More

    ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ನೋಟಿಸ್

    ಹುಬ್ಬಳ್ಳಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಎರಡನೇ ದಿನ ಪೂರೈಸಿದ್ದು, ಬೆರಳೆಣಿಕೆಯಷ್ಟು ಚಾಲಕ-ನಿರ್ವಾಹಕರು ಮಾತ್ರ ಕರ್ತವ್ಯಕ್ಕೆ ಹಾಜರಾದರು. ಇದರಿಂದಾಗಿ, ತಾಂತ್ರಿಕವಾಗಿ ಮುಷ್ಕರವು ಯಶಸ್ವಿಯಾಗಿ ಸಾರ್ವಜನಿಕರ ಪರದಾಟ ಮುಂದುವರಿದಿದೆ. ಇದೇ ವೇಳೆ, ಖಾಸಗಿ ಬಸ್ ಮತ್ತು ಇತರ ವಾಹನಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಸರ್ಕಾರದ ಪ್ರಯತ್ನ ಹೆಚ್ಚು ಚುರುಕುಗೊಂಡಿದೆ.

    ಈ ಮಧ್ಯೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಬಿಸಿ ಮುಟ್ಟಿಸಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮುಷ್ಕರ ಕೈ ಬಿಟ್ಟು ಕೂಡಲೆ ಕೆಲಸಕ್ಕೆ ಬರುವಂತೆ ಸಿಬ್ಬಂದಿಗೆ ನಿರಂತರವಾಗಿ ಮನವೊಲಿಕೆ, ತಿಳಿವಳಿಕೆ, ಎಚ್ಚರಿಕೆಯ ಸೂಚನೆಗಳ ಮೂಲಕ ಹಲವಾರು ಅವಕಾಶಗಳನ್ನು ನೀಡಲಾಗಿದೆ. ಆದಾಗ್ಯೂ ಬಹುತೇಕ ನೌಕರರು, ಅದರಲ್ಲೂ ಮುಖ್ಯವಾಗಿ ಚಾಲಕ-ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ ಕರ್ತವ್ಯಕ್ಕೆ ಬರುತ್ತಿಲ್ಲ.

    ಸಂಸ್ಥೆಯ ಆದೇಶವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ತರಬೇತಿ ಸಿಬ್ಬಂದಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ನೋಟಿಸ್ ಜಾರಿ ಮಾಡಲಾಗಿದೆ. ದಿನಪತ್ರಿಕೆಗಳ ಮೂಲಕವೂ ತಿಳಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರು ತಿಳಿಸಿದ್ದಾರೆ.

    ಮುಂದುವರಿದ ಸೇವೆ

    ಇಲ್ಲಿಯ ಹಳೇ ಬಸ್ ನಿಲ್ದಾಣದಲ್ಲಿ ವಿಆರ್​ಎಲ್, ಬೇಂದ್ರೆ, ಗಣೇಶ, ಚಾಲುಕ್ಯ ಮತ್ತಿತರ ಬಸ್​ಗಳು, ಮಿನಿ ಬಸ್​ಗಳು, ಮ್ಯಾಕ್ಸಿ ಕ್ಯಾಬ್, ಕ್ರೂಸರ್ ಸೇರಿ ಹಲವು ವಾಹನಗಳು ಪ್ರಯಾಣಿಕರ ಸೇವೆಗಾಗಿ ಸಜ್ಜಾಗಿದ್ದವು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಖಾಸಗಿ ಬಸ್​ಗಳು ಸೇವೆ ನೀಡಿದರೆ, ಪ್ರಮುಖ ಊರುಗಳಿಗೆ ಉಳಿದ ವಾಹನಗಳು ಸೇವೆ ಒದಗಿಸಿದವು.

    ಮುಷ್ಕರ ಮುಂದುವರಿದಿರುವುದು ತಿಳಿದಿರುವುದರಿಂದ ಗುರುವಾರ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಗ್ರಾಮಾಂತರದಿಂದ ನಗರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳು ಸೇರಿದಂತೆ ಪಾಸ್ ಹೊಂದಿರುವವರು, ಇತರರು; ನಗರ ಸಾರಿಗೆ ಬಸ್​ನಲ್ಲಿ ಪ್ರಯಾಣಿಸುವವರು ಸಕಾಲದಲ್ಲಿ ಗಮ್ಯ ತಲುಪಲು ಪರದಾಡಬೇಕಾಯಿತು.

    12 ಬಸ್ ರಸ್ತೆಗಿಳಿಸಿದರು

    ಸಾರಿಗೆ ಅಧಿಕಾರಿಗಳು ಚಾಲಕ-ನಿರ್ವಾಹಕರ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದು, ಗುರುವಾರ ಸಂಜೆಯವರೆಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 12 ಬಸ್​ಗಳನ್ನು ರಸ್ತೆಗಿಳಿಸಲಾಗಿದೆ.

    ಅಲ್ಲದೆ, ಹುಬ್ಬಳ್ಳಿಯಿಂದ ಗದಗಕ್ಕೆ 7, ಧಾರವಾಡಕ್ಕೆ 2 ಮತ್ತು ಶಿರಸಿ, ಬೆಳಗಾವಿ ಹಾಗೂ ಕಾರವಾರಕ್ಕೆ ತಲಾ ಒಂದೊಂದು ಬಸ್ ಅನ್ನು ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

    ಬುಧವಾರ ಕೆಲ ಬಸ್​ಗಳ ಕಾರ್ಯಾಚರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗುರುವಾರ ಬಹಳಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಬರುತ್ತಾರೆಂಬ ನಿರೀಕ್ಷೆ ಹುಸಿಯಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts