More

  ಬಾಳೆಹೊನ್ನೂರು ರಂಭಾಪುರಿ ಪೀಠ: ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ತೆರೆ

  ಬಾಳೆಹೊನ್ನೂರು: ಮನುಷ್ಯನನ್ನು ಕಾಡುವ ಚಿಂತೆಗಳು ಹಲವಾರು. ಚಿತೆಯಿಂದ ನಿರ್ಜೀವ ವಸ್ತು ನಾಶಗೊಂಡರೆ, ಚಿಂತೆಯಿಂದ ಸಜೀವ ವಸ್ತು ನಾಶಗೊಳ್ಳುತ್ತವೆ. ಚಿಂತೆ ಚಿಂತನೆಗೊಂಡಾಗ ಬದುಕು ಸಮೃದ್ಧಗೊಳ್ಳಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

  ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
  ಕಲಿ ಕಾಲದಲ್ಲಿ ನ್ಯಾಯ, ಧರ್ಮ, ನೀತಿಗಳ ಅರಿವು ಇಲ್ಲದಂತಾಗಿ ಬದುಕು ಕವಲು ದಾರಿಯಲ್ಲಿ ಸಾಗುತ್ತಿವೆ. ಸಮಷ್ಠಿ ಪ್ರಜ್ಞೆಯಲ್ಲಿ ಎಲ್ಲರ ಹಿತ ಅಡಗಿದೆ. ಅರಿವಿನ ಕಣ್ಣು ತೆರೆಸಲು ಧರ್ಮ ಮತ್ತು ಗುರು ಅವಶ್ಯಕ. ಮಲಿನಗೊಂಡ ಮನಸ್ಸು ಪರಿಶುದ್ಧಗೊಂಡು ಸತ್ಯ, ನಿಷ್ಠೆ ಮತ್ತು ಧರ್ಮಾಸಕ್ತಿ ಬೆಳೆದು ಬರಬೇಕಾಗಿದೆ. ಇಂದಿನ ಎಳೆಯರೇ ಮುಂದಿನ ನಮ್ಮ ನಾಯಕರು. ಅವರನ್ನು ಸನ್ಮಾರ್ಗದಲ್ಲಿ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
  ಸತ್ಯ ಹರಿಶ್ಚಂದ್ರನ ಸತ್ಯ, ನಿಷ್ಠೆ ಮತ್ತು ಶ್ರವಣಕುಮಾರನ ಮಾತಾ-ಪಿತೃ ಮೇಲಿನ ಭಕ್ತಿಯಿಂದ ಮಹಾತ್ಮ ಗಾಂಧೀಜಿ ಅವರ ಜೀವನ ಸಂಪೂರ್ಣ ಬದಲಾವಣೆ ಆಗಿದ್ದನ್ನು ಕಾಣುತ್ತೇವೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿಯೂ ಬದಲಾವಣೆ ಆಗಬೇಕು. ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಉಜ್ವಲ ಭವಿಷ್ಯಕ್ಕೆ ಬೋಧಿಸಿದ ದಶ ಧರ್ಮ ಸೂತ್ರಗಳು ಎಲ್ಲರ ಬಾಳಿಗೆ ಬೆಳಕು ತೋರಬಲ್ಲವು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ನಿರ್ದಿಷ್ಟ ಗುರಿಯಿರಬೇಕು ಎಂದು ಹೇಳಿದರು.
  ಸುಳ್ಳದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಹಿತ್ಯ, ಸಂಸ್ಕೃತಿ ಸಂವರ್ಧಿಸಲಿ ಎಂದು ಸಾರಿದ ಶ್ರೀ ರಂಭಾಪುರಿ ಜಗದ್ಗುರುಗಳು ಸಾಹಿತ್ಯ ಪ್ರಿಯರು. ಕಳೆದ ವರ್ಷ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ನೀಡಿದ್ದರು. ಈ ವರ್ಷ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿ. ರಂಭಾಪುರಿ ಪೀಠ ಸರ್ವ ಸಮಾಜದ ಒಳಿತನ್ನು ಬಯಸುತ್ತ ಬಂದಿದೆ ಎಂದರು.
  ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಎ.ವರ್ಷಿಣಿ, ಸಹ ಅಧ್ಯಕ್ಷ ಎಫ್.ಎ.ಮನೋಜ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ಕಾರ್ಯಾಧ್ಯಕ್ಷ ಸಿ.ಮಹದೇವ, ಕಾರ್ಯದರ್ಶಿ ಸಿದ್ದೇಶ್, ರಾಜ್ಯ ಸಂಚಾಲಕ ಜಯರಾಮ್, ಜಿಲ್ಲಾ ಅಧ್ಯಕ್ಷ ಮಲ್ಲಿಗೆ ಸುಧೀರ್ ಹಾಜರಿದ್ದರು.
  ಹಾಸ್ಯದಲ್ಲಿ ನೈತಿಕ ಪ್ರಜ್ಞೆ ಕುರಿತು ಚಿತ್ರದುರ್ಗದ ಟಿ. ಜಗನ್ನಾಥ ಮಾತನಾಡಿದರು. ಗಂಜೀಗಟ್ಟಿ ಆರ್.ಕೃಷ್ಣಮೂರ್ತಿ ಪ್ರಾರ್ಥಿಸಿದರು. ಬಿ.ನೀ.ವಿಶ್ವನಾಥ ಸ್ವಾಗತಿಸಿದರು. ಮಳಲಿ ಸಂಸ್ಥಾನ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts