More

    ಗಾಂಧಿನಗರ ಶಾಲೆಗಿಲ್ಲ ರಕ್ಷಣೆ, ಜರಿದು ಬಿದ್ದಿದೆ ಆವರಣ ಗೋಡೆ

    ಭರತ್ ಶೆಟ್ಟಿಗಾರ್ ಮಂಗಳೂರು

    ಮಂಗಳೂರು ನಗರ ವ್ಯಾಪ್ತಿಯ ಪ್ರಮುಖ ಸರ್ಕಾರಿ ಶಾಲೆಗಳಲ್ಲಿ ಒಂದಾಗಿರುವ ಉರ್ವ ಮಾರುಕಟ್ಟೆ ಬಳಿಯ ಗಾಂಧಿನಗರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ.

    1 ಎಕರೆ 74 ಸೆಂಟ್ಸ್ ವಿಸ್ತೀರ್ಣ ಪ್ರದೇಶದಲ್ಲಿ ವ್ಯಾಪಿಸಿರುವ ಶಾಲೆಯಲ್ಲಿ 8ನೇ ತರಗತಿವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲಾ ಅವಧಿಯ ನಂತರ ಆವರಣಕ್ಕೆ ಹೊರಗಿನವರು ಅನುಮತಿ ಇಲ್ಲದೆ ಬಂದು ಶಾಲಾ ಸೊತ್ತುಗಳಿಗೆ ಹಾನಿ, ಕಳ್ಳತನ ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ಉಂಟು ಮಾಡುತ್ತಿದ್ದಾರೆ. ಶಾಲೆಯ ಒಂದು ಭಾಗದಲ್ಲಿ ಆವರಣ ಗೋಡೆ ಜರಿದು ಬಿದ್ದು ವರ್ಷ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ. ಅದರ ಮೂಲಕವೂ ಶಾಲಾ ಆವರಣದೊಳಗೆ ಸಾರ್ವಜನಿಕರು, ಅಲೆಮಾರಿಗಳು ಪ್ರವೇಶಿಸುತ್ತಾರೆ ಎನ್ನುತ್ತಾರೆ ಎಸ್‌ಡಿಎಂಸಿ ಪ್ರಮುಖರು.

    ಶಾಲೆಯ ಇನ್ನೊಂದು ಬದಿ(ಪ್ರೆಸ್‌ಕ್ಲಬ್ ಪಕ್ಕ)ಯ ಆವರಣ ಗೋಡೆಯೂ ಜರಿದು ಬೀಳುವ ಹಂತದಲ್ಲಿದ್ದು, ಈ ಬಾರಿಯ ಮಳೆಗಾಲದಲ್ಲಿ ನೆಲಸಮವಾಗುವುದರಲ್ಲಿ ಅನುಮಾನವಿಲ್ಲ. ಬಹಳ ವರ್ಷಗಳ ಹಿಂದೆ ಕಟ್ಟಿರುವ ಆವಣಗೋಡೆಯಾಗಿರುವುದರಿಂದ ಶಿಥಿಲಗೊಂಡಿದ್ದು, ಸಂಪೂರ್ಣ ಆವರಣ ಗೋಡೆಯನ್ನೇ ತೆಗೆದು ಹೊಸದಾಗಿ ನಿರ್ಮಿಸುವ ಅಗತ್ಯವಿದೆ.

    ದಾನಿಯಿಂದ ನೆರವು: ಶಾಲೆಯ ಸಮಸ್ಯೆ ಕುರಿತಂತೆ ತಿಳಿದ ದಾನಿಯೊಬ್ಬರು ಒಂದು ಭಾಗದ ಆವರಣಗೋಡೆಯನ್ನು ಎತ್ತರ ಮಾಡುವುದಕ್ಕೆ ನೆರವು ನೀಡಿದ್ದಾರೆ. ಆವರಣ ಗೋಡೆ ಸ್ವಲ್ಪ ಎತ್ತರವಾದರೆ ಗೋಡೆ ಹಾರಿ ಒಳಕ್ಕೆ ಬರುವವರ ಸಂಖ್ಯೆಯ ಕಡಿಮೆಯಾಗಬಹುದು ಎನ್ನುವ ಭಾವನೆ ಶಿಕ್ಷಕರದ್ದು. ಸದ್ಯ ಇದರ ಕೆಲಸ ಅರಂಭವಾಗಿದೆ.

    ಶಾಲಾ ಮುಂಭಾಗ ತ್ಯಾಜ್ಯ: ಶಾಲಾ ಮುಂಭಾಗದಲ್ಲಿ ತ್ಯಾಜ್ಯ ಸಾಗಾಟದ ವಾಹನ ಬಂದು, ಕಸವನ್ನು ಸಣ್ಣ ವಾಹನದಿಂದ ದೊಡ್ಡ ವಾಹನಕ್ಕೆ ತುಂಬಿಸುವ ಕೆಲಸ ಮಾಡುತ್ತಾರೆ. ಇದರಿಂದ ಆವರಣದಲ್ಲಿ ಅಸಹ್ಯ ವಾಸನೆಯೂ ಹರಡುತ್ತದೆ. ಕೆಲವರು ಅಲ್ಲಿಯೇ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಎಸೆದು ಹೋಗುತ್ತಾರೆ. ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು ತುಂಬಿದ್ದು, ಅದನ್ನು ತೆರವುಗೊಳಿಸುವ ಕೆಲವೂ ಪಾಲಿಕೆಯಿಂದ ನಡೆದಿಲ್ಲ.

    ಶಾಲಾ ಆವರಣ ಗೋಡೆ ಜರಿದು ಬಿದ್ದು ವರ್ಷವೇ ಕಳೆದಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದರೂ, ಇನ್ನೂ ದುರಸ್ತಿಯಾಗಿಲ್ಲ. ಗೇಟಿಗೆ ಬೀಗ ಹಾಕಿದ್ದರೂ, ಶಾಲಾ ಅವಧಿ ಬಳಿಕ, ರಜಾದಿನಗಳಲ್ಲಿ ಜರಿದುಬಿದ್ದ ಜಾಗದಲ್ಲಿ ಆವರಣಗೋಡೆ ಹಾರಿ ಹೊರಗಿನವರು ಶಾಲೆಯೊಳಗೆ ಬರುತ್ತಾರೆ. ಇದರಿಂದಲೂ ಸಮಸ್ಯೆಯಾಗುತ್ತಿದೆ.

    ಯಶೋದಾ, ಮುಖ್ಯ ಶಿಕ್ಷಕಿ

    ಶಾಲಾ ಆವರಣ ಗೋಡೆ ಜರಿದು ಬಿದ್ದಿರುವ ಕುರಿತಂತೆ ಮಾಹಿತಿ ಇಲ್ಲ. ಈ ಕುರಿತಂತೆ ಪರಿಶೀಲಿಸಿ ದುರಸ್ತಿ ಮಾಡಿಸಲು ಸೂಚನೆ ನೀಡಲಾಗುವುದು.

    ಕೆ.ಸುಧಾಕರ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts