More

    ಎಟಿಎಂಗಳಲ್ಲಿಲ್ಲ ಸುರಕ್ಷತಾ ಕ್ರಮ, ಸ್ಯಾನಿಟೈಸರ್ ಇಲ್ಲದೆ ಕರೊನಾ ಭೀತಿ 

    ಗೋಪಾಲಕೃಷ್ಣ ಪಾದೂರು ಉಡುಪಿ
    ಕರೊನಾ ತಡೆಗೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ದಿನಕ್ಕೆ ನೂರಾರು ಮಂದಿ ಬಳಸುವ ಬಹುತೇಕ ಎಟಿಎಂಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

    ಉಡುಪಿ ಜಿಲ್ಲೆಯಲ್ಲಿ 457, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 826 ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಗರಗಳಲ್ಲಿ ಪ್ರಮುಖ ಬ್ಯಾಂಕ್ ಶಾಖೆಗೆ ಹೊಂದಿಕೊಂಡಿರುವ ಎಟಿಎಂಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿಯಿದ್ದು, ಇವರು ಸ್ಯಾನಿಟೈಸರ್ ನೀಡುತ್ತಾರೆ. ಉಡುಪಿ ನಗರದಲ್ಲಿ ಕೇವಲ 3 ಕಡೆ ಇಂಥ ವ್ಯವಸ್ಥೆಗಳಿವೆ. ಉಳಿದ ಕಡೆ ಸ್ಯಾನಿಟೈಸರ್ ವ್ಯವಸ್ಥೆ ಇಲ್ಲ.

    ಕಳ್ಳರ ಕಾಟ:ಲಾಕ್‌ಡೌನ್ ಆರಂಭದ ದಿನಗಳಲ್ಲಿ ಅನೇಕ ಎಟಿಎಂಗಳಲ್ಲಿ ಸ್ಯಾನಿಟೈಸರ್ ಬಾಟಲಿಗಳನ್ನು ಇಡಲಾಗಿತ್ತು. ಸ್ಯಾನಿಟೈಸರ್ ಕೊರತೆ ಇದ್ದ ಆ ದಿನಗಳಲ್ಲಿ ಕಿಡಿಗೇಡಿಗಳು ಅವುಗಳನ್ನು ಕಳವು ಮಾಡಿದ್ದರು. ಬಳಿಕ ಬ್ಯಾಂಕ್‌ಗಳು ಸ್ಯಾನಿಟೈಸರ್ ಇಡುವ ಗೋಜಿಗೆ ಹೋಗಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಸ್ಯಾನಿಟೈಸರ್ ಕೊರತೆ ಇಲ್ಲ. ಹಾಗಾಗಿ ಅದನ್ನು ಇಡುವುದು ಬ್ಯಾಂಕ್‌ಗಳಿಗೆ ಕಷ್ಟದ ಕೆಲಸವಲ್ಲ.
    ಹೆದ್ದಾರಿ ಬದಿ ಅಪಾಯ ಜನರು ಈಗ ಬ್ಯಾಂಕಿಗೆ ಹೋಗುವ ಬದಲು ಎಟಿಎಂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಚ್ಚಿಕೊಂಡಿದ್ದಾರೆ. ಜೊತೆಯಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಅಗತ್ಯವಸ್ತುಗಳ ಪೂರೈಕೆದಾರರು, ತುರ್ತು ಕಾರಣಕ್ಕೆ ಬರುವವರೂ ಇದ್ದಾರೆ. ಹಾಗಾಗಿ ಎಟಿಎಂಗಳಲ್ಲಿ ಮುನ್ನೆಚ್ಚರಿಕೆ ಅತಿ ಅಗತ್ಯ.

    ಎಟಿಎಂ ಅಪಾಯಕಾರಿ ಹೇಗೆ?:ಎಟಿಎಂ ಕೇಂದ್ರಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರುತ್ತದೆ. ಇನ್ನು ಕೆಲವೆಡೆ 2 ಮಷಿನ್‌ಗಳಿರುತ್ತವೆ. ಅಲ್ಲಿ ಸಾಮಾಜಿಕ ಅಂತರ ಬಹುಕಷ್ಟ. ಜತೆಗೆ ಎಟಿಎಂ ಮಷಿನ್, ಬಾಗಿಲನ್ನು ಮುಟ್ಟುವುದು ಅಪಾಯಕಾರಿ. ಸೋಂಕಿತರು ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿದ್ದರೆ ವೈರಸ್ ಹರಡುವುದು ಖಂಡಿತ ಎನ್ನುತ್ತಾರೆ ವೈದ್ಯರು.

    ಎಟಿಎಂಗಳಿಗೆ ಅನೇಕ ಮಂದಿ ಭೇಟಿ ನೀಡುವುದರಿಂದ ಅಪಾಯ ಸಾಧ್ಯತೆ ಇದ್ದು, ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕು. ಈ ಸೌಲಭ್ಯಕ್ಕಾಗಿ ಗ್ರಾಹಕರಿಂದ ವಾರ್ಷಿಕ ಹೆಚ್ಚುವರಿ ದರ ಪಡೆದರೂ ತೊಂದರೆ ಇಲ್ಲ. ಜನರು ಎಟಿಎಂ ಮಷಿನ್ ಮುಟ್ಟುವ ಮೊದಲು ಹಾಗೂ ಹಣ ಪಡೆದ ಬಳಿಕ ಸ್ಯಾನಿಟೈಸರ್‌ನಲ್ಲಿ ಕೈ ತೊಳೆಯಬೇಕು. ಒಮ್ಮೆ ತೆಗೆದಿಟ್ಟ ನೋಟುಗಳನ್ನು ಒಂದು ದಿನದ ಮಟ್ಟಿಗೆ ಮುಟ್ಟದೆ ಇರುವುದು ಉತ್ತಮ.
    – ಡಾ.ಶಶಿಕಿರಣ್, ನೋಡಲ್ ವೈದ್ಯಾಧಿಕಾರಿ, ಕೋವಿಡ್ ನಿಗದಿತ ಅಸ್ಪತ್ರೆ ಉಡುಪಿ

    ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರೊನಾ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಡುವುದು ಅಯಾ ಬ್ಯಾಂಕ್‌ಗಳ ಜವಾಬ್ದಾರಿ. ಜಿಲ್ಲಾಡಳಿತ ರೂಪಿಸಿದ ನಿಯಮಗಳನ್ನು ಉಲ್ಲಂಘಿಸುವವರಿಗೆ ನೋಟಿಸ್ ಜಾರಿ ಮಾಡುತ್ತೇವೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ದ.ಕ. ಜಿಲ್ಲೆಯ ಎಟಿಎಂಗಳಲ್ಲಿ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ದಿನಕ್ಕೆ 2 ಬಾರಿ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗುತ್ತಿದೆ. ಬ್ಯಾಂಕ್‌ನಲ್ಲಿ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕವೇ ಪ್ರವೇಶ ನೀಡಲಾಗುತ್ತಿದೆ. ಜಿಲ್ಲೆಯ ಎಟಿಎಂಗಳಲ್ಲಿ ಸ್ಯಾನಿಟೈಸರ್ ಬಾಟಲಿ ಇಡುವಂತೆ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ.
    – ಪ್ರವೀಣ್ ಎಂ.ಪಿ, ಲೀಡ್ ಬ್ಯಾಂಕ್ ಮ್ಯಾನೇಜರ್, ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts