More

    ರುದ್ರಪ್ಪ ಲಮಾಣಿ ಸೇರಿ 13 ಜನರಿಗೆ ನೋಟಿಸ್

    ಹಾವೇರಿ: ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ವಿುಸಿಕೊಂಡಿದ್ದು, ಒಂದು ವಾರದೊಳಗೆ ಕಟ್ಟಡ ತೆರವುಗೊಳಿಸಬೇಕು. ತಪ್ಪಿದಲ್ಲಿ ಕಟ್ಟಡ ತೆರವುಗೊಳಿಸಲಾಗುವುದು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿ 13 ಜನರಿಗೆ ಹಾವೇರಿ ನಗರಸಭೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.

    ‘ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ನಗರ, ಮಂಜುನಾಥ ನಗರ, ಇಜಾರಿಲಕಮಾಪುರದಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ 1.09 ಗುಂಟೆ ಅಳತೆಯ ರಾಜಕಾಲುವೆ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ವಿುಸಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸಾರ್ವನಿಕರ ಮನೆಗಳಿಗೆ ನೀರು ನುಗ್ಗುತ್ತಿದೆ. ಕಾರಣ ನೋಟಿಸ್ ಮುಟ್ಟಿದ 7 ದಿನದೊಳಗೆ, ಅತಿಕ್ರಮಣ ಮಾಡಿ ನಿರ್ವಿುಸಿರುವ ಕಟ್ಟಡವನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಪುರಸಭೆ ಅಧಿನಿಯಮ 1964ರ ಪ್ರಕಾರ ತೆರವುಗೊಳಿಸಲಾಗುವುದು. ಆಸ್ತಿ-ಪಾಸ್ತಿಗೆ ಯಾವುದೇ ರೀತಿ ಹಾನಿ ಉಂಟಾದಲ್ಲಿ ತಾವೇ ಜವಾಬ್ದಾರರಾಗುತ್ತೀರಿ. ತೆರವುಗೊಳಿಸಿದ ವೆಚ್ಚವನ್ನು ತಮ್ಮಿಂದಲೇ ವಸೂಲಿ ಮಾಡಲಾಗುವುದು. ಒಂದು ವೇಳೆ ನೀವು ವೆಚ್ಚವನ್ನು ಭರಸದಿದ್ದಲ್ಲಿ ನಿಮ್ಮ ಆಸ್ತಿ ಮೇಲೆ ಬೋಜಾ ದಾಖಲಿಸಲಾಗುವುದು’ ಎಂದು ಅ. 27ರಂದು ನೀಡಿರುವ ನೋಟಿಸ್​ನಲ್ಲಿ ಎಚ್ಚರಿಸಲಾಗಿದೆ.

    ಈ ಬಡಾವಣೆಗಳಲ್ಲಿ ಮನೆ ನಿರ್ವಿುಸಿಕೊಳ್ಳಲು ನಗರಸಭೆಯೇ ಪರವಾನಗಿ ಕೊಟ್ಟಿದೆ. ಅಲ್ಲದೆ, ಮನೆ ಪೂರ್ಣಗೊಂಡಿರುವ ಬಗ್ಗೆಯೂ ದೃಢೀಕರಣ ಕೊಟ್ಟಿದೆ. ಆದರೀಗ ಏಕಾಏಕಿ ನೋಟಿಸ್ ಕೊಟ್ಟಿರುವ ನಗರಸಭೆ ಪೌರಾಯುಕ್ತರ ನಡೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ರಾಜಕೀಯ ದ್ವೇಷದ ದೂರು ಆರೋಪ: ನೋಟಿಸ್ ಕುರಿತು ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಇತರರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ದೂರು ಕೊಟ್ಟಿದ್ದು, ನಿಯಮಾನುಸಾರ ನಿವೇಶನ ಖರೀದಿಸಿ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಮನೆ ಕಟ್ಟಿಕೊಳ್ಳಲಾಗಿದೆ. ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ನೋಟಿಸ್ ಕೊಟ್ಟಿದ್ದಾರೆ. ಇದನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಇವರ ಮನವಿಯನ್ನು ಪುರಸ್ಕರಿಸಿರುವ ಪ್ರಾದೇಶಿಕ ಆಯುಕ್ತರು, ಇಜಾರಿಲಕಮಾಪುರ ಗ್ರಾಮದ ಸರ್ವೆ ನಂ. 27, ಪ್ಲಾಟ್ ನಂ. 67 ಹಾಗೂ 50ಕ್ಕೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತರು ನೀಡಿರುವ ನೋಟಿಸ್​ಗೆ ಮುಂದಿನ ಆದೇಶ ಆಗುವವರೆಗೂ ತಡೆಯಾಜ್ಞೆ ನೀಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿ. 12ಕ್ಕೆ ನಿಗದಿಪಡಿಸಿದ್ದಾರೆ.

    1949ರಲ್ಲಿಯೇ ನಾನು ಮನೆ ಕಟ್ಟಿಕೊಂಡಿರುವ ಪ್ರದೇಶ ಬಿನ್​ಶೇತ್ಕಿಯಾಗಿದ್ದು, ಅದನ್ನು ಇತ್ತೀಚೆಗೆ ಖರೀದಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳಿವೆ. ನಗರಸಭೆಯಿಂದ ಪರವಾನಗಿ ಪಡೆದುಕೊಂಡೇ ಮನೆ ನಿರ್ವಿುಸಿಕೊಂಡಿದ್ದೇನೆ. ಅವರೇ ಸಿಸಿಯನ್ನೂ ಕೊಟ್ಟಿದ್ದಾರೆ. ಆಗ ಇಲ್ಲಿ ರಾಜಕಾಲುವೆ ಇದೆ ಎಂಬುದು ನಗರಸಭೆಯವರಿಗೆ ಗೊತ್ತಿರಲಿಲ್ಲವೇ? ನನ್ನ ಮನೆಯಿಂದ ಊರಿಗೆ ತೊಂದರೆಯಾಗುತ್ತದೆ ಎಂದಾದರೆ ಮನೆ ಕೆಡವಲಿ. ರಾಜಕೀಯ ದುರದ್ದೇಶದಿಂದ ನೋಟಿಸ್ ಕೊಟ್ಟಿರುವುದು ಸರಿಯಲ್ಲ. ಆಯುಕ್ತರು ಈಗಾಗಲೇ ತಡೆಯಾಜ್ಞೆಯನ್ನು ನೀಡಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ.

    | ರುದ್ರಪ್ಪ ಲಮಾಣಿ, ಮಾಜಿ ಸಚಿವರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts