More

    ಮೀನು ಮಾರಾಟಕ್ಕಿಲ್ಲ ಸೂಕ್ತ ವ್ಯವಸ್ಥೆ

    ಅವಿನ್ ಶೆಟ್ಟಿ ಉಡುಪಿ

    ಕೊರಂಗ್ರಪಾಡಿ ಜಂಕ್ಷನ್‌ನಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. 15 ವರ್ಷಗಳಿಂದ ಇಲ್ಲಿನ ಪರಿಸರದಲ್ಲಿ ಮೀನು ಮಾರಾಟ ಮಾಡುತ್ತಿರುವ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಸುರಿಯುವ ಮಳೆ, ಸುಡು ಬಿಸಿಲಲ್ಲೇ ಮೀನು ಮಾರಾಟ ಮಾಡುವ ಸ್ಥಿತಿ ಇದೆ.
    ಮಲ್ಪೆ ತೊಟ್ಟಂನ ಸುಂದರಿ, ಪಡುಕೆರೆಯ ಜಯಂತಿ, ಸೀತಾ, ಉದ್ಯಾವರ ಜಯಂತಿ, ಪಡುವರಿಯ ಸುಮತಿ ಹಲವಾರು ವರ್ಷಗಳಿಂದ ಇಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಇವರಿಂದ ಕೊರಂಗ್ರಪಾಡಿ, ಬೈಲೂರು ಸುತ್ತಮುತ್ತ ಜನರು ಮೀನು ಖರೀದಿಸಲು ಅನುಕೂಲವಾಗಿದೆ. ಮಹಿಳೆಯರು ಬೆಳಗ್ಗೆ ಮಲ್ಪೆ ಬಂದರಿನಿಂದ ಮೀನು ಹಿಡಿದುಕೊಂಡು ಕೊರಂಗ್ರಪಾಡಿ ಜಂಕ್ಷನ್‌ಗೆ ಬರುತ್ತಾರೆ. ರಾತ್ರಿ 7.30 -8ರವರೆಗೂ ವ್ಯಾಪಾರ ಮಾಡುತ್ತಾರೆ. ಇಲ್ಲಿ ರಾತ್ರಿ ಸರಿಯಾದ ಲೈಟ್ ವ್ಯವಸ್ಥೆಯೂ ಇಲ್ಲ.

    ತಾತ್ಕ್ಕಾಲಿಕ ವ್ಯವಸ್ಥೆ ಕಲ್ಪಿಸಿ: ಕೊರಂಗ್ರಪಾಡಿ ಪ್ರದೇಶದ ಕೆಲವು ಭಾಗ ನಗರಸಭೆ, ಅಲೆವೂರು ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ವ್ಯವಸ್ಥೆ ಸರಿಪಡಿಸಲು ಸಾಕಷ್ಟು ಬಾರಿ ಮೀನುಗಾರರು ಮನವಿ ಸಲ್ಲಿಸಿದ್ದಾರೆ. ಮೀನು ಮಾರಾಟದ ಮಹಿಳೆಯರನ್ನು ಇಲ್ಲಿಂದ ಎಬ್ಬಿಸಲು ಕೆಲವರು ಪ್ರಯತ್ನ ಮಾಡಿದ್ದು, ಪೊಲೀಸರನ್ನು ಕೂಡ ಕರೆಸಿ ಎಬ್ಬಿಸುವ ಪ್ರಯತ್ನ ಮಾಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಾತ್ಕ್ಕಾಲಿಕ ವ್ಯವಸ್ಥೆ ಕಲ್ಪಿಸಲು ಸ್ಥಳಕ್ಕೆ ಪರಿಶೀಲಿಸಿದ್ದು, ಕೆಲವರ ಆಕ್ಷೇಪದಿಂದ ಅದು ಸಾಧ್ಯವಾಗಲಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ. ರಸ್ತೆ ಬದಿ ಸುಡು ಬಿಸಿಲಲ್ಲಿ ಕುಳಿತು ಮೀನು ವ್ಯಾಪಾರ ಮಾಡುವ ಮಹಿಳೆಯರ ಸ್ಥಿತಿ ನೋಡಲಾಗುವುದಿಲ್ಲ. ಕೊರಂಗ್ರಪಾಡಿ ವಿಜಯ ಬ್ಯಾಂಕ್ ಸಮೀಪ ಸ್ವಲ್ಪ ಸರ್ಕಾರಿ ಜಾಗವಿದ್ದು, ಸಂಬಂಧಿತರು ಸಣ್ಣ ಮಟ್ಟದಲ್ಲಿ ತಾತ್ಕ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ ಸ್ಥಳೀಯರಾದ ಸದಾನಂದ ಅಂಚನ್.

    ಸ್ಥಳೀಯ ವೈದ್ಯರಿಂದ ಪ್ರಯತ್ನ: ಮೀನು ಮಾರಾಟ ಮಾಡುವ ಮಹಿಳೆಯರ ಸಂಕಷ್ಟ ನೋಡಲಾಗುವುದಿಲ್ಲ. ಮಳೆ, ಬಿಸಿಲಿನಲ್ಲಿ ವ್ಯಪಾರ ಮಾಡುತ್ತಾರೆ. ಅವರಿಗೊಂದು ಸಣ್ಣದಾಗಿ ತಾತ್ಕಲಿಕ ವ್ಯವಸ್ಥೆ ಮಾಡಿಸಿಕೊಡಲು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನಾದರೂ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿ ಡಾ.ಮನೋಹರ್. ಮಹಿಳೆಯರು ದೊಡ್ಡ ಬೇಡಿಕೆ ಇಟ್ಟಿಲ್ಲ. ಸಂಬಂಧಪಟ್ಟವರು ಜಾಗವನ್ನು ಗುರುತಿಸಿ ವ್ಯವಸ್ಥೆ ಮಾಡಿದಲ್ಲಿ ನಾವೊಂದಿಷ್ಟು ದಾನಿಗಳು ಸೇರಿಕೊಂಡು ತಾತ್ಕಲಿಕ ವ್ಯವಸ್ಥೆ ಮಾಡಿಕೊಡುತ್ತೇವೆ.

    ಕೊರಂಗ್ರಪಾಡಿ ಜಂಕ್ಷನ್‌ನಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚಿಸಿ ಮೀನು ಮಾರಾಟ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
    -ಯಶಪಾಲ್ ಸುವರ್ಣ, ಅಧ್ಯಕ್ಷ, ದ.ಕ, ಉಡುಪಿ ಮೀನು ಮಾರಾಟ ಫೆಡರೇಶನ್

    ಹಲವು ವರ್ಷಗಳಿಂದ ಇಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದೇವೆ. ಬಿಸಿಲು, ಮಳೆಯಿಂದ ತುಂಬ ಕಷ್ಟಪಡುತ್ತಿದ್ದೇವೆ. ಕುಳಿತು ವ್ಯಾಪಾರ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಸಾಕು.
    – ಸುಂದರಿ, ಮೀನು ಮಾರಾಟ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts