More

    ಎನ್‌ಆರ್‌ಐಗಳಿಂದ ಚುನಾವಣಾ ಬಹಿಷ್ಕಾರ!- ಹಲವು ವರ್ಷಗಳಿಂದ ಉಪಾಧ್ಯಕ್ಷ ಹುದ್ದೆ ಖಾಲಿ ಹಿನ್ನೆಲೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

    ಶ್ರವಣ್‌ಕುಮಾರ್ ನಾಳ ಮಂಗಳೂರು

    ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗಾಗಿ ವಿದೇಶದಲ್ಲಿ ನೆಲೆಸಿರುವ ಬಹುತೇಕ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಈ ಬಾರಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

    ಸರ್ಕಾರ ಈ ಹಿಂದೆ ಘೋಷಿಸಿದ್ದ ‘ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ’ಕ್ಕೆ ಉಪಾಧ್ಯಕ್ಷರ ನೇಮಕಾತಿ ಆಗಿಲ್ಲ. ಹೀಗಾಗಿ ಸಮಿತಿ ನಾಲ್ಕೈದು ವರ್ಷಗಳಿಂದ ನಿಷ್ಕ್ರಿಯವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷೃದಿಂದ ಈ ಸ್ಥಿತಿ ಬಂದಿದ್ದು, ವ್ಯಾಪಕ ಅಸಮಾಧಾನದಿಂದ ಅನಿವಾಸಿಗಳು ಚುನಾವಣಾ ಬಹಿಷ್ಕಾರ ನಿರ್ಧಾರಕ್ಕೆ ಬಂದಿದ್ದಾರೆ.

    ರಾಜ್ಯದ ಅನಿವಾಸಿಗಳ ಸಂಖ್ಯೆ 13 ಲಕ್ಷ!: ಉದ್ಯೋಗ ಹಾಗೂ ಶಿಕ್ಷಣ ಪಡೆಯುವ ಸಲುವಾಗಿ 3.21 ಕೋಟಿ ಅನಿವಾಸಿ ಭಾರತೀಯರು 185 ದೇಶಗಳಲ್ಲಿ ನೆಲೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲೇ ಕರಾವಳಿಯ 5.71 ಲಕ್ಷ ಮಂದಿ ಇದ್ದಾರೆ. ಕರ್ನಾಟಕದ 13.5 ಲಕ್ಷಕ್ಕೂ ಅಧಿಕ ಮಂದಿ ಬೇರೆ ದೇಶಗಳಲ್ಲಿದ್ದಾರೆ. ಬಹುತೇಕ ಎಲ್ಲ ದೇಶಗಳ ಪ್ರಮುಖ ಎನ್‌ಆರ್‌ಐ ಸಂಸ್ಥೆಗಳು ಉಪಾಧ್ಯಕ್ಷರ ನೇಮಕ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಇವೆ. ಆದರೂ, ಅವರ ಬೇಡಿಕೆಯನ್ನು ಸರ್ಕಾರ ಈವರೆಗೆ ಪರಿಗಣಿಸಿಲ್ಲ.

    ಭರವಸೆ ಇಲ್ಲ: ಎರಡು ವರ್ಷಗಳ ಹಿಂದೆ ದುಬೈ ಎನ್‌ಆರ್‌ಐ ಘಟಕ ಈ ಬಗ್ಗೆ ಟ್ವೀಟ್ ಅಭಿಯಾನ ಮಾಡಿತ್ತು. ವಿಶ್ವದ ಮೂಲೆಮೂಲೆಗಳಿಂದ ಸರಣಿ ಟ್ವೀಟ್, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ, ಕೇಂದ್ರ, ರಾಜ್ಯ ಸಚಿವ ಸಂಪುಟ ಸದಸ್ಯರ ಮೇಲೆ ಒತ್ತಡ ಸಹಿತ ಎಲ್ಲ ಪ್ರಯತ್ನಗಳ ಬಳಿಕವೂ ಸಮಿತಿಯನ್ನು ಸಕ್ರಿಯಗೊಳಿಸಲು ಸಾಧ್ಯವಾಗಿಲ್ಲ. ಸದ್ಯ ಬೇಡಿಕೆ ಈಡೇರುವ ಭರವಸೆಯನ್ನೂ ಎನ್‌ಆರ್‌ಐಗಳು ಕೈಬಿಟ್ಟಿದ್ದಾರೆ.

    ವಿದೇಶಗಳಲ್ಲಿರುವ ಎನ್‌ಆರ್‌ಐಗಳು ಬೆಂಗಳೂರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ತಮ್ಮ ಊರಿಗೆ ಆಗಮಿಸಲು ಕನಿಷ್ಠ 50 ಸಾವಿರ ರೂ. ವ್ಯಯಿಸಬೇಕು. ಬಿಜೆಪಿ ಸರ್ಕಾರ ಆರಂಭಿಸಿದ ಒಂದು ವೇದಿಕೆ ಅದೇ ಪಕ್ಷದ ಸರ್ಕಾರದ ಅವಧಿಯಲ್ಲಿ ನಿಷ್ಕ್ರಿಯವಾಗಿದೆ. ಎನ್‌ಆರ್‌ಐಗಳ ಹಿತಾಸಕ್ತಿಗಳನ್ನು ಕಡೆಗಣಿಸಿರುವುದರಿಂದ ನಾವು ಯಾಕೆ ದೂರ ಪ್ರಯಾಣದ ವೆಚ್ಚ ತೆತ್ತು ಮತದಾನ ಮಾಡಬೇಕು? ಎಂಬುದು ಬಹುತೇಕ ಎನ್‌ಆರ್‌ಐಗಳ ಪ್ರಶ್ನೆ.

    ಏನಿದು ಎನ್‌ಆರ್‌ಐ ಸಮಿತಿ?

    ಬಿ.ಎಸ್.ಯಡಿಯೂರಪ್ಪ 2008-09ನೇ ಸಾಲಿನ ಬಜೆಟ್ ಭಾಷಣದಲ್ಲಿ ಅನಿವಾಸಿ ಕನ್ನಡಿಗರ ವಿಶೇಷ ಘಟಕ (ಎನ್‌ಆರ್‌ಐ ಸೆಲ್) ಸ್ಥಾಪನೆ ಮಾಡುವುದಾಗಿ ತಿಳಿಸಿ, ಈ ಘಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವುದಾಗಿ ಘೋಷಿಸಿದ್ದರು. ನಂತರ ಇದರ ವ್ಯಾಪ್ತಿಯನ್ನು ಹೆಚ್ಚಿಸುವ ಹಾಗೂ ಆಡಳಿತ ನಿರ್ವಹಣೆಯ ದೃಷ್ಟಿಯಿಂದ ‘ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ’ ಎಂದು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಈ ಸಮಿತಿಯನ್ನು ಮುಖ್ಯಮಂತ್ರಿಯವರ ನೇರ ನಿಯಂತ್ರಣಕ್ಕೆ ಒಳಪಡಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ತೀರ್ಮಾನಿಸಿ ಆದೇಶಿಸಲಾಗಿತ್ತು. ಕರಾವಳಿ ಜಿಲ್ಲೆಯ ಕ್ಯಾ.ಗಣೇಶ್ ಕಾರ್ಣಿಕ್ ವೇದಿಕೆಯ ಪ್ರಥಮ ಉಪಾಧ್ಯಕ್ಷರಾಗಿದ್ದರು. ಬಳಿಕ ಆರತಿ ಕೃಷ್ಣ, ವಿ.ಸಿ.ಪ್ರಕಾಶ್ ಉಪಾಧ್ಯಕ್ಷರಾದರು. ವೆಬ್‌ಸೈಟ್‌ನಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ಸಮಿತಿಗೆ ಅಧ್ಯಕ್ಷರು ಎಂಬ ಉಲ್ಲೇಖವಿದೆಯಾದರೂ, 4-5 ವರ್ಷಗಳಿಂದ ಉಪಾಧ್ಯಕ್ಷರಿಲ್ಲದೆ ಯಾವುದೇ ಚಟುವಟಿಕೆ ನಡೆದಿಲ್ಲ. ಸರ್ಕಾರ ವಿವಿಧ ನಿಗಮ, ಮಂಡಳಿಗಳಿಗೆ ನೇಮಕ ಮಾಡುತ್ತಿದ್ದರೂ, ಎನ್‌ಆರ್‌ಐ ಫೋರಂಗೆ ಈವರೆಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದು ಅಸಮಾಧಾನಕ್ಕೆ ಕಾರಣ.


    ಅನಿವಾಸಿ ಭಾರತೀಯರಿಂದ ಹಲವು ಬಾರಿ ಮನವಿ, ಜ್ಞಾಪಕ ಪತ್ರಗಳು, ಟ್ವೀಟ್ ಅಭಿಯಾನ ಹೊರತಾಗಿಯೂ, ರಾಜ್ಯ ಸರ್ಕಾರ ಎನ್‌ಆರ್‌ಐ ವೇದಿಕೆಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಹೀಗಿರುವಾಗ ಅನಿವಾಸಿ ಭಾರತೀಯರು ಮತ್ತು ಅವರ ಕುಟುಂಬ ಭಾರತಕ್ಕೆ ಆಗಮಿಸಿ ಏಕೆ ಮತ ಚಲಾಯಿಸಬೇಕು?

    ಶಿವ ಕುಮಾರ್ ಬಂಟ್ವಾಳ, ಬ್ರಿಟನ್‌ನಲ್ಲಿರುವ ಎನ್‌ಆರ್‌ಐ

    —————————-

    ಬಿಜೆಪಿ ಸರ್ಕಾರ ಆರಂಭಿಸಿದ ಒಂದು ವೇದಿಕೆ ಅದೇ ಪಕ್ಷದ ಸರ್ಕಾರದ ಅವಧಿಯಲ್ಲಿ ನಿಷ್ಕ್ರಿಯವಾಗಿದೆ. ಲೋಕಸಭಾ ಚುನಾವಣೆಗೆ ನಾವು ಮೋದಿಗಾಗಿ ಬರುತ್ತೇವೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದೇವೆ.

    ಪ್ರಥಮ್ ಶೆಟ್ಟಿ, ದುಬೈಯಲ್ಲಿರುವ ಅನಿವಾಸಿ ಭಾರತೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts