More

    ವಿದೇಶಗಳಲ್ಲಿರುವವರು ತವರು ನೆಲಕ್ಕೆ

    ಪಿ.ಬಿ. ಹರೀಶ್ ರೈ ಮಂಗಳೂರು
    ವಿದೇಶದಲ್ಲಿರುವ ಕರಾವಳಿಯ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರನ್ನು ಭಾರತಕ್ಕೆ ಕರೆ ತರುವ ಪ್ರಕ್ರಿಯೆ ಆರಂಭವಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂರ್ವಭಾವಿ ಸಿದ್ಧತೆ ಕೈಗೊಳ್ಳುವಂತೆ ದ.ಕ ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
    ಪ್ರಥಮ ಹಂತದಲ್ಲಿ ಕರ್ನಾಟಕಕ್ಕೆ ಮರಳುವ 6,100 ಮಂದಿ ಪೈಕಿ ಸುಮಾರು 4 ಸಾವಿರ ಮಂದಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.

    ವಿದೇಶದಿಂದ ಮರಳುವವರು ನೇರ ಮನೆ ಸೇರುವಂತಿಲ್ಲ. ವಿಮಾನ ನಿಲ್ದಾಣದಲ್ಲೇ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಸೋಂಕು ಲಕ್ಷಣ ಇರದಿದ್ದರೂ ಕೋವಿಡ್ ಕೇರ್ ಸೆಂಟರ್‌ನಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯ. ಈ ಅವಧಿಯಲ್ಲಿ ನೆಗಟಿವ್ ಕಂಡು ಬಂದರೆ ಮನೆಗೆ ಮರಳಬಹುದು. ಆದರೆ ಮತ್ತೆ 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಪಡಬೇಕು.

    ಮೂರು ಕೆಟಗರಿ: ವಿದೇಶದಿಂದ ಮರಳುವವರನ್ನು ಮೂರು ಕೆಟಗರಿ ಮಾಡುವಂತೆ ಸೂಚಿಸಲಾಗಿದೆ. ತಪಾಸಣೆ ಸಂದರ್ಭ ಕೋವಿಡ್ ಲಕ್ಷಣ ಕಂಡು ಬಂದವರನ್ನು ಎ-ಕೆಟಗರಿ ಎಂದು ವಿಂಗಡಿಸಿ ತಕ್ಷಣ ಗಂಟಲ ದ್ರವ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಪತ್ತೆಯಾದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಕೋವಿಡ್ ಲಕ್ಷಣ ಇಲ್ಲದೆ ಇತರ ಅಸ್ವಸ್ಥತೆಯಿಂದ ಬಳಲುವವರು ಹಾಗೂ 60 ವರ್ಷ ಮೀರಿದವರನ್ನು ಬಿ ಕೆಟಗರಿ ಎಂದು ವಿಂಗಡಿಸಿ ವೈದ್ಯಕೀಯ ನಿಗಾ ಸಹಿತ ಪ್ರತ್ಯೇಕ ಕ್ವಾರಂಟೈನ್‌ಗೆ ಒಳಪಡಿಸಬೇಕು. ಯಾವುದೇ ಅಸ್ವಸ್ಥತೆ ಇಲ್ಲದ 60 ವರ್ಷ ಕೆಳಗಿನವರನ್ನು ಸಿ-ಕೆಟಗರಿ ಎಂದು ವಿಂಗಡಿಸಿ ಕೋವಿಡ್ ಕೇರ್ ಸೆಂಟರ್(ಹೋಟೆಲ್/ಹಾಸ್ಟೆಲ್)ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.

    ಹಡಗುಗಳಲ್ಲೂ ಆಗಮನ: ಹಡಗುಗಳ 557 ಸಿಬ್ಬಂದಿ ಸಹಿತ ಹಲವರು ಹಡಗಿನ ಮೂಲಕ ಆಗಮಿಸುವ ಕಾರಣ ಮಂಗಳೂರು ಹಾಗೂ ಕಾರವಾರ ಬಂದರುಗಳಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಸಿದ್ಧತೆ ನಡೆಸಲು ದ.ಕ. ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ, ಕಾರವಾರ ಮತ್ತು ಮಂಗಳೂರು ಬಂದರು ಹೊರತುಪಡಿಸಿ ದೇಶದ ಇತರ ಬಂದರಿಗೆ ವಿದೇಶದಿಂದ ಆಗಮಿಸಿ ಬಳಿಕ ರಸ್ತೆ ಮೂಲಕ ಕರ್ನಾಟಕಕ್ಕೆ ಬರುವವರನ್ನೂ ಕೂಡ ಕ್ವಾರಂಟೈನ್‌ಗೆ ಒಳಪಡಿಸಲು ಸೂಚಿಸಲಾಗಿದೆ.

    ಎಲ್ಲಿಂದ ಎಷ್ಟು ಮಂದಿ?:
    ಕೆನಡಾ-328
    ಯುಎಸ್‌ಎ-927
    ಯುಎಇ-2575
    ಕತಾರ್-414
    ಸೌದಿ ಆರೇಬಿಯಾ-927

    ಮಂಗಳೂರು ವಿಮಾನ ನಿಲ್ದಾಣಕ್ಕೆ 4 ಸಾವಿರ ಮಂದಿ ಆಗಮಿಸಲಿದ್ದು, ಅಷ್ಟು ಮಂದಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು ಕಷ್ಟ. ಹಾಗಾಗಿ ಉಡುಪಿ, ಕೊಡಗು ಸಹಿತ ಇತರ ಜಿಲ್ಲೆಯವರನ್ನು ನೇರ ಅವರ ಜಿಲ್ಲೆಗೆ ಕಳುಹಿಸಿ, ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ದ.ಕ ಜಿಲ್ಲೆಯವರಿಗೆ ಮಂಗಳೂರಿನಲ್ಲಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಡನೆ ಸಮಾಲೋಚನೆ ನಡೆಸಿದ್ದು ,ಒಪ್ಪಿಗೆ ಸೂಚಿಸಿದ್ದಾರೆ.
    – ನಳಿನ್‌ಕುಮಾರ್ ಕಟೀಲ್, ಸಂಸದರು, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts