More

    ಯುಟಿಪಿ ಕಾಲುವೆಗಳಿಗಿಲ್ಲ ದುರಸ್ತಿ ಭಾಗ್ಯ

    ರಾಣೆಬೆನ್ನೂರ: ಮುಂಗಾರು ಮಳೆ ಕುಂಠಿತವಾದರೆ ಬೆಳೆ ಸಂರಕ್ಷಣೆಗಾಗಿ ತಾಲೂಕಿನ ರೈತರಿಗೆ ತುಂಗಾ ಮೇಲ್ದಂಡೆ ಯೋಜನೆಯ (ಯುಟಿಪಿ) ಕಾಲುವೆ ನೀರೇ ಗತಿ. ಆದರೆ, ಈ ಬಾರಿ ಕಾಲುವೆ ನೀರನ್ನು ನಂಬಿಕೊಂಡ ಅನ್ನದಾತರಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ.

    ಶಿವಮೊಗ್ಗ ಜಿಲ್ಲೆಯ ಗಾಜನೂರು ಭದ್ರಾ ಜಲಾಶಯದಿಂದ ಈಗಾಗಲೇ ಯುಟಿಪಿ ಮುಖ್ಯ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಎರಡ್ಮೂರು ದಿನದಲ್ಲಿ ನೀರು ಹಾವೇರಿ ಜಿಲ್ಲೆಯ ಕಾಲುವೆಗಳಿಗೆ ತಲುಪಲಿದೆ. ಆದರೆ, ನೀರು ರೈತರ ಜಮೀನುಗಳಿಗೆ ತಲುಪುವುದು ಅನುಮಾನವಾಗಿದೆ. ಯುಟಿಪಿ ಅಧಿಕಾರಿಗಳು ನಡೆಸಿದ ಕಾಲುವೆಯ ಕಾಮಗಾರಿ ಕಳಪೆ ಆರೋಪ ಒಂದೆಡೆ, ಮತ್ತೊಂದೆಡೆ ಕಾಲುವೆಗಳಲ್ಲಿ ಬೆಳೆದ ಗಿಡಗಂಟಿ ತೆರವುಗೊಳಿಸಿ ಹೂಳೆತ್ತುವ ಕಾಮಗಾರಿ ಕೈಗೊಳ್ಳದಿರುವುದರಿಂದ ಜಮೀನುಗಳಿಗೆ ನೀರು ತಲುಪುವುದಕ್ಕೆ ಅನುಮಾನ ಎನ್ನುತ್ತಾರೆ ರೈತರು. ಕಾಲುವೆ ದುರಸ್ತಿ ಕಾರ್ಯ ಸಮರ್ಪಕವಾಗಿ ಕೈಗೊಳ್ಳದ ಕಾರಣ ಕಳೆದ ವರ್ಷ ನೀರಿನ ಹರಿವು ಕುಂಠಿತವಾಗಿ ಅಲ್ಲಲ್ಲಿ ಕಾಲುವೆಗಳು ಒಡೆದು ಹೋಗಿದ್ದವು.

    ಸಂಕಷ್ಟದಲ್ಲಿ ರೈತರು: ಕಳೆದ ಎರಡ್ಮೂರು ವರ್ಷದಲ್ಲಿ ರಾಣೆಬೆನ್ನೂರ ತಾಲೂಕಿನ ತೆರೆದಹಳ್ಳಿ, ಚಳಗೇರಿ, ಕಮದೋಡ, ಚಿಕ್ಕಮಾಗನೂರ ಹಾಗೂ ಹಿರೇಕೆರೂರ ತಾಲೂಕಿನ ಕುಡಪಲಿ ಸೇರಿ ವಿವಿಧೆಡೆ ಯುಟಿಪಿ ಕಾಲುವೆ ಒಡೆದಿದ್ದರಿಂದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಆಗ ತಾನೆ ಬಿತ್ತನೆ ಮಾಡಿದ ಬೀಜಗಳೆಲ್ಲ ನೀರು ಪಾಲಾಗಿ ರೈತರು ಸಂಕಷ್ಟಕ್ಕೀಡಾಗಿದ್ದರು.

    ನೀರು ಬರುವ ಮುನ್ನವೇ ಕಾಲುವೆಗಳು ದುರಸ್ತಿಗೊಂಡು ಸಿದ್ಧವಾಗಬೇಕಿತ್ತು. ಆದರೆ, ಕೆಲವೆಡೆ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳು ದುರಸ್ತಿ ಭಾಗ್ಯವನ್ನೇ ಕಂಡಿಲ್ಲ. ಆದ್ದರಿಂದ ಕಾಲುವೆ ನೀರನ್ನೇ ನಂಬಿಕೊಂಡು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆದಿರುವ ರೈತರು ಬೆಳೆ ಸಂರಕ್ಷಣೆಗಾಗಿ ಪರದಾಡುವ ಸಾಧ್ಯತೆ ಇದೆ.

    ಖರ್ಚು ಮಾಡಿದರೂ ದುರಸ್ತಿಯಿಲ್ಲ: ಯುಟಿಪಿ ಕಾಲುವೆಗಳ ದುರಸ್ತಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಸಹ ಕಾಲುವೆ ದುರಸ್ತಿ ಮಾಡಿ, ಹಣ ಖರ್ಚು ಮಾಡಿದ್ದಾರೆ. ಆದರೆ, ಇದು ಕೇವಲ ಲೆಕ್ಕಪತ್ರಕ್ಕೆ ಸೀಮಿತ ಎಂಬಂತಾಗಿದೆ.

    ತಾಲೂಕಿನ ದೇವರಗುಡ್ಡ, ಗಂಗಾಪುರ, ಚಿಕ್ಕಮಾಗನೂರ, ಹಾರೋಗೋಪ್ಪ, ಹನುಮಾಪುರ, ಇಟಗಿ, ಮಾಗೋಡ ಸೇರಿ ವಿವಿಧ ಗ್ರಾಮಗಳ ಬಳಿ ಕಾಲುವೆಯಲ್ಲಿ ಆಳೆತ್ತರದ ಗಿಡಗಳು ಬೆಳೆದು ನಿಂತಿವೆ. ಅಲ್ಲಲ್ಲಿ ಕಾಲುವೆ ಒಡೆದು ಹೋಗಿವೆ. ಪರಿಸ್ಥಿತಿ ಹೀಗಿದ್ದಾಗ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಕಾಮಗಾರಿಯಾದರೂ ಎಲ್ಲಿ ಎಂಬುದು ರೈತರ ಪ್ರಶ್ನೆಯಾಗಿದೆ.

    ಯುಟಿಪಿ ಕಾಲುವೆ ನಿರ್ವಣದಲ್ಲಿ ಅಂದಾಜು ಪತ್ರದ ಪ್ರಕಾರ ಕಾಮಗಾರಿ ನಡೆದಿಲ್ಲ. ಇದರಿಂದಾಗಿ ಈ ಹಿಂದೆ ನಿರ್ವಿುಸಿದ ಕಾಲುವೆ ಒಡೆದು ಹೋಗಿ, ಮರು ನಿರ್ವಿುಸಿದ ಕಾಲುವೆ ಸಹ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಗಿಡಗಂಟಿಗಳು ಬೆಳೆದ ಕಾರಣ ನೀರು ಹರಿದು ಹೋಗಲು ಸಾಧ್ಯವಾಗದ ಸ್ಥಿತಿಯಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

    | ದಿಳ್ಳೆಪ್ಪ ಸತ್ಯಪ್ಪನವರ, ಅಂಕಸಾಪುರ ರೈತ

    ಯುಟಿಪಿ ಕಾಲುವೆ ದುರಸ್ತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯಲು, ಗಿಡಗಂಟಿಗಳನ್ನು ತೆರವುಗೊಳಿಸಲು ಹಾಗೂ ಬಿರುಕು ಬಿಟ್ಟ ಜಾಗದಲ್ಲಿ ಬೇಗ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗುವುದು.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts