More

    ಎಲ್ಲ ಹಾವುಗಳು ವಿಷಕಾರಿಯಲ್ಲ

    ಶೃಂಗೇರಿ: ಹಾವುಗಳ ಬಗ್ಗೆ ಅನಗತ್ಯ ಭಯದಿಂದ ಅವುಗಳನ್ನು ಹೊಡೆದು ಸಾಯಿಸಲಾಗುತ್ತಿದೆ. ಎಲ್ಲ ಹಾವುಗಳು ವಿಷಕಾರಿಯಲ್ಲ ಎಂದು ಉರಗಪ್ರೇಮಿ ಜಯಕುಮಾರ್ ಹೇಳಿದರು.

    ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿನಿಯರ ನಿಲಯದಲ್ಲಿ ಭಾನುವಾರ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಹಾವುಗಳ ದಿನದ ಅಂಗವಾಗಿ ಏರ್ಪಡಿಸಿದ್ದ ಉರಗಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಮಲೆನಾಡಿನಲ್ಲಿ ಅನೇಕ ಹಾವುಗಳು ಕಾಣಿಸಿಕೊಳ್ಳುತ್ತವೆ. ಧಾನ್ಯಗಳನ್ನು ಇಲಿಗಳಿಂದ ರಕ್ಷಿಸಲು ಹಾವುಗಳ ಪಾತ್ರ ಮಹತ್ತರವಾದುದು. ಕೆರೆಹಾವುಗಳು ರೈತರ ಮಿತ್ರ. ಧಾನ್ಯ ತಿನ್ನುವ ಇಲಿಗಳೇ ಅವುಗಳಿಗೆ ಪ್ರಮುಖ ಆಹಾರ. ನಾಗರಹಾವು, ಕಾಳಿಂಗಸರ್ಪ ವಿಷಕಾರಿ. ಹಪ್ಪಟೆ, ಕೆರೆಹಾವು, ಹಸಿರು ಹಾವು ಮುಂತಾದ ಜಾತಿಯ ಹಾವುಗಳು ವಿಷಕಾರಿಯಲ್ಲ. ಕೆಲ ಹಾವುಗಳು ಹೆಚ್ಚು ವಿಷಕಾರಿಯಲ್ಲದಿದ್ದರೂ ಹಪ್ಪಟೆ ಹಾವು ಕಚ್ಚಿದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
    ವಿದ್ಯಾರ್ಥಿನಿ ಶ್ರೀರಕ್ಷಾ ಮಾತನಾಡಿ, ವೈಜ್ಞಾನಿಕವಾಗಿ ಹಾವುಗಳ ಬಗ್ಗೆ ಎಲ್ಲರೂ ತಿಳಿದಿರಬೇಕು. ಹಾವು ಕಚ್ಚಿದಾಗ ಬಹುತೇಕ ಜನರು ಭಯಪಟ್ಟು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಬೇಕು ಮತ್ತು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಮಂತ್ರ ಅಥವಾ ನಾಟಿ ಔಷಧ ಮಾಡುತ್ತೇವೆ ಎಂದು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ನಿಧಾನವಾದಷ್ಟು ಅಪಾಯಕಾರಿ ಎಂದರು.
    ಉರಗ ಸ್ನೇಹಿ ಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸೌಮ್ಯಾ ವಿಜಯಕುಮಾರ್, ಕೆ.ಎಲ್.ಗೋಪಾಲಕೃಷ್ಣ, ಕಾರ್ಯದರ್ಶಿ ಮಂಜುಳಾ ಎಸ್. ಭಟ್, ಡಾ. ಭುವನೇಶ್ವರಿ ಬಲ್ಲಾಳ್, ಪೂರ್ಣಿಮಾ ಸಿದ್ದಪ್ಪ, ವಸತಿ ನಿಲಯದ ಮೇಲ್ವಿಚಾರಕರಾದ ವೀಣಾ, ಸಿಂಚನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts