More

    ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಿರ್ಬಂಧ, ದ.ಕ. ಡಿಸಿ ಮತ್ತೆ ಖಡಕ್ ಆದೇಶ

    ಮಂಗಳೂರು: ಕೋವಿಡ್ ಮತ್ತೆ ತೀವ್ರಗೊಳ್ಳುವ ಆತಂಕ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತೆ ಆದೇಶ ಹೊರಡಿಸಿದ್ದು, ಯುಗಾದಿ, ಗುಡ್ ಫ್ರೈಡೇ ಇತ್ಯಾದಿ ಹಬ್ಬಗಳ ಸಂದರ್ಭ ಸಾರ್ವಜನಿಕ ಸ್ಥಳಗಳು/ ಮೈದಾನ, ಉದ್ಯಾನಗಳು, ಮಾರುಕಟ್ಟೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಸಮಾರಂಭ, ಸಭೆಗಳನ್ನು ನಡೆಸದಂತೆ ಸೂಚಿಸಿದ್ದಾರೆ.

    ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿ ಜಾತ್ರೆಗಳು, ಮೇಳಗಳಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಅಂತರವನ್ನು ಕಾಪಾಡಿಕೊಳ್ಳದೆ ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲು ಸೂಚಿಸಲಾಗಿದೆ.

    ಕಾರ್ಯಕ್ರಮಗಳಿಗೆ ಮಿತಿ: ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಗೂ ಮಿತಿ ಹೇರಲಾಗಿದೆ. ಮದುವೆ ಸಮಾರಂಭ- ತೆರೆದ ಸ್ಥಳಗಳಲ್ಲಿ 500 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರು, ಜನ್ಮದಿನ ಹಾಗೂ ಇತರೆ ಆಚರಣೆಗಳು ತೆರೆದ ಸ್ಥಳಗಳಲ್ಲಿ 100 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನರು, ಮರಣ ಅಥವಾ ಅಂತ್ಯಕ್ರಿಯೆ ತೆರೆದ ಸ್ಥಳಗಳಲ್ಲಿ 100 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನರು, ಶವ ಸಂಸ್ಕಾರ ಅಥವಾ ಸಮಾಧಿ ಕ್ರಿಯೆ(ಹೂಳುವುದು) 50 ಜನರು, ಇತರೆ ಆಚರಣೆ 100 ಜನರು, ಧಾರ್ಮಿಕ ಆಚರಣೆ ಹಾಗೂ ಕಾರ್ಯಗಳು, ತೆರೆದ ಸ್ಥಳಗಳಲ್ಲಿ 500 ಜನರು, ರಾಜಕೀಯ ಸಮಾವೇಶಗಳು ಅಥವಾ ಕಾರ್ಯಕ್ರಮಗಳು, ತೆರೆದ ಸ್ಥಳಗಳಲ್ಲಿ 500 ಜನರು, ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಆವರಣಗಳ ಮಾಲೀಕರು, ಸಮಾರಂಭಗಳ ಯೋಜಕರು/ಸಂಘಟಕರು ಅಥವಾ ಅತಿಥೇಯರು ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಸ್ವತಃ ಜವಾಬ್ದಾರರಾಗಿರುತ್ತಾರೆ.

    ತಾರಾ ಶ್ರೇಣಿಯ ಹೋಟೆಲ್‌ಗಳು, ಕನಿಷ್ಠ 500 ಜನರು ಸೇರುವ ಸಾಮರ್ಥ್ಯ ಹೊಂದಿರುವ ಮದುವೆ ಸಭಾಂಗಣ/ಛತ್ರಗಳು ಹಾಗೂ ಕನ್ವೆನ್ಶನ್ ಹಾಲ್ ಅಥವಾ ಇಂತಹ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳ ಉಲ್ಲಂಘನೆಯಾದಲ್ಲಿ 10,000 ರೂ. ಹಾಗೂ ಸಾರ್ವಜನಿಕ ಸಮಾರಂಭಗಳು ಅಥವಾ ರ‌್ಯಾಲಿಗಳು ಅಥವಾ ಆಚರಣೆಗಳ ಆಯೋಜಕರಿಗೆ 10,000 ರೂ. ದಂಡ ವಿಧಿಸಲಾಗುವುದು.

    ಮದುವೆ, ಜನ್ಮದಿನ ಮುಂತಾದ ಖಾಸಗಿ ಕಾರ್ಯಕ್ರಮಗಳಲ್ಲಿ ಕೋವಿಡ್ ಸಮುಚಿತ ವರ್ತನೆ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರು, ತಾಲೂಕು ಹಂತದಲ್ಲಿ ಸಂಬಂಧಪಟ್ಟ ತಹಸೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳು ಕ್ರಮ ಕೈಗೊಳ್ಳಬೇಕು ಹಾಗೂ ಮಾರ್ಗಸೂಚಿಉಲ್ಲಂಘನೆಯಾದಲ್ಲಿ ಸೂಚಿಸಿದ ಅಧಿಕಾರಿಗಳು ದಂಡ ವಿಧಿಸಲು ಕ್ರಮಕೈಗೊಳ್ಳಬೇಕು.

    ಈ ಆದೇಶವನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 51 ರಿಂದ 60ರ ಅನ್ವಯ, ಐಪಿಸಿ ಸೆಕ್ಷನ್ 188 ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಸೆಕ್ಷನ್ 4,5 ಮತ್ತು 10 ರಂತೆ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

    ಮಾಸ್ಕ್ ಧರಿಸದವರಿಗೆ ದಂಡ: ಮಾಸ್ಕ್ ಧರಿಸದವರು ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ. ಮುನ್ಸಿಪಲ್ ಕಾರ್ಪೊರೇಷನ್‌ಗಳ ವ್ಯಾಪ್ತಿಯಲ್ಲಿ 250 ರೂ. ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ಮುನ್ಸಿಪಲ್ ಕಾರ್ಪೊರೇಷನ್‌ಗಳ ಹೆಲ್ತ್ ಇನ್ಸ್‌ಪೆಕ್ಟರ್‌ಗಳು, ಮುನ್ಸಿಪಲ್ ಕಾರ್ಪೊರೇಷನ್‌ಗಳ ಬಿಲ್ ಕಲೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಇತರ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳ ಹೆಲ್ತ್‌ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳು, ಗ್ರಾ.ಪಂ ಕಾರ್ಯದರ್ಶಿಗಳು, ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ್‌ಗಳಿಗೆ ಸೂಚಿಸಿದೆ.

    ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳದಿದ್ದರೆ ಈ ಕೆಳಗಿನಂತೆ ದಂಡ ವಿಧಿಸಲಾಗುವುದು. ಹವಾನಿಯಂತ್ರಿತವಲ್ಲದ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ 5,000 ರೂ. ದಂಡ, ಹವಾನಿಯಂತ್ರಿತ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಬ್ರಾಂಡೆಡ್ ಶಾಪ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ 10,000 ರೂ. ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳ ಹೆಲ್ತ್ ಇನ್ಸ್‌ಪೆಕ್ಟರ್‌ಗಳು, ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ್‌ಗಳು, ಪಿಡಿಒ, ಗ್ರಾಪಂ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಗಿದೆ.

    ದ.ಕ. 30, ಉಡುಪಿ 53 ಪಾಸಿಟಿವ್: ದ.ಕ ಜಿಲ್ಲೆಯಲ್ಲಿ ಗುರುವಾರ 30 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣ ಸಂಖ್ಯೆ 35,727 ತಲಪಿದರೆ ಸಕ್ರಿಯ ಪ್ರಕರಣಗಳು 570ಕ್ಕೇರಿವೆ. ಗುರುವಾರ 36 ಮಂದಿ ಡಿಸ್‌ಚಾರ್ಜ್ ಆಗಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಗುರುವಾರ 53 ಮಂದಿಗೆ ಕರೊನಾ ದೃಢಪಟ್ಟಿದೆ. ಇವರಲ್ಲಿ 11 ಮಂದಿ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳು. ಸೋಂಕಿತರಲ್ಲಿ 23 ಮಂದಿ ಉಡುಪಿ, 26 ಕುಂದಾಪುರ, ಓರ್ವ ಕಾರ್ಕಳ ತಾಲೂಕಿನವಾರಿದ್ದಾರೆ. ಮೂರು ಮಂದಿ ಹೊರ ಜಿಲ್ಲೆಯಿಂದ ಬಂದವರು. 8 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 45 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 210 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 510 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts