More

    ಪಾಲನೆಯಾಗದ ಕರೊನಾ ಮಾರ್ಗಸೂಚಿ

    ಹಾವೇರಿ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿ 2 ದಿನವಾದರೂ ಬಹುತೇಕರು ಸ್ಪಂದಿಸುತ್ತಿಲ್ಲ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

    ಜನತಾ ಕರ್ಫ್ಯೂ ಮೊದಲ ದಿನವಾದ ಬುಧವಾರ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗದಿದ್ದರಿಂದ 2ನೇ ದಿನವೂ ಜನರ ಓಡಾಟ ಎಗ್ಗಿಲ್ಲದೆ ಸಾಗಿತ್ತು. ಬ್ಯಾಂಕ್, ಆಸ್ಪತ್ರೆ, ಔಷಧ, ಕಟ್ಟಡ ಸಾಮಗ್ರಿ ಖರೀದಿ ನೆಪದಲ್ಲಿ ಜನರ ತಿರುಗಾಟ ಮುಂದುವರಿಯಿತು.

    ಬೆಳಗ್ಗೆ 10 ಗಂಟೆವರೆಗೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ ವಹಿವಾಟು ಆರಂಭಗೊಂಡಿದ್ದರಿಂದ ಆ ವೇಳೆ ರಸ್ತೆಗಳಲ್ಲಿ ಜನ-ವಾಹನ ಸಂಚಾರ ಅಧಿಕವಾಗಿತ್ತು.

    ಬೆಳಗ್ಗೆ 10 ಗಂಟೆ ಬಳಿಕವೂ ಅಗತ್ಯ ವಸ್ತು ಖರೀದಿ ನೆಪದಲ್ಲಿ ಜನ ಓಡಾಡುತ್ತಿರುವುದು ಪೊಲೀಸರಿಗೂ ತಲೆಬಿಸಿಯಾಗಿದೆ. ಅನಗತ್ಯ ತಿರುಗಾಟ ನಡೆಸುವವರಿಗೆ ದಂಡ ವಿಧಿಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

    ಲಾಠಿ ರುಚಿ ಅನಿವಾರ್ಯ…

    ಕಳೆದ ವರ್ಷದ ಲಾಕ್​ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗಿಳಿಯುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಅಲ್ಲದೆ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆದರೆ, ಈ ಬಾರಿ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ.

    ಸದ್ಯ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಿದೆ. ಜನತಾ ಕರ್ಫ್ಯೂ ಆದೇಶ ಉಲ್ಲಂಘನೆ ಇದೇ ರೀತಿ ಮುಂದುವರಿದರೆ ಸೋಂಕು ತೀವ್ರಗೊಳ್ಳುವ ಆತಂಕವೂ ಹೆಚ್ಚಿದೆ. ಸೋಂಕು ಹೆಚ್ಚಾದಾಗ ಕಠಿಣ ಕ್ರಮಕ್ಕೆ ಮುಂದಾಗುವುದಕ್ಕಿಂತ ಈಗಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ, ಬೆಳಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಜನರು ಗುಂಪುಗೂಡದಂತೆ ತಡೆಯಲು ಕಠಿಣ ನಿಯಮ ಜಾರಿಗೊಳಿಸುವುದು ಅನಿವಾರ್ಯ ಎಂಬುದು ಜನರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts