More

    ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

    ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಮಹಾರಾಜ ಕಾಲೇಜು ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಶತಮಾನೋತ್ಸವ ಭವನದಲ್ಲಿ ಬುಧವಾರ ಸ್ವಾಮಿವಿವೇಕಾನಂದ ಜಯಂತಿ-ಯುವ ದಿನದ ಪ್ರಯುಕ್ತ ಆಯೋಜಿಸಿದ್ದ ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮ’ ಎಂಬ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸುಪ್ರೀಂ ಕೋರ್ಟ್‌ನಲ್ಲಿರುವ ಸಿಎಎ ವಿಷಯದ ಬಗ್ಗೆ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದು ಬೇಸರ ತರಿಸಿದೆ. ಹುಟ್ಟಿನಿಂದಲೇ ಎಲ್ಲರೂ ಮೇಧಾವಿಗಳಲ್ಲ. ಪ್ರಯತ್ನ, ಶ್ರಮದಿಂದ ಯಶಸ್ಸು ಲಭಿಸುತ್ತದೆ. ಯಾರು ಬೇಕಾದರೂ ಅದನ್ನು ತಮ್ಮದಾಗಿಸಿಕೊಳ್ಳಬಹುದು. ಹಿಂದೆ ಇದ್ದ ಮೌಲ್ಯಗಳು ಇಂದು ಕುಸಿಯುತ್ತಿವೆ, ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ. ತೃಪ್ತಿ, ಮಾನವೀಯತೆ ಎಂಬ ಎರಡು ಮೌಲ್ಯಗಳ ಅಳವಡಿಕೆ ಬಹಳ ಮುಖ್ಯವಾಗಿದೆ ಎಂದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರು ಅಸಮಾನತೆ ಹೋಗಲಾಡಿಸುವ ಉದ್ದೇಶದಿಂದ 10 ವರ್ಷಕ್ಕೆ ಮೀಸಲಾತಿ ಸೀಮಿತಗೊಳಿಸಿದ್ದರು. ಆದರೆ, ಅದು ಇಂದಿಗೂ ಮುಂದುವರಿಯುತ್ತಿದೆ. ಸಮಾನತೆ ಸಾಧಿಸುವವರೆಗೆ ಅದು ಜಾರಿಯಲ್ಲಿರಲಿ. ಆದರೆ, ಮೀಸಲಾತಿಯ ಲಾಭ ಪಡೆದುಕೊಂಡವರೆ ಮತ್ತೆ ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.ಯಾರಿಗೆ ಆ ಸೌಲಭ್ಯ ದೊರೆತಿಲ್ಲವೋ ಅವರಿಗೆ ಅದನ್ನು ದೊರಕಿಸಿಕೊಡುವ ಕಾರ್ಯವಾಗಬೇಕು ಎಂದರು.ನ್ಯಾಯಾಂಗ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳು ಸರಿಯಾಗಬೇಕು. ಹೀಗಾಗಿ, ಕೆಲವು ಪ್ರಕರಣಗಳು ಇತ್ಯರ್ಥವಾಗುವುದಕ್ಕೆ ಹಲವು ವರ್ಷಗಳೇ ಕಳೆದಿರುತ್ತವೆ. ಬೇರೆ ದೇಶಗಳಲ್ಲಿ ಎರಡು ಕೋರ್ಟ್‌ಗಳಲ್ಲಿ ಮಾತ್ರ ಅವಕಾಶ. ಆದರೆ ನಮ್ಮಲ್ಲಿ ನಾಲ್ಕು ಕೋರ್ಟ್‌ಗಳಿವೆ. ಇದರಿಂದ ಅಪರಾಧಿಗಳು ತಪ್ಪು ಮಾಡಿದ್ದರೂ ತಕ್ಷಣಕ್ಕೆ ಶಿಕ್ಷೆಯಾಗುವುದಿಲ್ಲ. ಅಲ್ಲದೆ, ತಪ್ಪಿಸಿಕೊಳ್ಳಲು ಹೆಚ್ಚು ಅವಕಾಶ ದೊರೆಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಿರ್ಭಯಾ ಪ್ರಕರಣದ ಬಾಲಾಪರಾಧಿಯ ತಪ್ಪನ್ನು ಮನ್ನಿಸಿ ಪಶ್ಚಾತಾಪಕ್ಕೆ ಅವಕಾಶ ಕಲ್ಪಿಸಿಕೊಡಬಹುದಲ್ಲ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ನಿರ್ಭಯಾ ಪ್ರಕರಣದ ಅಪರಾಧಿ ಬಾಲಾಪರಾಧಿಯಲ್ಲ.18 ವರ್ಷದೊಳಗಿನ ಅಪರಾಧಿಗಳನ್ನು ಬಾಲಾಪರಾಧಿ ಎಂದು ಗುರುತಿಸುವುದಕ್ಕಿಂತ 15 ವರ್ಷದೊಳಗಿನ ಅಪರಾಧಿಗಳನ್ನು ಬಾಲಾಪರಾಧಿಗಳು ಎಂದು ಗುರುತಿಸಬೇಕು ಎಂದು ಹೇಳಿದರು.

    ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಮುಖ್ಯ. ಪ್ರಜೆಗಳಿಗಿಂತ ವಿಶೇಷ ಆದ್ಯತೆಯುಳ್ಳ ಝೀರೋ ಟ್ರಾಫಿಕ್‌ನಂತಹ ಕಾನೂನುಗಳಿದ್ದರೆ ತೆಗೆದುಬಿಡಿ. ರಾಜಕಾರಣಿಗಳ ಹಿಂದೆ 15, 16 ಕಾರು ಹೋಗುತ್ತವೆ. ಇದನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಆಶಯ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರವೇ ಎನಿಸುತ್ತದೆ. ಹೀಗಾಗಿ, ಮೌಲ್ಯಗಳನ್ನು ಮೈಗೂಡಿಸಿಕೊಂಡ ಯುವ ಸಮುದಾಯ ರಾಜಕೀಯಕ್ಕಿಳಿದು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

    ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿದರು. ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ, ಆಡಳಿತಾಧಿಕಾರಿ ಡಾ.ಬಿ.ಎನ್.ಯಶೋಧಾ, ಸಂಚಾಲಕಿ ಡಾ.ಡಿ.ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts