More

    ಬೆಲ್ಲವಷ್ಟೇ ಅಲ್ಲ ಬೇವು ಕೂಡ ನಮಗೆ ಸವಿಯಲ್ಲವೇ?!

    ಚೈತ್ರ ಮಾಸ ಆರಂಭವಾಯಿತೆಂದರೆ ಗಿಡ-ಮರ, ಬಳ್ಳಿಗಳು ಕೊನರೊಡೆದು ನಳನಳಿಸಲು ಆರಂಭಿಸುತ್ತವೆ. ಹಳೆಯ ಎಲೆಗಳನ್ನು ಕಳಚಿ ಹೊಸ ಚಿಗುರಿನೊಂದಿಗೆ ಶೋಭಾಯಮಾನವಾಗಿ ಕಾಣಲು ಆರಂಭಿಸುತ್ತವೆ. ಹಾಗಾಗಿ ಯುಗಾದಿ ಎಂಬುದು ಹಿಂದೂ ಸಂಪ್ರದಾಯದ ವರ್ಷದ ಆರಂಭ, ಪ್ರಾಕೃತಿಕವಾಗಿ ಹೊಸತನವನ್ನು ಪಡೆಯುವ ಆರಂಭದ ದಿನ.

    ಯುಗ ಯುಗಾದಿ ಕಳೆದರು
    ಯುಗಾದಿ ಮರಳಿ ಬರುತಿದೆ
    ಹೊಸ ವರುಷಕೆ ಹೊಸ ಹರುಷವ
    ಹೊಸತು ಹೊಸತು ತರುತಿದೆ…

    ಬೇಂದ್ರೆಯವರ ಯುಗಾದಿ ಕವಿತೆಯ ಈ ಸಾಲುಗಳು ಪ್ರತಿವರ್ಷ ಈ ಸಂದರ್ಭದಲ್ಲಿ ನಮಗೆ ನೆನಪಿಗೆ ಬರುತ್ತವೆ. ಅಂದರೆ ಯುಗಾದಿ ಈ ನೆಲದ ಸಂಭ್ರಮದ ಹಬ್ಬ. ಯುಗ ಎಂಬುದು ಕಾಲವನ್ನು ಅಳೆಯುವ ಒಂದು ಮಾಪನ. ಆರಂಭದಲ್ಲಿ ಎಷ್ಟೋ ಸಹಸ್ರ ವರ್ಷಗಳಿಗೆ ಒಂದು ಯುಗ ಎಂದು ಭಾವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾಲಮಾಪನದ ವಿಧಾನಗಳು ಬದಲಾಗಿವೆ. ವರ್ಷ ಎಂಬುದು ಇತ್ತೀಚಿನ ಕಾಲಮಾಪನದ ಒಂದು ನಿಶ್ಚಿತ ಪದರೂಪ. ಈ ಅರ್ಥದಲ್ಲಿ ಯುಗಾದಿ ಎಂಬುದು ವರ್ಷದ ಆರಂಭ ಎಂಬ ಅರ್ಥವನ್ನು ಕೊಡುತ್ತಿದೆ.

    ಯುಗಾದಿಯ ಆಚರಣೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಕಾಲಮಾನಗಳಲ್ಲಿ ನಡೆಯುತ್ತದೆ. ವಿಂಧ್ಯಾ ಪರ್ವತದ ಉತ್ತರ ದಿಕ್ಕಿನ ಪ್ರದೇಶಗಳಲ್ಲಿ ‘ಬಾರ್ಹಸ್ಪತ್ಯಮಾನ’ ಪಂಚಾಂಗದ ಅಡಿಯಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾಗದವರು ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗವನ್ನು ಅನುಸರಿಸಿ ಯುಗಾದಿ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಸೌರಮಾನದ ಯುಗಾದಿಯನ್ನು ಆಚರಿಸಿದರೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತೇವೆ. ಅಂದರೆ ಚೈತ್ರ ಮಾಸದ ಮೊದಲ ದಿನದಿಂದ ಶುಕ್ಲ ಚಂದ್ರನ ಆಗಮನವಾಗುತ್ತದೆ. ಪ್ರಕಾಶಮಾನವಾದ ಚಂದ್ರನ ಮೊದಲ ದಿನವನ್ನು ಚಾಂದ್ರಮಾನ ಯುಗಾದಿ ಎಂದು ಆಚರಿಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದೇವೆ. ಈ ವರ್ಷ ಚೈತ್ರ ಮಾಸದ ಮೊದಲ ತಿಥಿ ಏಪ್ರಿಲ್ 8ರ ಪೂರ್ವಾಹ್ನ ಆರಂಭವಾದರೆ ಏಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಪೂರ್ಣಗೊಳ್ಳುತ್ತದೆ. ಆದ್ದರಿಂದ ಏಪ್ರಿಲ್ 9ರ ಬೆಳಗ್ಗೆ ಚಾಂದ್ರಮಾನ ಯುಗಾದಿಯ ಆಚರಣೆ ನಿಗದಿಯಾಗಿದೆ.

    ಯುಗಾದಿಯಂದು ಎಲ್ಲ ಹಿಂದೂಗಳು ಮನೆಯನ್ನು ಶುದ್ಧಗೊಳಿಸಿ ಮಾವು-ಬೇವುಗಳ ಎಲೆಗಳಿಂದ ಮನೆಗಳಿಗೆ ತೋರಣ ಕಟ್ಟಿ, ಮುಂಜಾನೆಯೇ ಎಣ್ಣೆ ಮಜ್ಜನ ಮಾಡಿ, ಬೇವು- ಬೆಲ್ಲ ಸವಿದು, ದೇವಸ್ಥಾನಗಳಿಗೆ ಭೇಟಿ ನೀಡಿ, ಒಬ್ಬಟ್ಟು ಮುಂತಾದ ಸಿಹಿ ಅಡುಗೆಗಳನ್ನು ಸವಿದು ಸಂಭ್ರಮಿಸುತ್ತಾರೆ. ಈ ದಿನದಂದು ಮಧ್ಯಾಹ್ನದ ನಂತರ ಹೊಸ ಪಂಚಾಂಗವನ್ನು ಪೂಜಿಸಿ, ಓದಿ ಅಥವಾ ಓದಿಸಿ ಇಡೀ ವರ್ಷದ ಫಲಾಫಲಗಳನ್ನು ತಿಳಿದುಕೊಳ್ಳುತ್ತಾರೆ.

    ಗ್ರಾಮೀಣ ಪ್ರದೇಶಗಳಲ್ಲಿನ ಯುಗಾದಿ ಆಚರಣೆ ಇನ್ನೂ ಹೆಚ್ಚಿನ ಸಂಭ್ರಮದಿಂದ ಕೂಡಿರುತ್ತದೆ. ಅವರು ತಮ್ಮೂರಿನ ಗುಡಿಯನ್ನು ತಾವೇ ಮುಂದೆ ನಿಂತು ಶುದ್ಧಿಗೊಳಿಸಿ; ಕಲಶ, ಗೋಪುರ, ಪ್ರತಿಮೆಗಳನ್ನು ತಿಕ್ಕಿ ಬೆಳಗಿ, ಗುಡಿಗೆ ಸುಣ್ಣ- ಬಣ್ಣ ಬಳಿದು ಪೂಜೆಗೆ ಅನುವು ಮಾಡುತ್ತಾರೆ. ಗೋವುಗಳ ಮೈ ತೊಳೆದು ಅಲಂಕರಿಸಿ ಸಂಭ್ರಮಿಸುತ್ತಾರೆ.

    ಬೆಲ್ಲವಷ್ಟೇ ಅಲ್ಲ ಬೇವು ಕೂಡ ನಮಗೆ ಸವಿಯಲ್ಲವೇ?!

    ಪ್ರತಿ ಊರಿನಲ್ಲಿಯೂ ಅಂದು ಇಳಿಹೊತ್ತಿನಲ್ಲಿ ಹೊನ್ನಾರು ಕಟ್ಟುವ ಪದ್ಧತಿ ರೂಢಿಯಲ್ಲಿದೆ. ಹೊನ್ನಾರು ಎಂಬುದು ಉಳುಮೆಯ ಮೊದಲ ದಿನ. ಆರಂಭದ ದಿನ, ಅದು ಹೊನ್ನಿಗೆ ಸಮನಾದದ್ದು. ಆರಂಭಕ್ಕೆ ಕಟ್ಟುವ ಎತ್ತು, ನೇಗಿಲು- ನೊಗಗಳನ್ನು ಅಲಂಕರಿಸಿ ಮಂಗಳವಾದ್ಯದೊಂದಿಗೆ ಪ್ರತಿ ಕುಟುಂಬದವರು ಆರು ಹೂಡುತ್ತಾರೆ. ಹೊಸ ಪಂಚಾಂಗದ ಪ್ರಕಾರ ಹೊನ್ನಾರಿನ ನೇತೃತ್ವ ಆ ಊರಿನ ಯಾವ ರೈತನ ಹೆಸರಿಗೆ ಬಂದಿದೆ ಎಂಬುದನ್ನು ನಿರ್ಣಯಿಸುತ್ತಾರೆ. ಅಂತಹ ಉತ್ಕೃಷ್ಟ ಹೆಸರುಬಲದ ರೈತ ಹೊನ್ನಾರಿನ ನೇತೃತ್ವ ವಹಿಸುತ್ತಾನೆ. ಪೂರ್ವಾಭಿಮುಖವಾಗಿ ಪ್ರಾರಂಭವಾಗುವ ಈ ಹೊನ್ನಾರು ಆ ಊರಿನ ಎಲ್ಲ ಮನೆಗಳನ್ನು ಸುತ್ತುವರಿದು ಮೂರು ಸುತ್ತು ಬಂದು ಮುಗಿಸುತ್ತಾರೆ. ಮಂಗಳವಾದ್ಯದೊಂದಿಗೆ ನಡೆಯುವ ಈ ಆಚರಣೆಯನ್ನು ಹಿರಿಯರಿಂದ ಮಕ್ಕಳವರೆಗೆ ಆನಂದಿಸುತ್ತಾರೆ.

    ಕನ್ನಡದ ಕವಿಗಳಿಂದ ವರ್ಣನೆ: ಯುಗಾದಿ ಹಬ್ಬವನ್ನು ಕುರಿತು ಕನ್ನಡದ ಕವಿಗಳು ಅರ್ಥಪೂರ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ. ದ.ರಾ. ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಪು.ತಿ. ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗ, ಕೆ.ಎಸ್. ನಿಸಾರ್ ಅಹಮದ್, ಜಿ.ಎಸ್. ಶಿವರುದ್ರಪ್ಪ, ಎಚ್.ಎಸ್.ವೆಂಕಟೇಶಮೂರ್ತಿ ಮುಂತಾದ ಮಹತ್ವದ ಕವಿಗಳು ಯುಗಾದಿಯನ್ನು ಕುರಿತು ಕಾವ್ಯ ರಚಿಸಿದ್ದಾರೆ. ನವೋದಯದ ಕವಿಗಳು ಯುಗಾದಿಯನ್ನು ಹರ್ಷದ ಪ್ರತೀಕವೆಂದು ಸಂಭ್ರಮಿಸಿದರೆ ನವ್ಯ ಮತ್ತು ನವ್ಯೋತ್ತರದ ಕವಿಗಳು ಯುಗಾದಿ ಕುರಿತು ಪ್ರತಿಕ್ರಿಯಿಸಿರುವ ರೀತಿ ಸ್ವಲ್ಪ ಭಿನ್ನವಾಗಿದೆ.

    ಕುವೆಂಪು ಅವರು,
    ‘ಸುರಲೋಕದ ಸುರ ನದಿಯಲ್ಲಿ ಮಿಂದು
    ಸುರಲೋಕದ ಸಂಪದವ ತಂದು
    ನವಸಂವತ್ಸರ ಭೂಮಿಗೆ ಬಂದು
    ಕರೆಯುತ್ತಿದೆ ನಮ್ಮನ್ನು ಇಂದು’ ಎಂದು ಸಂಭ್ರಮಿಸಿದರೆ
    ಬೇಂದ್ರೆ ಅವರು‘ಹೊಂಗೆ ಹೂವ ತೊಂಗಲಲ್ಲಿ
    ಭೃಂಗದ ಸಂಗೀತ ಕೇಲಿ
    ಮತ್ತೆ ಕೇಳಿ ಬರುತಿದೆ
    ಬೇವಿನ ಕಹಿ ಬಾಳಿನಲ್ಲಿ
    ಹೂವಿನ ನಸುಗಂಪು ಸೂಸಿ
    ಜೀವ ಕಳೆಯ ತರುತಿದೆ…’ ಎಂದು ಹೇಳುವ ಮೂಲಕ ಬೇವಿಗೂ ಒಂದು ನಸುಸವಿಯನ್ನು ಆರೋಪಿಸುತ್ತಾರೆ.
    ಕೆಎಸ್ ನರಸಿಂಹಸ್ವಾಮಿ ಅವರು,

    ‘ಮಾವು ನಾವು, ಬೇವು ನಾವು
    ನೋವು ನಲಿವು ನಮ್ಮವು.
    ಹೂವು ನಾವು ಹಸಿರು ನಾವು
    ಬೇವು ಬೆಲ್ಲ ನಮ್ಮವು..’ ಎಂದು ಹೇಳುವ ಮೂಲಕ ಬೇವು ಮತ್ತು ಬೆಲ್ಲವನ್ನು ಸಮನಾಗಿ ಸ್ವೀಕರಿಸುವ ಹದವಾದ ಹೃದಯವನ್ನು ತೋರುತ್ತಾರೆ. ನವ್ಯ ಮತ್ತು ನವ್ಯೋತ್ತರ ಕವಿಗಳಿಗೆ ಯುಗಾದಿಯ ಸಂಭ್ರಮ ಉಳಿದಿಲ್ಲ ಎನಿಸುತ್ತದೆ.

    ಗೋಪಾಲಕೃಷ್ಣ ಅಡಿಗರ ದೃಷ್ಟಿಯಲ್ಲಿ…
    ‘ಯುಗ ಯುಗಾದಿಯ ತೆರೆಗಳು ಏಳುತ್ತಿವೆ, ಬೀಳುತ್ತಿವೆ
    ಹೊಸ ಹೊಸವು ಪ್ರತಿ ವರುಷವು
    ಒಳಗೆ ಅದೋ ಕಾಣುತ್ತಿದೆ
    ಚೆಲುವಿರದ ನಲವಿರದ
    ಕೊಳೆಯ ಬೆಳೆ; ರಂಗಮಂದಿರವು’
    ಅಡಿಗರ ಪ್ರಕಾರ ಯುಗಾದಿಯ ಸಡಗರ ಕೇವಲ ತೋರಿಕೆಯದು. ಆದರೆ ಆಚರಿಸುವವರ ಎದೆಯಲ್ಲಿ ಚೆಲುವು ಮತ್ತು ನಲಿವು ಇಲ್ಲವಾಗಿದೆ ಎಂಬುದಾಗಿದೆ.

    ಜಿ.ಎಸ್. ಶಿವರುದ್ರಪ್ಪನವರು

    ‘ನಾನು, ನನ್ನಪ್ಪ, ಅವರಪ್ಪನ ಅಪ್ಪ
    ಮಗ, ಮೊಮ್ಮಗ, ಮರಿಮೊಮ್ಮಗ, ಗಿರಿಮಗ
    ಈ ಗಿರಿ ಗಿರಿ ತಿರುಗಿಸಿ ಪುನರಪಿ ಜನನಂ
    ಪುನರಪಿ ಮರಣಂ ಚಕ್ರಗತಿಯೊಳಗೆ
    ದಿನ ಬೆಳಕಿಗೆ ಎದ್ದು, ಕತ್ತಲೆಗೆ ಬಿದ್ದು
    ಸುತ್ತುತ್ತಲೆ ಇರುವ ಈ ಭವ ಭವದ ಮಧ್ಯೆ
    ಪ್ರಭವನಾಮ ಸಂವತ್ಸರದಲ್ಲಿ ನಿಂತಿರುವ
    ಈ ನನಗೆ ಯಾವುದು ಮೊದಲು ಯಾವುದು ಕೊನೆ.’ ಎಂಬ ವಿಷಾದವಿದ್ದಂತೆ ಇದೆ.

    ಎಚ್.ಎಸ್. ವೆಂಕಟೇಶಮೂರ್ತಿ ಯುಗಾದಿಯನ್ನು ಕುರಿತು ಹೀಗೆ ಧ್ವನಿಸಿದ್ದಾರೆ.

    ‘ನಾವು ನಮ್ಮೂರಿನಿಂದ
    ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
    ಇದು ಒಂದು ಮೈಲಿಗಲ್ಲು.
    ಸಿರಿವಂತ ಕಾರಿನಲ್ಲಿ
    ಬಡವ ಬರಿಗಾಲಿನಲ್ಲಿ
    ನಡೆದುಬಂದದ್ದು ಇದೇ ದಾರಿಯಲಿ.’ ಈ ಮಾತುಗಳು ಯುಗಾದಿಯನ್ನು ಸಂಭ್ರಮಿಸುವ ಬದಲು ಅದಕ್ಕಾಗಿ ಪರಿತಪಿಸುವ ಸ್ಥಿತಿಯನ್ನು ಬಿತ್ತರಿಸುತ್ತಾರೆ.

    ಯುಗಾದಿ ಶಿವರುದ್ರಪ್ಪನವರ ದೃಷ್ಟಿಯಲ್ಲಿ ಯುಗದ ಆದಿಯೋ? ಕೊನೆಯೋ? ಎಂಬ ಗೊಂದಲವಿದ್ದರೆ ವೆಂಕಟೇಶಮೂರ್ತಿ ಅವರಿಗೆ ನಾವು ಪರರ ಊರಿಗೆ ಸಾಗುತ್ತಿರುವ ಅಂದರೆ ಸಾವಿನತ್ತ ಚಲಿಸುತ್ತಿರುವ/ ಪಯಣದ ಮೈಲಿಗಲ್ಲುಗಳಾಗಿವೆ. ಸಾಗಿಬಂದಿರುವ ಪ್ರೀತಿಯಲ್ಲೂ ತಾರತಮ್ಯದ ನೋವಿದೆ. ಹೀಗೆ ಶಿಷ್ಟಕವಿಗಳ ದೃಷ್ಟಿಯಲ್ಲಿ ಯುಗಾದಿ ಆಯಾಯ ಕಾಲಮಾನದ ಕನ್ನಡಿಯ ರೂಪವಾದರೆ ಜನಪದರಿಗೆ ಒಂದು ದೀರ್ಘಕಾಲದ ಅನುಭವದ ಪಾಕ.

    ಜನಪದದ ಹೆಣ್ಣುಮಗಳೊಬ್ಬಳು ಬೀಸುಕಲ್ಲಿನ ಮುಂದೆ ಕುಳಿತು ಹಾಡುವ ತ್ರಿಪದಿ ಇಂತಿದೆ.

    ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
    ಎಳ್ಳು ಜೀರಿಗೆ ಬೆಳೆಯೋಳ/ ಭೂಮಿತಾಯಿ
    ಎದ್ದೊಂದು ಗಳಿಗೆ ನೆನೆದೇನಾ…’
    ಯುಗಾದಿಯ ಬೇವು- ಬೆಲ್ಲದ ರಸಪಾಕ ಈ ತ್ರಿಪದಿ. ಮುಂಜಾನೆ ಎದ್ದ ಮನುಷ್ಯ ಎಷ್ಟು ದೇವರನ್ನು ನೆನೆಯಬೇಕು? ಕುವೆಂಪು ಹೇಳುವಂತೆ,
    ‘ಇರುವ ನೂರು ದೇವರುಗಳ ನೂಕಾಚೆ ದೂರ

    ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ… ’ ಎನ್ನುವ ಮೂಲಕ ಭಾರತಮಾತೆ ನಮಗೆ ನಿಜವಾದ ದೇವಿ. ಅವಳನ್ನು ಪೂಜಿಸುವ ಎಂಬ ಮೇರುಕವಿಯ ಆಶಯ ಜನಪದ ಹೆಣ್ಣೊಬ್ಬಳ ಅನುಭವದಲ್ಲಿಯೇ ಮೂಡಿಬಂದಿದೆ. ಕುವೆಂಪು ಅವರ ದೃಷ್ಟಿಯಲ್ಲಿ ನನ್ನನ್ನು ಹೆತ್ತು, ಹೊತ್ತಿರುವ ಈ ಭಾರತ ಮಾತೆ ಭೂಮಿಯಾದರೆ ಜನಪದ ಹೆಣ್ಣಿಗೂ ಕೂಡ ಅದೇ ಭೂಮಿ ತಾಯಿ ತಾನು ಪೂಜಿಸುವ ದೇವಿಯಾಗುತ್ತಾಳೆ. ಆದರೆ ಅದಕ್ಕೆ ಅವಳು ಕೊಡುವ ಕಾರಣವಿದೆಯಲ್ಲ; ಅದು ಮಹತ್ತರವಾದದ್ದು. ಅವಳು, ಎಳ್ಳು ಮತ್ತು ಜೀರಿಗೆಯನ್ನು ಬೆಳೆದು ಕೊಡುತ್ತಾಳೆ ಎನ್ನುವ ಕಾರಣಕ್ಕಾಗಿ ಭೂಮಿಯನ್ನು ಪೂಜಿಸುತ್ತೇನೆ ಎನ್ನುತ್ತಾಳೆ. ಅವಳು ಈ ಎರಡು ಧಾನ್ಯಗಳನ್ನು ಏಕೆ ಹೆಸರಿಸುತ್ತಾಳೆ? ಎಂದರೆ ಎಳ್ಳು ಅಶುಭದ ಧಾನ್ಯ. ಅಂದರೆ ಸೂತಕದ ಸಂದರ್ಭದಲ್ಲಿ ಬಳಸುವ ಧಾನ್ಯ. ಜೀರಿಗೆ ಶುಭದ ಸಂದರ್ಭದಲ್ಲಿ ಬಳಸುವ ಧಾನ್ಯ. ಅಂದರೆ ಅವಳ ಪ್ರಕಾರ ಶುಭ-ಅಶುಭ ಎರಡನ್ನೂ ಕೊಡುವವಳು ಈ ಭೂಮಿತಾಯಿ. ಹುಟ್ಟು, ಸಾವು ಎರಡನ್ನೂ ಕೊಡುವವಳು, ಸುಖ-ದುಃಖ ಎರಡನ್ನೂ ಕೊಡುವವಳು ಈ ಭೂಮಿತಾಯಿ. ಹಗಲು, ರಾತ್ರಿ ಎರಡಕ್ಕೂ ಈ ಭೂಮಿಯೇ ಕಾರಣ. ಇವೆಲ್ಲವೂ ಯುಗಾದಿಯ ಬೇವು ಬೆಲ್ಲವನ್ನೇ ಪ್ರತಿನಿಧಿಸುತ್ತವೆ.

    ಸುಖ-ದುಃಖಗಳನ್ನು, ಬೇಕು-ಬೇಡಗಳನ್ನು ಸಮಾನವಾಗಿ ಕಾಣುವ ಆ ಜಾನಪದ ಹೆಣ್ಣುಮಗಳ ದಿವ್ಯಜ್ಞಾನ ಆಧುನಿಕರಲ್ಲಿ ಇಲ್ಲವಾಗಿದೆ. ಅದಕ್ಕಿಂತ ಮಿಗಿಲಾಗಿ ಜನಪದರು ನೋವಿಗೆ, ಸಾವಿಗೆ ಎಂದೂ ಬೆನ್ನು ಕೊಟ್ಟವರಲ್ಲ. ಅದನ್ನು ಸಮಚಿತ್ತದಿಂದಲೇ ಸ್ವೀಕರಿಸುವ ಮನೋಭಾವದವರು. ‘ಕರುಣ ಬಂದರೆ ಕಾಯೋ, ಮರಣ ಬಂದರೆ ಹೊಯ್ಯೋ’ ಎಂಬ ಎದೆಗಾರಿಕೆ ಉಳ್ಳವರು. ಇದೇ ಅವರ ಸುಖದ ಮೂಲವಾಗಿತ್ತು ಮತ್ತು ಮಂತ್ರವಾಗಿತ್ತು. ಆದರೆ ಆಧುನಿಕರು ದುಃಖಕ್ಕೆ, ಶ್ರಮಕ್ಕೆ ಬೆನ್ನು ತಿರುಗಿಸುತ್ತಾರೆ. ಸುಖಕ್ಕೆ ಹಂಬಲಿಸಿ ಬೆನ್ನು ಹತ್ತುತ್ತಾರೆ. ಸಾವಿನ ವಿಚಾರವಿರಲಿ. ಮುಪ್ಪನ್ನೂ ಒಪ್ಪಿಕೊಳ್ಳದ ಮನೋಭಾವದವರು ಆಧುನಿಕರು. ಮುಪ್ಪನ್ನು ಮುಚ್ಚುವುದರಲ್ಲೇ ತಮ್ಮನ್ನು ಮುಪ್ಪಿನತ್ತ ದೂಡಿಕೊಳ್ಳುತ್ತಿದ್ದಾರೆ. ಸುಖವನ್ನು ಹಂಬಲಿಸಿ ಶ್ರಮವನ್ನು ನಿರಾಕರಿಸಿ ಸಾವಿಗೆ ಹತ್ತಿರವಾಗುತ್ತಿದ್ದಾರೆ. ಹಾಗಾಗಿ ನಮ್ಮ ಜನಪದರ ಸುಖ-ದುಃಖದ ಸಮಚಿತ್ತ ಆಧುನಿಕರಾದ ನಮಗೆ ಬರಬೇಕಿದೆ. ಬೆಲ್ಲ ಸಿಹಿ, ಆದರೆ ಆರೋಗ್ಯಕ್ಕೆ ಅಷ್ಟು ಹಿತಕರವಾದುದ್ದಲ್ಲ. ಸುಖವೂ ಹಾಗೆಯೇ, ಸುಖ ಮನುಷ್ಯನನ್ನು ಜಡ್ಡುಗಟ್ಟಿಸುತ್ತದೆ, ಬೊಜ್ಜು ಹುಟ್ಟಿಸುತ್ತದೆ. ಆದರೆ, ಬೇವು ಹಾಗಲ್ಲ, ಅದು ಕಹಿಯಾದರೂ ದೇಹವನ್ನು ಶುದ್ಧೀಕರಿಸುತ್ತದೆ, ಗಟ್ಟಿಗೊಳಿಸುತ್ತದೆ. ಹಾಗಾಗಿ ನೋವು ಮನುಷ್ಯನನ್ನು ಗಟ್ಟಿಗೊಳಿಸಿದ ಹಾಗೆ, ಕ್ರಿಯಾಶೀಲರನ್ನಾಗಿಸಿದ ಹಾಗೆ, ಸುಖವಾಗಲಿ ನಲಿವಾಗಲಿ ಗಟ್ಟಿಗೊಳಿಸುವುದಿಲ್ಲ.

    ಮಹಾಭಾರತದಲ್ಲಿ ಒಂದು ಪ್ರಸಂಗ: ಜನಪದ ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಕುರುಕ್ಷೇತ್ರ ಯುದ್ಧವೆಲ್ಲ ಕೊನೆಗೊಂಡು, ಪಾಂಡವರಿಗೆ ಪಟ್ಟಾಭಿಷೇಕವಾದ ಮೇಲೆ, ಇದರ ಸೂತ್ರಧಾರ ಕೃಷ್ಣ ಅಳಿದುಳಿದ ಎಲ್ಲರನ್ನೂ ಸೇರಿಸಿ, ಒಂದು ಮಾತು ಹೇಳುತ್ತಾನೆ, ‘ನಾನು ಬಂದ ಕಾರ್ಯ ಆಗಿದೆ. ನನ್ನ ಜವಾಬ್ದಾರಿ ಮುಗಿದಿದೆ. ನಾನು ಇನ್ನು ದ್ವಾರಕೆಗೆ ಹೊರಡುತ್ತೇನೆ. ಅಂತಿಮವಾಗಿ ಇಲ್ಲಿರುವ ನೀವು ನಿಮಗೆ ಬೇಕಾದ ಒಂದೊಂದು ವರವನ್ನು ಕೇಳಿ ಪಡೆದುಕೊಳ್ಳಬಹುದು’ ಎನ್ನುತ್ತಾನೆ. ಎಲ್ಲರೂ ತಮಗೆ ತೋಚಿದ, ಬೇಕಾದ ವರವನ್ನು ಕೇಳಿ ಪಡೆದುಕೊಳ್ಳುತ್ತಾರೆ. ಆದರೆ, ಕುಂತಿ ಏನನ್ನೂ ಕೇಳದೆ ಸುಮ್ಮನಿರುತ್ತಾಳೆ. ಕೃಷ್ಣ ಕುಂತಿಗೆ ಕೇಳುತ್ತಾನೆ, ‘ಅತ್ತೆ, ಎಲ್ಲರೂ ತಮಗೆ ಬೇಕಾದ ವರವನ್ನು ಕೇಳಿ ಪಡೆದುಕೊಂಡಿದ್ದಾರೆ, ನೀವು ಏನನ್ನೂ ಕೇಳಲಿಲ್ಲ ಏಕೆ?’ ಕುಂತಿ, ತನಗೆ ಯಾವ ವರವೂ ಬೇಡ ಎಂದು ನಿರಾಕರಿಸುತ್ತಾಳೆ. ಕೃಷ್ಣ ಮತ್ತೂ ಒತ್ತಾಯಿಸಿದಾಗ ಕುಂತಿ ಹೇಳುತ್ತಾಳೆ ಕೃಷ್ಣ, ‘ಕೊಡುವುದಾದರೆ ನನಗೆ ಕಷ್ಟಗಳನ್ನೇ ಕೊಡು’ ಎನ್ನುತ್ತಾಳೆ. ಕೃಷ್ಣ ಆಶ್ಚರ್ಯದಿಂದ, ‘ಏಕೆ ಅತ್ತೆ, ಕಷ್ಟವನ್ನು ವರವೆಂದು ಕೇಳುತ್ತಿದ್ದೀರಿ’ ಎಂದಾಗ ಕುಂತಿ ಹೇಳುತ್ತಾಳೆ, ‘ಕೃಷ್ಣ ಬದುಕಿನುದ್ದಕ್ಕೂ ನನಗೆ ಕಷ್ಟಗಳೇ ಸಂಗಾತಿಯಾಗಿ ಬಂದಿವೆ; ಆದರೂ ಸುಖಕ್ಕೇನೂ ಕೊರತೆಯಾಗಿಲ್ಲ. ಈಗಂತೂ ನೀನಿದ್ದೀಯಾ. ನನಗೆ ಸಂಕಟ ಬಂದಾಗ ಕೃಷ್ಣ… ಎಂದು ಕರೆಯುತ್ತೇನೆ; ನೀನು ಬರುತ್ತಿಯಾ. ನಿನ್ನ ಬರುವಿಕೆಗಿಂತ ಸುಖ ನನಗೇನು ಬೇಕು?’ ಎನ್ನುತ್ತಾಳೆ. ಕಷ್ಟವನ್ನು ಬಯಸುವ ಮತ್ತು ಕಷ್ಟದಲ್ಲೇ ಸುಖವನ್ನು ಕಂಡುಕೊಳ್ಳುವ ಕುಂತಿ ಇಲ್ಲಿ ನಮ್ಮ ಜನಪದರ ಪ್ರತಿನಿಧಿ. ಇಷ್ಟು ಸುಲಭವಾಗಿ ಸುಖ ಸಿಗುವುದಾದರೆ ಜನಪದರೇ ನಮಗೆ ಮಾದರಿ ಅಲ್ಲವೇ? ಬೇವು ಕೂಡ ನಮಗೆ ಸವಿಯಲ್ಲವೇ?

    | ಪ್ರೊ. ಎಚ್.ಎಲ್. ಮಲ್ಲೇಶಗೌಡ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು

    ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಕೇಂದ್ರ ಸಚಿವರಿಗೆ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts