More

    ಹಿಜಾಬ್ ಮತ್ತೆ ಧರ್ಮಸಂಕಟ: ಡ್ಯಾಮೇಜ್ ಕಂಟ್ರೋಲ್​ಗೆ ಸಿಎಂ ಯತ್ನ, ಪ್ರತಿಪಕ್ಷಗಳ ವಾಗ್ದಾಳಿ

    ಬೆಂಗಳೂರು: ಮುಸ್ಲಿಂ ಸಮುದಾಯದವರ ಏಳಿಗೆಗೆ 10 ಸಾವಿರ ಕೋಟಿ ರೂ. ಅನುದಾನದ ಭರವಸೆ ನೀಡಿದ ನಂತರ ಉಂಟಾಗಿರುವ ವಿವಾದದ ಕಿಚ್ಚು ಆರುವ ಮುನ್ನವೇ ಮತ್ತೆ ಹಿಜಾಬ್ ಕಿಡಿ ಹೊತ್ತಿಕೊಂಡಿದ್ದು, ಇದನ್ನು ತಣ್ಣಗಾಗಿಸಲು ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಿಎಂ, ಹಿಜಾಬ್ ನಿಷೇಧ ವಾಪಸ್ ಬಗ್ಗೆ ಯೋಚಿಸಿರುವೆ. ಈ ಕುರಿತು ಯಾವುದೇ ಸೂಚನೆ ನೀಡಿಲ್ಲ ಎಂದಿದ್ದಾರೆ. ಹಿಜಾಬ್ ಪ್ರಕರಣವು ಸುಪ್ರೀಂಕೋರ್ಟ್​ನ ವಿಸõತ ಪೀಠಕ್ಕೆ ವರ್ಗಾವಣೆಯಾಗಿದೆ. ಈ ಹಂತದಲ್ಲಿ ಸಿಎಂ ನೀಡಿದ ಹೇಳಿಕೆಯು ಕಾನೂನು ಜಿಜ್ಞಾಸೆಯನ್ನೂ ಹುಟ್ಟುಹಾಕಿದೆ. ಕಾಂಗ್ರೆಸ್, ಬಿಜೆಪಿ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಆದರೆ, ರಾಜಕೀಯ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದ ಈ ಬೆಳವಣಿಗೆ ಬಗ್ಗೆ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಮೌನಕ್ಕೆ ಶರಣಾಗಿರುವುದು ಕುತೂಹಲ ಮೂಡಿಸಿದೆ.

    ಮುಖ್ಯಮಂತ್ರಿ ಪರ ನಿಂತ ಸಚಿವರು: ಬಿಜೆಪಿ ನಾಯಕರ ಆಕ್ರಮಣಕಾರಿ ಶೈಲಿ ಹೇಳಿಕೆಗೆ ಅದೇ ಧಾಟಿಯಲ್ಲಿ ಹಲವು ಸಚಿವರು ತಿರುಗೇಟು ನೀಡಿ, ಸಿಎಂ ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿದ್ದಾರೆ. ಜನರಿಗೆ ಬೇಕಿರುವುದು ಶಿಕ್ಷಣ ಮತ್ತು ಆರೋಗ್ಯ. ಊಟ, ಬಟ್ಟೆ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿ, ಧರ್ಮದ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಹಿಜಾಬ್ ವಿಷಯದಲ್ಲಿ ಸಿಎಂ ತಳೆದ ನಿಲುವು ಸರಿಯಾಗಿದೆ ಎಂದು ಸಚಿವರಾದ ಎಚ್.ಕೆ. ಪಾಟೀಲ, ಮಧು ಬಂಗಾರಪ್ಪ, ಆರ್.ಬಿ. ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಶಿವರಾಜ ತಂಗಡಗಿ ಇನ್ನಿತರರು ಸಮರ್ಥಿಸಿಕೊಂಡಿದ್ದಾರೆ.

    ಮುಗಿಬಿದ್ದ ಕಮಲಪಡೆ
    ಸಿಎಂ ಶುಕ್ರವಾರ ರಾತ್ರಿ ಹಿಜಾಬ್ ನಿಷೇಧ ವಾಪಸ್ ವಿಚಾರ ಪ್ರಸ್ತಾಪಿಸುತ್ತಿ ದ್ದಂತೆ ಕಮಲಪಡೆ ಮುಗಿಬಿದ್ದಿದೆ. ಶಾಲಾ ಮಕ್ಕಳಲ್ಲಿ ಸಮಾನತೆಗೆ ಹಿಂದಿನ ಸರ್ಕಾರ ಸಮವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಹಿಜಾಬ್ ಹೆಸರಿನಲ್ಲಿ ಸಮಾಜ ಒಡೆಯುವ, ಮುಸ್ಲಿಮರನ್ನು ಓಲೈಸುವ ನೀತಿಯನ್ನು ಸಹಿಸುವುದಿಲ್ಲ. ಹೋರಾಟಕ್ಕೆ ಇಳಿಯುತ್ತೇವೆ ಎಂದೂ ಎಚ್ಚರಿಸಿದೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನಿತರರು ಆಕ್ರೋಶ ಹೊರ ಹಾಕಿದ್ದಾರೆ.

    ಗಮನ ಬೇರೆಡೆ ಸೆಳೆಯುವ ತಂತ್ರ
    ಬರಗಾಲದ ಬವಣೆಯಿಂದ ರೈತರು ಬೆಂದಿದ್ದು, ಬೆಳೆ ಪರಿಹಾರ ದೊರೆತಿಲ್ಲ. ಆರು ತಿಂಗಳಲ್ಲಿ 400ಕ್ಕೂ ಹೆಚ್ಚು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಡಿಯುವ ನೀರು, ಮೇವು, ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ. ಇಂಥ ಅನೇಕ ಸವಾಲುಗಳು ಸರ್ಕಾರದ ಮುಂದಿವೆ. ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ‘ಹಿಜಾಬ್’ ವಿಷಯವನ್ನು ಮತ್ತೆ ಕೆದಕಿದೆ ಎಂಬುದು ಬಿಜೆಪಿ ಆರೋಪವಾಗಿದೆ. ಅನುದಾನ ನೀಡುತ್ತಿಲ್ಲ ಎಂಬ ಸ್ವಪಕ್ಷದ ಶಾಸಕರ ಅಸಮಾಧಾನ, ನಿಗಮ-ಮಂಡಳಿ ಗಳಿಗೆ ನೇಮಕ ವಿಳಂಬದಿಂದ ಪಕ್ಷದಲ್ಲಿ ಉಂಟಾಗಿರುವ ತಳಮಳದಿಂದ ತಪ್ಪಿಸಿಕೊಳ್ಳಲು ಸಿಎಂ ‘ಹಿಜಾಬ್’ ಆಶ್ರಯಿಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ನೇರವಾಗಿ ಆರೋಪಿಸಿದೆ.

    ಹಿಜಾಬ್ ಸಮವಸ್ತ್ರದ ಭಾಗವಲ್ಲ
    ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ನಿಯಮಾವಳಿಯೂ ರೂಪಿತವಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಆಯಾ ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ. ಹಿಜಾಬ್ ಸಮವಸ್ತ್ರದ ಭಾಗವಾಗದ ಕಾರಣ ಆ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಎಲ್ಲರೂ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಬೇಕು ಎಂಬುದಾಗಿ ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

    ಒಂದೇ ದಿನದಲ್ಲಿ ಹೇಳಿಕೆ ಬದಲು
    ಮೈಸೂರು: ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಸಂಬಂಧ ಸರ್ಕಾರದಲ್ಲಿ ಚರ್ಚೆ ಆಗಬೇಕು. ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ. ಯಾರೋ ಒಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಉತ್ತರ ನೀಡಿದ್ದೆ. ಆದರೆ, ಸರ್ಕಾರ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು. ‘ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ಉಡುಗೆ ಧರಿಸಲು ಹಾಗೂ ಆಹಾರ ಸೇವಿಸಲು ಸಂಪೂರ್ಣ ಸ್ವಾತಂತ್ರ್ಯದ್ದು, ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ಈ ಮುನ್ನ ಅವರು ಹೇಳಿಕೆ ನೀಡಿದ್ದರು. ಬಿಜೆಪಿಯವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಕೆಲವರನ್ನು ಬಿಜೆಪಿಯವರು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಇವರಿಂದ ಹೇಗೆ ಸಬ್ ಕಾ ವಿಕಾಸ್ ಸಾಧ್ಯವಿದೆ? ಅವರವರ ಇಚ್ಛೆಯಂತೆ ಆಹಾರ ಸೇವಿಸಲು ಹಾಗೂ ಉಡುಗೆ ತೊಡಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದೆ. ಹೀಗಾಗಿ, ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನೀವ್ಯಾರೂ ಆ ಬಗ್ಗೆ ಚಿಂತೆ ಪಡಬೇಕಾಗಿಲ್ಲ ಎಂದು ಮುಸ್ಲಿಂ ಸಮುದಾಯದವರಿಗೆ ಅಭಯ ನೀಡಿದ್ದರು.

    ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ. ಆ ನಿಟ್ಟಿನಲ್ಲಿ ಯೋಚಿಸಿದ್ದೇವೆ. ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.

    | ಸಿದ್ದರಾಮಯ್ಯ ಮುಖ್ಯಮಂತ್ರಿ

    ಹಿಜಾಬ್ ವಾಪಸ್ ಪಡೆಯಿರಿ ಎಂದು ಯಾವ ಮುಸ್ಲಿಂ ನಾಯಕರು ಇವರಿಗೆ ಹೇಳಿದರು? ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ. ಸಿಎಂ ಸಿದ್ದರಾಮಯ್ಯ ತೀರ್ಮಾನವನ್ನು ಖಂಡಿಸುವೆ. ಬರಗಾಲ ಮರೆತ ಇದೊಂದು ಬೇಜವಾಬ್ದಾರಿ ಸರ್ಕಾರ.

    | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

    25 ಕೋಟಿ ಮೌಲ್ಯದ ಲಕ್ಷುರಿ ಮನೆ ಹೊಂದಿರುವ ಈ ಯೂಟ್ಯೂಬರ್​ ಆದಾಯ ಕೇಳಿದ್ರೆ ದಂಗಾಗ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts