More

    ಬೆಂಕಿ ನಂದಿಸಲು ನೀರೇ ಇಲ್ಲ!

    ನರಗುಂದ: ಅಗ್ನಿ ಅನಾಹುತ ಸಂಭವಿಸಿದಾಗ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಪಟ್ಟಣದ ಅಗ್ನಿಶಾಮಕ ಠಾಣೆ ಮೂಲ ಸೌಕರ್ಯದಿಂದ ಬಳಲುತ್ತಿದೆ. ಬೆಂಕಿ ನಂದಿಸಲು ಬೇಕಿರುವ ನೀರಿನ ಮೂಲದ ವ್ಯವಸ್ಥೆಯನ್ನೇ ಮಾಡದಿರುವುದು ಸ್ಥಳೀಯಾಡಳಿತದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

    ಪಟ್ಟಣದ ಅಗ್ನಿಶಾಮಕ ದಳ ಠಾಣೆಯಲ್ಲಿ ನೀರಿನ ಹೈಡ್ರಂಟ್(ಬೀದಿ ಕೊಳಾಯಿ ಅಥವಾ ಹೆಕ್ಕೊಳಾಯಿ) ಇಲ್ಲದಿರುವುದರಿಂದ ಅನಾಹುತ ಸಂಭವಿಸಿದ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಈ ಮೊದಲು 1996ರಲ್ಲಿ ಎಪಿಎಂಸಿ ಆವರಣದ ಕಚೇರಿಯೊಂದರಲ್ಲಿ ಅಗ್ನಿಶಾಮಕ ಠಾಣೆಯ ತುರ್ತು ಸೇವೆಗಳನ್ನು ಕಾರ್ಯ ನಿರ್ವಹಿಸಲಾಗುತ್ತಿತ್ತು. 2004 ರಲ್ಲಿ ಸರ್ಕಾರ 2 ಎಕರೆ ಜಾಗ ಒದಗಿಸಿ, ಅಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ ಹಾಗೂ ಅಧಿಕಾರಿ, ಸಿಬ್ಬಂದಿಗೆ 14 ವಸತಿ ಗೃಹ ನಿರ್ವಿುಸಿತು. ಆದರೆ, ಅಲ್ಲಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಸಂಭವಿಸುವ ಯಾವುದೇ ಅಗ್ನಿ ಅವಘಡಗಳನ್ನು ನಂದಿಸಲು ನೀರಿನ ಮೂಲ ಕಲ್ಪಿಸಿಕೊಟ್ಟಿಲ್ಲ. ಅಲ್ಲದೆ, 14 ವಸತಿ ಗೃಹಗಳಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುವುದರಿಂದ ಸಿಬ್ಬಂದಿಯೂ ತೊಂದರೆ ಅನುಭವಿಸುವಂತಾಗಿದೆ.

    ತುರ್ತು ಸೇವೆಗೆ ಮೂರು ಜಲ ವಾಹನಗಳಿವೆ. ಈಗಿರುವ ಹೊಸ ಕಟ್ಟಡ ಬಿರುಕು ಬಿಟ್ಟಿದೆ. ಸುತ್ತಲೂ ಕಾಂಪೌಂಡ್ ಇಲ್ಲದ ಕಾರಣ ಬಿಡಾಡಿ ದನಗಳು, ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಅಲ್ಲಿನ ಸಿಬ್ಬಂದಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ವರ್ಷ 35 ಅಗ್ನಿ ಅವಘಡಗಳು ಸಂಭವಿಸಿದ್ದವು. ಪ್ರಸಕ್ತ 2020-21ನೇ ಸಾಲಿನಲ್ಲಿ 42ಕ್ಕೂ ಅಧಿಕ ಅಗ್ನಿ ಅವಘಡ ಸಂಭವಿಸಿವೆ. ಠಾಣೆ ಆವರಣದಲ್ಲಿ 70 ಸಾವಿರ ಮತ್ತು 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಎರಡು ಪ್ರತ್ಯೇಕ ಟ್ಯಾಂಕ್​ನಿರ್ವಿುಸಲಾಗಿದೆ. ಆದರೆ, ಶಾಶ್ವತ ಜಲಮೂಲದ ಸೌಲಭ್ಯವಿಲ್ಲದ ಕಾರಣ ಅವು ಪಾಳು ಬಿದ್ದಿವೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ತುರ್ತಾಗಿ ನೀರಿನ ಮೂಲ (ಹೈಡ್ರೇಂಟ್), ಸಿಸಿ ರಸ್ತೆ, ಕಾಂಪೌಂಡ್ ನಿರ್ವಣ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎನ್ನುತಾರೆ ಸಿಬ್ಬಂದಿ.

    ನರಗುಂದ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು ವರ್ಷಗಳಿಂದ ನೀರಿನ ಸೌಲಭ್ಯವಿಲ್ಲ. ಇದರಿಂದ ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ತಕ್ಷಣವೇ ಸ್ಥಳಕ್ಕೆ ತೆರಳಲು ಸಮಸ್ಯೆಯಾಗುತ್ತಿದೆ. ದೇಸಾಯಿಬಾವಿ, ಖಾಸಗಿ ಬೋರ್​ವೆಲ್​ಗಳಲ್ಲಿ ಸವಳು ನೀರು ತುಂಬಿಸಿಕೊಂಡು ಬೆಂಕಿ ನಂದಿಸಲು ಹೋಗುತ್ತೇವೆ. ಇದರಿಂದ ಜಲ ವಾಹನಗಳ ಪ್ಲೇಟ್​ಗಳು ಮತ್ತು ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿವೆ. ಎಮರ್ಜೆನ್ಸಿ ಸಂದರ್ಭದಲ್ಲಿ ಜಲವಾಹನದ ಮೂಲಕ ನೀರಿನ ಟ್ಯಾಂಕ್ ತುಂಬಿಸಿಕೊಳ್ಳಲು ನಿಲ್ಲುವುದರಿಂದ ಸಮಯ ವ್ಯರ್ಥವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗುತ್ತಿದ್ದೇವೆ. ಸಮಸ್ಯೆ ಕುರಿತು ಪುರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    | ಸಂದೀಪ ಬಸರಗಿ ಅಗ್ನಿಶಾಮಕ ಠಾಣಾಧಿಕಾರಿ ನರಗುಂದ

    ನರಗುಂದ ಅಗ್ನಿಶಾಮಕ ಠಾಣೆ ಅಧಿಕಾರಿ, ಸಿಬ್ಬಂದಿಗೆ ಕುಡಿಯುವ ನೀರಿನ ಸಮಸ್ಯೆಯಿರುವ ಬಗ್ಗೆ ಗಮನಕ್ಕೆ ಬಂದಿದೆ. ಎರಡ್ಮೂರು ದಿನಗಳಲ್ಲಿ ನಿರಂತರ ಕುಡಿಯುವ ನೀರಿನ ಪೈಪ್​ಲೈನ್ ಅಳವಡಿಸಿ ನೌಕರರ ಸಮಸ್ಯೆ ಬಗೆಹರಿಸಲಾಗುತ್ತದೆ.

    | ಸಂಗಮೇಶ ಬ್ಯಾಳಿ ಪುರಸಭೆ ಮುಖ್ಯಾಧಿಕಾರಿ, ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts