More

    ಪ್ರಚೋದನಾಕಾರಿ ಬ್ಯಾನರ್‌ಗಳಿಗೆ ಅವಕಾಶ ಬೇಡ: ಅಬ್ದುಲ್ ಅಜೀಂ

    ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಪ್ರಚೋದನಾಕಾರಿ ಕಟೌಟ್‌ಗಳು, ಬ್ಯಾನರ್, ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು. ಒಂದೊಮ್ಮೆ ಅವಕಾಶ ನೀಡುವುದೆ ಆದರೆ ಓರ್ವ ಅಧಿಕಾರಿ ನೇಮಿಸಿ ಆತ ಪರಿಶೀಲಿಸಿ ಬ್ಯಾನರ್‌ಗಳಲ್ಲಿ ಪ್ರಚೋದನಕಾರಿ ಅಂಶಗಳಿಲ್ಲ ಎಂದು ವರದಿ ನೀಡಿದ ಬಳಿಕ ಅನುಮತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಭಿಪ್ರಾಯಪಟ್ಟರು.

    ರಾಗಿಗುಡ್ಡ ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಅವರು, ಕಾನೂನು, ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
    ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟ ಪ್ರಕರಣ ಕೆಟ್ಟ ಘಟನೆ. ಕೆಲವೇ ತಾಸಿನಲ್ಲಿ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿರುವುದು ಉತ್ತಮ ಕಾರ್ಯ. ಈ ಘಟನೆಗೆ ಸಂಬಂಧಿಸಿದಂತೆ 50 ರಿಂದ 60 ಜನರನ್ನು ಬಂಧಿಸಿ, 32 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
    ಈ ರೀತಿಯ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ದಿಟ್ಟ ನಿಲುವುಗಳನ್ನು ತಳೆಯಬೇಕು. ಧಾರ್ಮಿಕ ಮೆರವಣಿಗೆ ವೇಳೆ ಬಹಳ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕು. ಅಂತಹ ಮೆರವಣಿಗೆಯಿಂದ ಕಾನೂನು, ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗುವುದು ಎಂದು ಕಂಡು ಬಂದರೆ ಅನುಮತಿ ನೀಡಲೇಬಾರದು ಎಂದು ಹೇಳಿದರು.
    ಜಿಲ್ಲೆಯಲ್ಲಿ ಕೋಮು ಸೂಕ್ಷ್ಮತೆಯುಳ್ಳ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸಿ, ಸೌಹಾರ್ದತೆ, ಶಾಂತಿ ಮೂಡಿಸಲು ಪ್ರಯತ್ನಿಸಬೇಕು. ಶಾಂತಿ ಸಭೆಗಳನ್ನು ಕೇವಲ ಠಾಣಾ ವ್ಯಾಪ್ತಿಯಲ್ಲಿ ಮಾಡಿದರೆ ಸಾಲದು. ಸೂಕ್ಷ್ಮವಾದ ಮೊಹಲ್ಲಾಗಳನ್ನು, ಸಮುದಾಯಗಳನ್ನು ಗುರುತಿಸಿ, ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಬೇಕು ಎಂದು ತಿಳಿಸಿದರು.
    ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಜ್, ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರೀತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts