More

    ಮಾವಿನಗುಳಿಯಲ್ಲಿ ನೀರಿಗೆ ಬರ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಆಲೂರು, ನಾಡಾ, ಹಕ್ಲಾಡಿ ಗ್ರಾಮ ಪಂಚಾಯಿತಿ ಕೃಷಿ ಭೂಮಿ ಹಸಿರು, ಬಾವಿಗಳ ನೀರಿನ ಮಟ್ಟ ಹೆಚ್ಚಿಸಿದ ಸೌಪರ್ಣಿಕಾ ಏತ ನೀರಾವರಿ ಡ್ಯಾಮ್ ಬುಡದಲ್ಲಿರುವವರು ನೀರಿಗಾಗಿ ಪರದಾಡುತ್ತಿದ್ದಾರೆ.

    ಹಡಿಲು ಬಿದ್ದ ಕೃಷಿ ಭೂಮಿ, ಕೆಂಪಾಗುತ್ತಿರುವ ಅಡಕೆ ಮರ, ಬಾಡುತ್ತಿರುವ ಬಾಳೆ, ಬಾವಿಯಲ್ಲೂ ನೀರಿಲ್ಲ. ಆಲೂರು ಗ್ರಾಮ ಪಂಚಾಯಿತಿ ಮಾವಿನಗುಳಿ ಸ್ಥಿತಿ. ಮಾವಿನಗುಳಿ ಮೂಲಕ ಪೈಪ್‌ಲೈನ್ ನೀರು ಹರಿದರೂ ಕುಡಿಯುವುದಕ್ಕೂ ನೀರಿಲ್ಲ. ಮುಂದಾಲೋಚನೆಯಿಲ್ಲದೆ ಅಭಿವೃದ್ಧಿ ಯೋಜನೆ ರೂಪಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಮಾವಿನಗುಳಿ ಪ್ರದೇಶ ಪ್ರತ್ಯಕ್ಷ ಸಾಕ್ಷಿ.

    ಸೌಪರ್ಣಿಕಾ ನದಿ ಹರಿಯುತ್ತಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ಎದುರು ಬೈಲಲ್ಲಿ ಡ್ಯಾಮ್ ಕಟ್ಟಿ ಮಾವಿನಗುಳಿ ಬಳಿ ಚೆಕ್ ಡ್ಯಾಮ್ ನಿರ್ಮಿಸಿ ಅಲ್ಲಿಂದ ಲಿಫ್ಟ್ ಮೂಲಕ ನೀರು ಹರಿಸಲಾಗುತ್ತಿದೆ. ಆಲೂರು, ನಾಡಾ, ಹರ್ಕೂರು, ನಾರ್ಕಳಿ, ಬಾರಂದಾಡಿ, ಹಕ್ಲಾಡಿ, ಕೆಂಬೈಲು, ತಾರಿಬೇರು ಪರಿಸರದ ನೂರಾರು ಎಕ್ರೆ ಕೃಷಿ ಭೂಮಿಗೆ ನೀರು ಬಾವಿಗಳ ನೀರಿನ ಮಟ್ಟ ಕಾದುಕೊಂಡರೂ ಪೋಲಾಗುವ ನೀರು, ದುರ್ಬಳಕೆ ನೀರಿನಲ್ಲಿ ಕಾಲು ಭಾಗ ಹರಿಸಿದ್ದರೂ ಇಲ್ಲಿನ ಜನ, ಕೃಷಿ ಉದ್ಧಾರವಾಗುತ್ತಿತ್ತು.

    ಸೌಪರ್ಣಿಕಾ ಏತ ನೀರಾವರಿ ಯೋಜನೆ ನೀರಿನ ವರ್ತುಲವನ್ನೇ ಬದಲಾಯಿಸಿದೆ. ಮಾವಿನಗುಳಿಯಲ್ಲಿ ಫೆಬ್ರವರಿಯಲ್ಲೇ ಬಾವಿ ನೀರು ಖಾಲಿ. 500 ರೂ. ತೆತ್ತು ನೀರು ವಿಕ್ರಯಿಸುವ ಸ್ಥಿತಿ ಸೃಷ್ಟಿಸಿದೆ. ಏತ ನೀರಾವರಿಗೆ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಆರಂಭದಲ್ಲಿ ನೀರು ಕೊಡುವ ಭರವಸೆ ನೀಡಿ ಕಾಮಗಾರಿ ಆರಂಭಿಸಿದ್ದರೂ ಈಗ ಮಾವಿನಗುಳಿ ಜನರ ಬವಣೆ ಕೇಳುವವರಿಲ್ಲ.

    ಮತ್ತೆ 50 ಲಕ್ಷ ರೂ. ಅನುದಾನ: ಏತ ನೀರಾವರಿ ಕಳಪೆ ಕಾಮಗಾರಿಗೆ ನೀರು ಹರಿದುದ್ದಕ್ಕಿಂತ ಪೋಲಾದುದೇ ಹೆಚ್ಚು. 96 ಕೋಟಿ ರೂ. ಯೋಜನೆ ಇದಾಗಿದ್ದು, ಮಾವಿನಗುಳಿಯಿಂದ ಪೈಪ್‌ಲೈನ್ ಮೂಲಕ ಹರಿವ ನೀರು ಹಾಡಿಹಕ್ಲಲ್ಲಿ ಸೋರಿ ಇಡೀ ಆಲೂರು ಮುಳುಗಡೆ ಪ್ರದೇಶದಂತೆ ಕಾಣುವಂತೆ ಮಾಡಿತ್ತು. ಡೈವರ್ಶನ್, ನೀರು ಸೋರಿಕೆ, ಪೋಲಾಗುತ್ತಿರುವ ಬಗ್ಗೆ ವಿಜಯವಾಣಿ ಸರದಿ ವರದಿ ಮಾಡಿದ್ದು, ಅಂದಿನ ಸಿಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಎಸಿ ಶಿಲ್ಪಾನಾಗ್ ಸ್ಥಳಕ್ಕೆ ಭೇಟಿ ನೀಡಿ, ವಾರಾಹಿ ಇಂಜಿನಿಯರ್ ತರಾಟೆಗೆ ತೆಗೆದು ಕೊಂಡಿದ್ದಲ್ಲದೆ, ಆಲೂರು ಪರಿಸರದಲ್ಲಿ ನಿಂತ ನೀರು ಕಣ್ಣಾರೆ ಕಂಡಿದ್ದರು. ಏತ ನೀರಾವರಿ ಸಮಸ್ಯೆ ಬಗ್ಗೆ ಡಿಸಿ ಗಮನಕ್ಕೆ ತರುವುದಾಗಿ ಹೇಳಿದ್ದು, ಪೈಪ್‌ಲೈನ್ ತುರ್ತು ದುರಸ್ತಿಗೆ 10 ಲಕ್ಷ ರೂ.ಅನುದಾನ ನೀಡಿದ್ದರು. ಪ್ರಸಕ್ತ 50 ಲಕ್ಷ ರೂ. ವೆಚ್ಚದಲ್ಲಿ ಮತ್ತೆ ಪೈಪ್‌ಲೈನ್, ಡೈವರ್ಶನ್ ದುರಸ್ತಿ ಮಾಡಿದ್ದು, ಕಳಪೆ ಕಾಮಗಾರಿ, ಅದಕ್ಕೆ ಓಕೆ ಮಾಡಿದ ಇಂಜಿನಿಯರ್ ಬಗ್ಗೆ ತುಟಿ ಬಿಚ್ಚದಿರುವುದು ಅಚ್ಚರಿ.

    ಕಳೆದ ಆರು ವರ್ಷದಿಂದ ಸಮಸ್ಯೆ: ಮಾವಿನಗುಳಿ ಪರಿಸರ ನಿವಾಸಿಗಳು ಕಳೆದ ಆರು ವರ್ಷದಿಂದ ನೀರಿನ ಸಮಸ್ಯೆಗೆ ಸಿಲುಕಿದ್ದಾರೆ. ಹಿಂದೆ ಬೇಸಿಗೆ ಅಖೈರಿಗೆ ನೀರಿನ ಸಮಸ್ಯೆ ಕಾಡಿದರೂ, ಎಲ್ಲ ಬಾವಿಗಳಲ್ಲಿ ನೀರು ಖಾಲಿಯಾಗುತ್ತಿರಲ್ಲಿ. ಏತ ನೀರಾವರಿ ಮೂಲಕ ಅತ್ಯಧಿಕ ಅಶ್ವಶಕ್ತಿಯ ಮೋಟಾರ್ ಬಳಸಿ ಚಾನಲ್ಲಿಗೆ ನೀರು ಹಾಯಿಸುವುದರಿಂದ ಅಂತರ್ಜಲ ಮಟ್ಟ ಕುಸಿದು ಬಾವಿ ನೀರು ಬರಿದಾಗುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಮಾವಿನಗುಳಿ, ಹುಲಿಯನಕೊಡ್ಲು, ಅಬ್ಬಿಕಲ್ಲು, ನರ್ಲಗುಳಿ, ಮೂಡುಕೊಡ್ಲು ಪ್ರದೇಶದ 30ಕ್ಕೂ ಮಿಕ್ಕ ಮನೆಗಳಿಗೆ ನೀರಿಲ್ಲ. ಮನೆಗೊಂದರಂತೆ ಬಾವಿಯಿದ್ದರೂ ಬರಿದಾಗಿದೆ.

    ಮಾವಿನಗುಳಿ ಪರಿಸರದಲ್ಲಿ ಕುಡಿಯಲು, ಕೃಷಿಗೆ ನೀರಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾವಿನಗುಳಿಗೆ ವಾರಾಹಿ ನೀರು ಡೈವರ್ಶನ್‌ನಿಂದ ಪೈಪ್‌ಲೈನ್ ಮಾಡಿ, ನಳ್ಳಿ ವ್ಯವಸ್ಥೆ ಮಾಡುವುದಕ್ಕೆ 50 ಲಕ್ಷ ರೂ. ಅನುದಾನ ಬೇಕಿದ್ದು, ಅಷ್ಟು ದೊಡ್ಡ ಹಣ ಒದಗಿಸಲು ಗ್ರಾಪಂ ಸಮರ್ಥವಾಗಿಲ್ಲ. ನೀರಿನ ಸಮಸ್ಯೆ ಬಗ್ಗೆ ಶಾಸಕರ, ಸಂಸದರ ಗಮನಕ್ಕೆ ತಂದು ಅನುದಾನ ಸಹಕಾರ ನೀಡಿದರೆ ಮಾವಿನಗುಳಿ ನೀರಿನ ಸಮಸ್ಯೆ ಪರಿಹಾರ ಸಾಧ್ಯ.
    ಸುಬ್ಬಣ್ಣ ಶೆಟ್ಟಿ ಅಧ್ಯಕ್ಷ ಆಲೂರು ಗ್ರಾಮ ಪಂಚಾಯಿತಿ

    ಸೌಪರ್ಣಿಕಾ ನದಿಗೆ ಡ್ಯಾಂ ಆಗುವ ಮುನ್ನ ನಮಗೆ ನೀರಿನ ಸಮಸ್ಯೆಯಿರಲಿಲ್ಲ. ಆರು ವರ್ಷದಿಂದ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಕುಡಿಯುವ ನೀರಿಗಾಗಿ 300 ರೂ.ಕೊಟ್ಟ ಪಡೆದರೂ ಜಾನುವಾರ ಇನ್ನಿತರ ವ್ಯವಸ್ಥೆಗೆ ಕಷ್ಟವಾಗುತ್ತದೆ. ಭತ್ತದ ಕೃಷಿ ಕ್ಷೀಣಗೊಂಡಿದೆ. ಮಳೆಗಾಲದಲ್ಲಿ ಅಡಕೆ, ತೆಂಗು ಚಿಗುರಿದರೆ, ಬೇಸಿಗೆಯಲ್ಲಿ ಹೆಡೆ ಕಳಚಿ ಬಿದ್ದು, ಗೊನೆ ಬಿಡುವುದಿಲ್ಲ. ನಮ್ಮೂರಿನ ನೀರಿನ ಸಮಸ್ಯೆ ಪರಿಹಾರ ಮಾಡದಿದ್ದರೆ ಗ್ರಾಪಂ ಮುಂದೆ ಧರಣಿ ನಡೆಸುತ್ತೇವೆ.
    ಮಾಲತಿ, ಗೃಹಿಣಿ ಮಾವಿನಗುಳಿ

    ಕೃಷಿಯನ್ನೆ ನಂಬಿದವರಿಗೆ ಕೃಷಿ ಕೈಕೊಟ್ಟರೆ ಬದುಕುವುದು ಕಷ್ಟ. ಕುಡಿಯೋದಕ್ಕೆ ನೀರು ಸಿಗದ ಮೇಲೆ ಕೃಷಿ ಉಳಿಸಿಕೊಳ್ಳುವ ಮಾರ್ಗ ಕಾಣುತ್ತಿಲ್ಲ. ವಾರಾಹಿ ನೀರಾವರಿ ಇಲಾಖೆ ನಮಗೂ ನೀರು ಪೂರೈಕೆ ಮಾಡಬೇಕು. ಇನ್ನೇನು ಗ್ರಾಪಂ ಚುನಾವಣೆ ಬರಲಿದ್ದು, ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ.
    ನಾರಾಯಣ ದೇವಾಡಿಗ, ಕೃಷಿಕ ಮಾವಿನಗುಳಿ

    ಮಾವಿನಗುಳಿ ಪ್ರದೇಶದಿಂದ 1 ಕೀ.ಮೀ. ಅಂತರದಲ್ಲಿ ಹುಂತಗೋಳಿಯಲ್ಲಿ ಕಿಂಡಿ ಆಣೆಕಟ್ಟು, ಕಮ್ ಬ್ರಿಜ್ ಮಂಜೂರಾಗಿದ್ದು, ಇನ್ನೊಂದು ವರ್ಷದಲ್ಲಿ ಕಾಮಗಾರಿ ಸಂಪೂರ್ಣವಾದ ನಂತರ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಮಾವಿನಗುಳಿ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಪಂ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿದ್ದು, ಕುಡಿಯುವ ನೀರು ಸಮಸ್ಯೆಗೆ ಪರಿಹಾರ ನೀಡುತ್ತಿದೆ.
    ಬಾಬು ಶೆಟ್ಟಿ ಮಾಜಿ ಸ್ಥಾಯಿ ಸಮಿತಿ ಸದಸ್ಯ ಜಿಪಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts