More

    ಯಕ್ಷಗಾನ, ನಾಟಕಗಳಿಗೆ ಮತ್ತೆ ಗ್ರಹಣ

    ರಾಜೇಶ್ ಶೆಟ್ಟಿ ದೋಟ ಮಂಗಳೂರು
    ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಸಾಕಷ್ಟು ಬವಣೆ ಅನುಭವಿಸಿದ್ದ ಯಕ್ಷಗಾನ, ನಾಟಕ ಕ್ಷೇತ್ರ ಮತ್ತೆ ಹಳಿಯತ್ತ ಮರಳುತ್ತಿರುವಾಗಲೇ ಬಂದೆರಗಿದ ಕೋವಿಡ್ ಎರಡನೇ ಅಲೆ ಮತ್ತೆ ಕಲಾವಿದರನ್ನು ಅತಂತ್ರರನ್ನಾಗಿಸಿದೆ.
    ಸಾಂಸ್ಕೃತಿಕ ಲೋಕದ ಸುಸಮಯವಾದ ಏಪ್ರಿಲ್, ಮೇ ತಿಂಗಳಲ್ಲಿ ಕರಾವಳಿಯಲ್ಲಿ ಜಾತ್ರೆ, ಬ್ರಹ್ಮಕಲಶ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ, ನಾಟಕ ಪ್ರದರ್ಶನಗಳು ಆಯೋಜನೆಗೊಳ್ಳುತ್ತಿದ್ದವು. ಆದರೆ ಈ ಬಾರಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳು ಹೇರಲ್ಪಟ್ಟಿದ್ದರಿಂದ ಎಲ್ಲ ಕಾರ್ಯಕ್ರಮಗಳು ಬಂದ್ ಆಗಿವೆ.
    ಕಳೆದ ಮಾರ್ಚ್‌ನಲ್ಲಿ ಸ್ತಬ್ಧಗೊಂಡಿದ್ದ ಸಾಂಸ್ಕೃತಿಕ ಲೋಕ ಸೆಪ್ಟೆಂಬರ್-ಡಿಸೆಂಬರ್ ವೇಳೆಗೆ ನಿಧಾನವಾಗಿ ಚಲನಶೀಲವಾಗಿತ್ತು. ಜನವರಿ ಬಳಿಕ ಯಕ್ಷಗಾನ, ನಾಟಕ ಪ್ರದರ್ಶನಗಳು ಆರಂಭವಾಗಿ ಸಹಜ ಸ್ಥಿತಿಗೆ ತಲುಪುತ್ತಿರುವಾಗಲೇ ಇದೀಗ ಎರಡನೇ ಬಾರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಎಲ್ಲರಿಗೂ ಸಂಬಳವಿಲ್ಲ: ಕರಾವಳಿಯ ಕೆಲವು ಯಕ್ಷಗಾನ ಮೇಳಗಳ ಕಲಾವಿದರಿಗೆ ಮಾತ್ರ ಆರು ತಿಂಗಳ ಅವಧಿಗೆ ನಿಶ್ಚಿತ ಸಂಭಾವನೆಯ ಒಡಂಬಡಿಕೆಯಿದೆ. ಆದರೆ ಬಹುತೇಕ ಮೇಳಗಳ ಕಲಾವಿದರಿಗೆ ಪ್ರದರ್ಶನವಿದ್ದರಷ್ಟೇ ಸಂಬಳ. ಇದರಿಂದ ಯಕ್ಷಗಾನ, ನಾಟಕ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡ ಕಲಾವಿದರ ಬದುಕು ಕತ್ತಲಿಗೆ ಸರಿದಂತಾಗಿದೆ. ಒಂದು ಮೇಳದಲ್ಲಿ ಕಲಾವಿದರು ಸಹಿತ ಕೆಲಸದವರು ಸೇರಿ 60-65 ಮಂದಿ ಇರುತ್ತಾರೆ. ಕೆಲವು ಖ್ಯಾತನಾಮ ಭಾಗವತರು, ಕಲಾವಿದರಿಗೆ ಮಾತ್ರ ಹಗಲು ಹೊತ್ತು ಖಾಸಗಿಯಾಗಿ ಆಯೋಜಿಸುವ ಕೆಲವೊಂದು ಕಾರ್ಯಕ್ರಮಗಳು ದೊರೆಯುತ್ತವೆ. ಆದರೆ ಉಳಿದವರ ಬದುಕು ಮಾತ್ರ ಶೋಚನೀಯ.

    ಪ್ರದರ್ಶನ ರದ್ದು: ಆರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ವರೆಗೆ ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭ ನಗರದ ಹೊರಭಾಗಗಳಲ್ಲಿ ಯಕ್ಷಗಾನ, ನಾಟಕ ಪ್ರದರ್ಶನಗೊಳ್ಳುತ್ತಿತ್ತು. ಆದರೆ, ಏ.20ರಂದು ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟಗೊಂಡ ಬಳಿಕ ಎಲ್ಲ ಯಕ್ಷಗಾನ ಮೇಳಗಳು ಪ್ರದರ್ಶನವನ್ನು ನಿಲ್ಲಿಸಿವೆ. ಏ.22ರಿಂದ ಕಟೀಲು ಆರೂ ಮೇಳಗಳ ಆಟವನ್ನು ನಿಲ್ಲಿಸಿವೆ. ಕಾಲಮಿತಿ ಪ್ರದರ್ಶನ ನೀಡುತ್ತಿದ್ದ ಮೇಳಗಳೂ ಪ್ರದರ್ಶನ ರದ್ದುಪಡಿಸಿವೆ. ಪತ್ತನಾಜೆಗೆ ಇನ್ನೂ ಒಂದು ತಿಂಗಳ ಅವಧಿ ಇರುವಾಗಲೇ ಗೆಜ್ಜೆ ಬಿಚ್ಚಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

    ಜೀವನೋಪಾಯಕ್ಕೆ ಪರದಾಟ: ಬಡಗುತಿಟ್ಟಿನಲ್ಲಿ ಮಂದಾರ್ತಿ, ಅಮೃತೇಶ್ವರಿ, ಮಾರಣಕಟ್ಟೆ, ಸಾಲಿಗ್ರಾಮ, ಹಟ್ಟಿಯಂಗಡಿ, ಗೋಳಿಗರಡಿ, ಹಿರಿಯಡ್ಕ ಮೇಳ ಸೇರಿದಂತೆ 24 ಯಕ್ಷಗಾನ ಮೇಳಗಳಿವೆ. ಇಲ್ಲಿ 1,500ಕ್ಕೂ ಅಧಿಕ ಕಲಾವಿದರು ಕೆಲಸ ಮಾಡುತ್ತಾರೆ. ಇವರಲ್ಲಿ ಕೇವಲ ಯಕ್ಷಗಾನವನ್ನೇ ನಂಬಿಕೊಂಡಿರುವ ಅದೆಷ್ಟೋ ಕಲಾವಿದರು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.

    ಯಕ್ಷಗಾನ, ನಾಟಕದ ಅತ್ಯಂತ ಬೇಡಿಕೆಯ ಸಂದರ್ಭದಲ್ಲೇ ಕರೊನಾ ಎರಡನೇ ಅಲೆ ಲಗ್ಗೆ ಇಟ್ಟಿದೆ. ಕಳೆದ ಬಾರಿಯ ಲಾಕ್‌ಡೌನ್ ಹೊಡೆತದಿಂದಲೇ ಕಲಾವಿದರು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೂ ಆರೇಳು ತಿಂಗಳು ಯಾವುದೇ ಪ್ರದರ್ಶನವಿಲ್ಲದೆ ಕಲಾವಿದರು ಕಾಲ ಕಳೆಯಬೇಕಿದೆ. ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಮೂಲಕ ಸರ್ಕಾರ ಬಡ ಕಲಾವಿದರಿಗೆ ನೆರವು ನೀಡುವ ವ್ಯವಸ್ಥೆಯಾಗಬೇಕು. ಇದಕ್ಕೆ ರಾಜಕೀಯ ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿ ಅಗತ್ಯ.
    ಸರಪಾಡಿ ಅಶೋಕ ಶೆಟ್ಟಿ, ಯಕ್ಷಗಾನ ಕಲಾವಿದ 

    ವರ್ಷದ ಬಳಿಕ ನಾಟಕ ರಂಗ ಮತ್ತೆ ಹಳಿಯತ್ತ ಸಾಗುತ್ತಿರುವಾಗಲೇ ಮತ್ತೆ ಕರೊನಾ ಕರಿಛಾಯೆ ಬೀರಿದೆ. ಸಾಮಾಜಿಕ ಸ್ವಾಸ್ಥೃದ ಬಗ್ಗೆ ನಮಗೂ ಕಾಳಜಿ ಇದೆ. ಕೇವಲ ರಂಗಭೂಮಿ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಕಷ್ಟದ ದಿನ ಬಂದೊದಗಿದೆ. ಕಲಾವಿದರಿಗೂ ಸಮಸ್ಯೆ ಆಗಿದೆ. ಆದರೆ ಪರಿಸ್ಥಿತಿ ಹಾಳಾಗಿರುವಾಗ ನಾವೂ ಕೂಡ ಸರ್ಕಾರದ ನಿಯಮಗಳಿಗೆ ಗೌರವ ಕೊಡಬೇಕಾಗುತ್ತದೆ. ಮಂದೆ ರಂಗಭೂಮಿಗೆ ಒಳ್ಳೆಯ ದಿನಗಳು ಬಂದೇ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ.
    ವಿಜಯ ಕುಮಾರ್ ಕೊಡಿಯಾಲ್‌ಬೈಲ್, ನಾಟಕ ನಿರ್ದೇಶಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts