹಾದಿ ಹಿಡಿದಿದ್ದರೆ ಇಲ್ಲೊಬ್ಬ ಮಹಿಳೆ ತೋಟದಲ್ಲಿ ಬೆಳೆದಿದ್ದ ಸಿಹಿಗುಂಬಳಕ್ಕೆ ಮಾರುಕಟ್ಟೆ ಸೃಷ್ಟಿಸಿಕೊಂಡು ಗಮನ ಸೆಳೆದಿದ್ದಾರೆ.

    ಗುಜ್ಜನಹಳ್ಳಿಯ ಮಹಿಳೆ ನಾರಾಯಣಮ್ಮ ಮುಡಿಯನೂರು ಗ್ರಾಪಂ ವ್ಯಾಪ್ತಿಯ ಜೆ.ವಮ್ಮಸಂದ್ರಲ್ಲಿರುವ 3.36 ಎಕರೆ ಜಮೀನಿನಲ್ಲಿ 2 ಎಕರೆಯಲ್ಲಿ ಸಿಹಿಗುಂಬಳ, 1 ಎಕರೆಯಲ್ಲಿ ಚೆಂಡು ಹೂ, 36 ಗುಂಟೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದ್ದರು. ಇದೇ ಸಮಯದಲ್ಲಿ ಲಾಕ್‌ಡೌನ್ ೋಷಣೆಯಾಗಿದ್ದರಿಂದ ಚೆಂಡು ಹೂ, ಕೊತ್ತಂಬರಿ ಮತ್ತು ಸಿಹಿಗುಂಬಳ ಕೇಳುವವರು ಇಲ್ಲವಾಯಿತು. ಬೆಳೆದಿರುವ ಸಿಹಿಗುಂಬಳ ಸಂಗ್ರಹಣೆಗೆ ಯೋಗ್ಯವಾಗಿದ್ದು ತೋಟದಲ್ಲಿ ಕೆ.ಜಿ. ಗೆ 2 ರೂ.ಗೆ ವ್ಯಾಪಾರಿಗಳು ಕೇಳಿದರೂ ನೀಡಲು ಮನಸ್ಸೊಪ್ಪದೆ ದಾಸ್ತಾನು ಮಾಡಿಕೊಂಡರು.

    ಮುಳಬಾಗಿಲು ತಾಪಂ ಕಚೇರಿ ಸಮೀಪವಿರುವ ಪುತ್ರ ಕೆ.ಪ್ರಭಾಕರಚಾರಿ ಅವರ ಖಾಸಗಿ ಹಾಲು ಡೇರಿ ಮಾರಾಟ ಕೇಂದ್ರವನ್ನು ಸಿಹಿ ಗುಂಬಳ ಮಾರಾಟಕ್ಕೆ ಉಪಯೋಗಿಸಿಕೊಂಡು ಕೆ.ಜಿ.ಗೆ 10 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಒಂದು ಕುಂಬಳಕಾಯಿ 1ರಿಂದ 30 ಕೆ.ಜಿ. ವರೆಗೂ ತೂಗುತ್ತಿದ್ದು ಎರಡು ಎಕರೆಯಲ್ಲಿ 10 ಟನ್ ಇಳುವರಿ ಪಡೆದಿದ್ದಾರೆ. ಇದರಲ್ಲಿ ರಿಯಾಯಿತಿಯಲ್ಲೂ ಮಾರಾಟ ಮಾಡುತ್ತಿದ್ದಾರೆ.

    ಪ್ರತಿದಿನ 5ರಿಂದ 6 ಕುಂಬಳಕಾಯಿ ಮಾರಾಟವಾಗುತ್ತಿದೆ, ಇದಲ್ಲದೆ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಬೇವಹಳ್ಳಿ, ನಾರಾಯಣಪುರ, ಕುರುಡುಮಲೆ ಕ್ರಾಸ್, ಕದರಿಪುರ ಬಳಿ ಇರುವ ತೆರೆದ ತರಕಾರಿ ಮಾರಾಟ ಸ್ಥಳಗಳಲ್ಲಿ ಸಿಹಿಗುಂಬಳವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

     

    2 ಎಕರೆ ಸಿಹಿಗುಂಬಳ ಬೆಳೆದಿದ್ದು ನೇರವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿ ಮುಳಬಾಗಿಲು ನಗರ ಸೇರಿ 5 ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದೇನೆ.
    ನಾರಾಯಣಮ್ಮ, ರೈತ ಮಹಿಳೆ, ಗುಜ್ಜನಹಳ್ಳಿ.

    ಚೆಂಡು ಹೂ, ಕೊತ್ತಂಬರಿ ಬೆಲೆಯಿಲ್ಲದೆ ತೋಟದಲ್ಲೇ ಕಿತ್ತು ಹಾಕಲಾಯಿತು. ಸಿಹಿಗುಂಬಳ ಮಾತ್ರ ಸಂಗ್ರಹಣೆ ಮಾಡಿ ಮಾರಾಟ ಮಾಡುತ್ತಿದ್ದೇವೆ. ಇನ್ನೂ 2-3 ತಿಂಗಳು ಮಾರಾಟಕ್ಕೆ ಯೋಗ್ಯವಾಗಿದ್ದು, ಗ್ರಾಹಕರು ಖರೀದಿಗೆ ಬರುತ್ತಿದ್ದಾರೆ.
    ಕೆ.ಪ್ರಭಾಕರಾಚಾರಿ, ಖಾಸಗಿ ಡೇರಿ ಮಾರಾಟ ಪ್ರತಿನಿಧಿ. ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts